ರಾಜ್ಯದಲ್ಲಿ 74 ತಾಲೂಕುಗಳಲ್ಲಿ ‘ಶೌರ್ಯ’ ಸ್ವಯಂಸೇವಕರು ವಿಪತ್ತು ನಿರ್ವಹಣೆಗೆ ಸಿದ್ಧ

0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಅನುಷ್ಠಾನವು ಇದೀಗ 3ನೇ ವರ್ಷ ಪೂರೈಸಿದೆ. ಜನಜಾಗೃತಿ ಪ್ರಾದೇಶಿಕ ವಿಭಾಗದ ಮುಖೇನ ಈ ಕಾರ್ಯಕ್ರಮದ ಅನುಷ್ಠಾನಕ್ಕೆ ರೂಪುರೇಷೆ ಹಾಕಿಕೊಳ್ಳಲಾಗುತ್ತಿದೆ. ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮವು ಕರ್ನಾಟಕ ರಾಜ್ಯದ 18 ಜಿಲ್ಲೆಯ 74 ತಾಲ್ಲೂಕುಗಳಲ್ಲಿ ಅನುಷ್ಠಾನಗೊಂಡಿದೆ. ಗ್ರಾಮಗಳಲ್ಲಿ ಸಮಾಜಪರ ಕಾಳಜಿ ಹೊಂದಿರುವ ಯುವಕ, ಯುವತಿಯರನ್ನು ಸ್ವಯಂಸೇವಕರನ್ನಾಗಿ ಆಯ್ಕೆ ಮಾಡಿ ಅವರನ್ನು ಎನ್.ಡಿ.ಆರ್.ಎಫ್ ಮತ್ತು ಅಗ್ನಿಶಾಮಕ ದಳದ ಮುಖೇನ ತರಬೇತುಗೊಳಿಸುವುದರ ಮೂಲಕ ಸೇರ್ಪಡೆಗೊಳಿಸಲಾಗಿದೆ. ತಾಲೂಕು ಸಮಿತಿಗಳಿಗೆ 100 ರಿಂದ 200 ಸ್ವಯಂಸೇವಕರನ್ನು ನೋಂದಾವಣಿ ಮಾಡಲಾಗುತ್ತಿದ್ದು ಸದಸ್ಯರು ಸಾಮಾಜಿಕ ಹಾಗೂ ವಿಪತ್ತು ಸೇವೆಯಲ್ಲಿ ತನ್ನನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಕಳೆದ 3 ವರ್ಷಗಳಲ್ಲಿ 74 ತಾಲೂಕುಗಳಲ್ಲಿ 6592 ಜನರನ್ನು ಈ ನಿಟ್ಟಿನಲ್ಲಿ ತರಬೇತಿಗೊಳಿಸಲಾಗಿದೆ. ಇವರಿಗೆ ವಿಪತ್ತು ಸೇವೆ, ಸಾಮಾಜಿಕ ಸೇವೆ, ವೈಯಕ್ತಿಕ ಸೇವೆ, ತನ್ನನ್ನು ತಾನು ಗುರುತಿಸಿಕೊಳ್ಳುವಲ್ಲಿ ಹಾಗೂ ವ್ಯಕ್ತಿತ್ವ ವಿಕಸನ ಪಡೆಯುವಲ್ಲಿ ಪ್ರೇರಣೆ ತುಂಬುವ ಕೆಲಸ ನಿರಂತರವಾಗಿ ಸಾಗುತ್ತಿದೆ.

