ಪುಣ್ಯಕೋಟಿ ನಾಡಿನಲ್ಲಿ ಮಾತು ಉಳಿಸಿಕೊಳ್ಳದ ಕಾಂಗ್ರೆಸ್ ಸರಕಾರ- ಕರ್ನಾಟಕಕ್ಕೆ ಭಾರವಾದ ಮುಂಗಡ ಪತ್ರ: ಹರೀಶ್ ಪೂಂಜ

0

ಬೆಳ್ತಂಗಡಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇಂದು ಮಂಡಿಸಿದ 2023-24ನೇ ಸಾಲಿನ ಮುಂಗಡ ಪತ್ರ ನೀರಸ ಹಾಗು ಹಿಂದಿನ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರವನ್ನು ಟೀಕಿಸುವ ರಾಜಕೀಯ ಭಾಷಣದಂತಿತ್ತು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿದ್ದಾರೆ.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಬೇಷರತ್ತಾಗಿ ಘೋಷಿಸಿದ ಐದು ಗ್ಯಾರಂಟಿ ಭಾಗ್ಯಗಳ ಮೇಲೆ ರಾಜ್ಯದ ಜನತೆ ಅಪಾರ ನೀರಿಕ್ಷೆಯೊಂದಿಗೆ ಕಾಯುತ್ತಿದ್ದು, ಇವುಗಳನ್ನು ಮುಂಗೈಗೆ ಬೆಲ್ಲ ಮುಟ್ಟಿಸಿದಂತೆ ಘೋಷಿಸಿ ಹೆಚ್ಚಿನ ಫಲಾನುಭವಿಗಳನ್ನು ಹೊರಗಿಡುವ ಯತ್ನ ನಡೆಸಿ ಕೊಟ್ಟ ಮಾತು ಉಳಿಸಿಕೊಳ್ಳಲಾಗದ ಸರ್ಕಾರವೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ.
ವಿದ್ಯುತ್‌ದರ ಹೆಚ್ಚಳದಿಂದ ತತ್ತರಿಸಿದ ಕೈಗಾರಿಕಾ ವಲಯಕ್ಕೆ ಯಾವುದೇ ಉತ್ತೇಜನ ದೊರಕದಿರುವುದರಿಂದ ಉತ್ಪಾದನೆ ಕುಸಿದು, ನಿರುದ್ಯೋಗ ಪ್ರಮಾಣ ಹೆಚ್ಚಿ, ಬೆಲೆಯೇರಿಕೆಯ ಭೀತಿ ಉಂಟಾಗಿದೆ. ಮೋಟಾರು ವಾಹನ ತೆರಿಗೆ ಏರಿಕೆಯಿಂದ ದ್ವಿಚಕ್ರ ವಾಹನಗಳ ಬೆಲೆ ಏರಿಕೆಯುಂಟಾಗಿ ಯುವಜನತೆಯ ದೈನಂದಿನ ಚಟುವಟಿಕೆ ಕುಂಠಿತಗೊಳ್ಳಲಿದೆ. ಎ.ಪಿ.ಎಂ.ಸಿ ಕಾಯಿದೆ ತಿದ್ದುಪಡಿ ಹಿಂತೆಗೆತದಿಂದ ಕೃಷಿ ವಲಯಕ್ಕೆ ಮಾರಕವಾಗಲಿದೆ. ಅಡಿಕೆ ತೋಟಕ್ಕೆ ಮಾರಕವಾಗಿರುವ ಎಲೆಚುಕ್ಕಿ ರೋಗಕ್ಕೆ ಸೂಕ್ತ ಪರಿಹಾರ ಹಾಗೂ ಸಂಶೋಧನೆಗೆ ನಿಧಿ ಕಾಯ್ದಿರಿಸದೆ ರೈತಾಪಿ ವರ್ಗಕ್ಕೆ ನಿರಾಸೆಯಾಗಿದೆ. ನೀರಾವರಿ ಕ್ಷೇತ್ರಕ್ಕೂ ಯಾವುದೇ ಕೊಡುಗೆ ನೀಡದೆ ತಾರತಮ್ಯವೆಸಗಲಾಗಿದೆ. ಜಿಲ್ಲೆಯ ಮೀನುಗಾರಿಕೆ ವಲಯಕ್ಕು ಅನ್ಯಾಯವಾಗಿದೆ. ಪಠ್ಯಪುಸ್ತಕದ ವಿಷಯದಲ್ಲಿ ನೈಜ್ಯ ಇತಿಹಾಸ ತಿರುಚುವ ಕೆಲಸ ನಡೆದಿದೆ. ಒಟ್ಟಾರೆಯಾಗಿ ಈ ಮುಂಗಡಪತ್ರ ಆರ್ಥಿಕ ಶಿಸ್ತಿನ ಹಳಿ ತಪ್ಪಿಸಿ ಅಭಿವೃದ್ಧಿ ಕುಂಠಿತವಾಗಿ ನಾಡಿನ ಜನತೆಗೆ ಬಲುದೊಡ್ಡ ಹೊರೆಯಾಗಲಿದೆಯೆಂದು ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

p>

LEAVE A REPLY

Please enter your comment!
Please enter your name here