ಅಕ್ರಮ ಮರ ಕಡಿತಲೆ ಪ್ರಕರಣ: ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅಮಾನತು

0

ಬೆಳ್ತಂಗಡಿ: ಅಕ್ರಮ ಮರ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಹೆಚ್.ಎನ್. ಅವರನ್ನು ಅಮಾನತುಗೊಳಿಸಿರುವುದಾಗಿ ವರದಿಯಾಗಿದೆ.

ಬೆಳ್ತಂಗಡಿ ವಲಯದ ಕಲ್ಮಂಜ ಗ್ರಾಮದಲ್ಲಿ ನಡೆದಿದ್ದ ಮರಗಳ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಹೆಚ್.ಎನ್. ಅವರನ್ನು ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ)ನಿಯಮಾವಳಿ 1957ರ ನಿಯಮ 10(1)(ಡಿ)ಯಲ್ಲಿಯ ಅವಕಾಶದಂತೆ ಹಾಗೂ ಸರಕಾರದ ದಿನಾಂಕ 11-12-2020ರ ಅಧಿಸೂಚನೆಯಂತೆ ಪ್ರದತ್ತವಾದ ಅಧಿಕಾರದ ಅನ್ವಯ ಅಮಾನತುಗೊಳಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕಲ್ಮಂಜ ಗ್ರಾಮದ ಸರ್ವೆ ನಂಬರ್ 237 ಮತ್ತು 238ರ ವ್ಯಾಪ್ತಿಯ ಸುಮಾರು 2.30 ಎಕರೆ ಜಾಗದಲ್ಲಿ ಮರಗಳ ಕಡಿತಲೆಯಾಗಿತ್ತು. ಹಾಗಿದ್ದರೂ ಇಲಾಖೆಯ ಕಾನೂನು ಕಾಯ್ದೆಯಡಿ ಕ್ರಮ ಜರುಗಿಸದೆ ಸೊತ್ತುಗಳ ಅಕ್ರಮ ಸಾಗಾಟಕ್ಕೆ ಅವಕಾಶ ಮಾಡಿಕೊಟ್ಟು ಮರಗಳ್ಳರೊಂದಿಗೆ ಶಾಮೀಲಾದ ಆರೋಪ ವಲಯಾರಣ್ಯಾಧಿಕಾರಿ ತ್ಯಾಗರಾಜ್ ಅವರ ಮೇಲಿತ್ತು.ಈ ಹಿನ್ನೆಲೆಯಲ್ಲಿ ಇಲಾಖಾ ತನಿಖೆ ನಡೆಸಲಾಗಿತ್ತು. ಕರ್ನಾಟಕ ರಾಜ್ಯ ನಾಗರಿಕ ಸೇವಾ(ನಡತೆ)ನಿಯಮಾವಳಿಗಳು 2021ರ ನಿಯಮ 3ರ ಆಸ್ಪದಗಳಿಗೆ ವ್ಯತಿರಿಕ್ತವಾಗಿ ವರ್ತಿಸಿ ಸರಕಾರಿ ಕೆಲಸದಲ್ಲಿ ಪರಿಪೂರ್ಣ ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆಯನ್ನು ತೋರಿಸದೇ ಕರ್ತವ್ಯ ಲೋಪ ಎಸಗಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಅಮಾನತು ಆದೇಶ ಹೊರಡಿಸಲಾಗಿದೆ. ತ್ಯಾಗರಾಜ್ ಅವರನ್ನು ಅಮಾನತುಗೊಳಿಸಿ ಈ ಹಿಂದೆಯೇ ಆದೇಶ ಮಾಡಲಾಗಿತ್ತಾದರೂ ಜಾರಿಯಾಗಿರಲಿಲ್ಲ. ಇದೀಗ ಅಮಾನತು ಆದೇಶ ಅನುಷ್ಠಾನ ಮಾಡಲಾಗಿದ್ದು ತ್ಯಾಗರಾಜ್ ಅವರು ರಜೆಯಲ್ಲಿ ತೆರಳಿದ್ದಾರೆ.

ತ್ಯಾಗರಾಜ್ ಅವರ ಸ್ಥಾನಕ್ಕೆ ಬಂಟ್ವಾಳ ವಲಯಾರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಅವರಿಗೆ ಪ್ರಭಾರ ಜವಾಬ್ದಾರಿ ವಹಿಸಲಾಗಿದೆ.

LEAVE A REPLY

Please enter your comment!
Please enter your name here