ಪ್ರಗತಿಯ ಪಕ್ಷಿನೋಟ: ಕಾರ್ಯಕಮದ ಅನುಷ್ಠಾನದ ತಾಲ್ಲೂಕುಗಳು: 74, ಒಟ್ಟು ಸಂಯೋಜಕರು/ಸ್ವಯಂಸೇವಕರ ಸಂಖ್ಯೆ: 9480, ಕ್ಷಿಪ್ರ ಪ್ರತಿಕ್ರಿಯೆ ತಂಡ ರಚನೆ: 08, ವಿಪತ್ತು ಸೇವೆ: 98,600, ಸಾಮಾಜಿಕ ಸೇವೆ: 54,860, ಒಟ್ಟು ಸೇವಾ ಚಟುವಟಿಕೆಗಳು: 1,23,460, ಒಟ್ಟು ವಿನಿಯೋಗಿಸಿದ ಮಾನವ ದಿನಗಳು 6,17,300. ಸ್ವಯಂಸೇವಕರ ತರಬೇತಿ: ವಿಪತ್ತು ನಿರ್ವಹಣೆಯ ತಾಲ್ಲೂಕು ಸಮಿತಿಗೆ ನೋಂದಾವಣಿ ಮಾಡಿಕೊಂಡ ಸ್ವಯಂಸೇವಕರಿಗೆ ವಿಪತ್ತು ನಿರ್ವಹಣೆಯ ಬಗ್ಗೆ ಕೌಶಲ್ಯದ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ (ಎನ್.ಡಿ.ಆರ್.ಎಫ್), ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಕೆಯಿಂದ ಪ್ರಾಯೋಗಿಕ ತರಬೇತಿ ನೀಡಲಾಗಿದೆ. ಪೊಲೀಸ್ ಇಲಾಖೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಗೃಹರಕ್ಷಕದಳ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಕೃಷಿ, ಪಶುಸಂಗೋಪನೆ, ಮೀನುಗಾರಿಕೆ ಮುಂತಾದ ಇಲಾಖೆಗಳ ಸಹಯೋಗದಲ್ಲಿ ಎರಡು ಹಂತಗಳಲ್ಲಿ ತರಬೇತಿಯನ್ನು ನಡೆಸಲಾಗಿದೆ. ಇದುವರೆಗೆ 282 ತರಬೇತಿಗಳನ್ನು ಆಯೋಜನೆ ಮಾಡಲಾಗಿರುತ್ತದೆ. ರಕ್ಷಣಾ ಪರಿಕರಗಳ ಬಳಕೆ ಮತ್ತು ನಿರ್ವಹಣೆಯ ಕುರಿತಾಗಿ ಚೆನ್ನೈ ಮೂಲದ ಉಷಾ ಫೈರ್ ಸೇಫ್ಟಿ ಕಂಪನಿಯ ತರಬೇತುದಾರರ ತಂಡ ಜೀವರಕ್ಷಣಾ ಕೌಶಲ್ಯ ತರಬೇತಿಯನ್ನು ನೀಡಲಾಗಿದೆ. ಪ್ರಸ್ತುತ ವರ್ಷದಲ್ಲಿ 26 ತಾಲ್ಲೂಕಿನ 2860 ಸ್ವಯಂಸೇವಕರುಗಳಿಗೆ ಈ ತರಬೇತಿಯನ್ನು ನೀಡಲಾಗಿದೆ.

ಪ್ರಮಾಣಪತ್ರ ಮತ್ತು ಸಮವಸ್ತ್ರ ವಿತರಣೆ: ಎನ್.ಡಿ.ಆರ್.ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಮೂಲಕ ತರಬೇತಿಯನ್ನು ಪೂರೈಸಿದ ವಿಪತ್ತು ಸೇವಾ ಸಮಿತಿಯ ಸ್ವಯಂಸೇವಕರಿಗೆ ಪ್ರಮಾಣಪತ್ರವನ್ನು ನೀಡಲಾಗಿದೆ. ಅಲ್ಲದೇ ಎಲ್ಲಾ ಸ್ವಯಂಸೇವಕರಿಗೆ ಸಮವಸ್ತ್ರವನ್ನು ವಿತರಣೆ ಮಾಡಲಾಗಿದೆ. ಸ್ವಯಂಸೇವಕರಿಗೆ ಕೆಲವೊಮ್ಮೆ ತುರ್ತು ಸಹಾಯಕ್ಕೆ ಧಾವಿಸುವ ಸಮಯದಲ್ಲಿ ಸಮವಸ್ತ್ರ ಧರಿಸಲು ಸಾಧ್ಯವಾಗದೇ ಇರಬಹುದು. ಇಂತಹ ಸಂದರ್ಭದಲ್ಲಿ ಶೌರ್ಯ ಸ್ವಯಂಸೇವಕರಿಗೆ ಗುರುತಿಸಿಕೊಳ್ಳಲು ಅನುಕೂಲವಾಗುವಂತೆ ಶೌರ್ಯ ಕ್ಯಾಪ್ ವಿಶೇಷವಾಗಿ ತಯಾರಿಸಲಾಗಿದ್ದು ಇದನ್ನು ಪೂಜ್ಯರು ಬಿಡುಗಡೆಗೊಳಿಸಿ ಸ್ವಯಂಸೇವಕರಿಗೆ ವಿತರಿಸಲಾಗಿದೆ.

ಸಂಯೋಜಕರ ಸಭೆ ಮತ್ತು ತರಬೇತಿಗಳು: ವಿಪತ್ತು ನಿರ್ವಹಣೆ ಕಾರ್ಯಕ್ರಮದ ಯಶಸ್ವೀ ಅನುಷ್ಠಾನಕ್ಕಾಗಿ ಯೋಜನೆಯ ಸೇವಾಪ್ರತಿನಿಧಿಗಳನ್ನು ಸಂಯೋಜಕರಾಗಿ ಆಯ್ಕೆ ಮಾಡಲಾಗಿದೆ. ಇವರು ಬಹಳ ಪರಿಣಾಮಕಾರಿಯಾಗಿ ಘಟಕಗಳ ನಿರ್ವಹಣೆ ಮಾಡುತ್ತಿದ್ದಾರೆ. ಘಟಕಗಳ ಸುಸ್ಥಿರ ಸಂಘಟನೆಗಾಗಿ ಸ್ವಯಂ ಸೇವಕರ ಪೈಕಿ ಓರ್ವರನ್ನು ಘಟಕ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಲಾಗಿದೆ. ಪ್ರಸ್ತುತ ಒಟ್ಟು 285 ಘಟಕ ಪ್ರತಿನಿಧಿಗಳು, ಹಾಗೂ 285 ಸಂಯೋಜಕರು ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಇದುವರೆಗೆ ಒಟ್ಟು 183 ಕೌಶಲ್ಯಾಧಾರಿತ ತರಬೇತಿಗಳನ್ನು ನಡೆಸಲಾಗಿದೆ.

ವಿಪತ್ತು ನಿರ್ವಹಣೆಗೆ ಅಗತ್ಯ ಪರಿಕರಗಳನ್ನು ಘಟಕಕ್ಕೆ ವಿತರಣೆ: ವಿಪತ್ತು ನಿರ್ವಹಣಾ ಸಮಿತಿಗಳಿಗೆ ವಿಪತ್ತು ನಿರ್ವಹಣಾ ಕಾರ್ಯಾಚರಣೆಗೆ ಅಗತ್ಯವಿರುವ ಪರಿಕರಗಳನ್ನು ವಿತರಣೆ ಮಾಡಲಾಗಿದೆ. ಇದುವರೆಗೆ ೫೨ ಯೋಜನಾ ವ್ಯಾಪ್ತಿಯ ವಿಪತ್ತು ನಿರ್ವಹಣಾ ಸಮಿತಿಗಳಿಗೆ 85,86,262/- ರೂಪಾಯಿ ಮೌಲ್ಯದ ಪರಿಕರಗಳನ್ನು ಒದಗಿಸಲಾಗಿದೆ. ಇದರಲ್ಲಿ ಲೈಫ್ ಜಾಕೆಟ್, ಲೈಫ್ ಬಾಯ್, ಲ್ಯಾಡರ್, ಸ್ಟ್ರೆಚರ್, ಫೈರ್ ಎಕ್ಸಟಿಂಗ್ವಿಶರ್, ಸೇಫ್ಟಿ ಹೆಲ್ಮೆಟ್, ಚೈನ್ ಸಾ, ಫಸ್ಟ್ ಆಡ್ ಕಿಟ್ ಸೇರಿದಂತೆ 20 ಬಗೆಯ ತುರ್ತು ಸ್ಪಂದನೆಗೆ ಅಗತ್ಯ ಉಪಕರಣಗಳನ್ನು ನೀಡಲಾಗಿದೆ. ಪ್ರವಾಹ, ಭೂಕಂಪ, ಚಂಡಮಾರುತ ಮತ್ತಿತರ ವಿಪತ್ತಿನ ಸಂದರ್ಭಗಳಲ್ಲಿ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳ ಸಮಯದಲ್ಲಿ ಈ ಉಪಕರಣಗಳನ್ನು ಸ್ವಯಂಸೇವಕರು ಬಳಸಿಕೊಳ್ಳುತ್ತಿದ್ದಾರೆ.

ತುರ್ತು ಕ್ಷಿಪ್ರ ತಂಡ ರಚನೆ: ತಾಲೂಕು ಘಟಕಗಳಲ್ಲಿ ವಿಶೇಷ ಕೌಶಲ್ಯ ಹೊಂದಿರುವ ನುರಿತ ಸ್ವಯಂಸೇವಕರನ್ನು ಗುರುತಿಸಿ 8 ಕ್ಷಿಪ್ರ ತಂಡಗಳನ್ನು ರಚಿಸಲಾಗಿದೆ. ಇವರು ರಾಜ್ಯದಲ್ಲಿ, ಜಿಲ್ಲೆಯಲ್ಲಿ, ತಾಲೂಕಿನಲ್ಲಿ ಮತ್ತು ಸ್ಥಳೀಯವಾಗಿಯೂ ಯಾವ ಸಂದರ್ಭದಲ್ಲಿಯೂ ಸಜ್ಜಾಗಿ ನಿಲ್ಲುವಂತೆ ಈ ತಂಡವನ್ನು ತರಬೇತುಗೊಳಿಸಲಾಗಿದೆ. ಮುಖ್ಯವಾಗಿ ಕಾಡ್ಗಿಚ್ಚು, ರಸ್ತೆ ಅಪಘಾತ, ಅನಾರೋಗ್ಯ, ಬೆಂಕಿ, ಪ್ರವಾಹ, ಅತಿವೃಷ್ಟಿ, ಕಟ್ಟಡ ಕುಸಿತ, ಭೂ ಕುಸಿತ., ಮುಂತಾದ ಸಂದರ್ಭದಲ್ಲಿ ತಕ್ಷಣ ಸ್ಪಂದಿಸುವಂತೆ ಇವರಿಗೆ ನಿರ್ದೇಶನ ನೀಡಲಾಗಿದೆ. ಈ ತಂಡದಲ್ಲಿ ವಾಹನ ಹೊಂದಿರುವವರು, ವಾಹನ ಚಾಲಕರು, ದೋಣಿ ಚಾಲಕರು, ಇಲೆಕ್ಟ್ರಿಷಿಯನ್, ಈಜು ತಜ್ಞರು, ಉರಗ ಪ್ರೇಮಿಗಳು, ಕಟ್ಟಡ ಕಾಮಗಾರಿ ನಿಪುಣತೆ ಹೊಂದಿರುವ ಮೇಸ್ತ್ರಿಗಳು ಹೀಗೆ ಹಲವು ಕೌಶಲ್ಯ ಹೊಂದಿರುವವರು ಇರುತ್ತಾರೆ.

ಸೇವಾ ಚಟುವಟಿಕೆಗಳು: ಸದಾ ಚಟುವಟಿಕೆಗಳಲ್ಲಿ ನಿರತರಾಗಿರುವ ಶೌರ್ಯ ತಂಡದವರು ತಮ್ಮ ಕಣ್ಣಿಗೆ ಕಾಣುವ, ಕಿವಿಗೆ ಕೇಳುವ, ಬಂದಿರುವ ಮಾಹಿತಿಯನ್ನು ಆಧರಿಸಿ ವಿಪತ್ತು ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿಕೋಪ ಸಂಭವಿಸದ ಸಾಮಾನ್ಯ ದಿನಗಳಲ್ಲಿ ವಿಪತ್ತು ನಿರ್ವಹಣಾ ತಾಲೂಕು ಸಮಿತಿಯ ಸ್ವಯಂಸೇವಕರು ಸಾಮಾಜಿಕ ಕಳಕಳಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೇರಣೆ ನೀಡಲಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಾದ ಪರಿಸರ ರಕ್ಷಣೆ, ಸ್ವಚ್ಛ ಭಾರತ್ ಕಾರ್ಯಕ್ರಮ, ಶ್ರದ್ಧಾ ಕೇಂದ್ರಗಳ ಸ್ವಚ್ಛತೆ, ದುಶ್ಚಟಗಳ ವಿರುದ್ಧ ಜಾಗೃತಿ, ಶೌಚಾಲಯದ ಮಹತ್ವದ ಬಗ್ಗೆ ಅರಿವು ಮೂಡಿಸುವುದು, ಆರೋಗ್ಯ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ, ನಾಗರಿಕ ಪ್ರಜ್ಞೆ, ಪೂಜ್ಯರ ಮಹತ್ವಾ ಕಾಂಕ್ಷೆಯ ಭೂಮಿ ತಾಯಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ ಎಂಬ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ., ಮುಂತಾದ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಿಗೆ ತೊಡಗಿಕೊಳ್ಳಲು ಪ್ರೇರಣೆ ನೀಡಲಾಗುತ್ತಿದೆ. ಇದುವರೆಗೆ ೬೮,೬೦೦ ವಿಪತ್ತು ನಿರ್ವಹಣಾ ಚಟುವಟಿಕೆಗಳು ಹಾಗೂ ೫೪,೮೬೦ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಹಾಗೂ ಕಳೆದ ೨ ವರ್ಷಗಳಲ್ಲಿ ೭,೬೮,೨೯೭ ಹಣ್ಣು ಹಂಪಲು ಹಾಗೂ ಇನ್ನಿತರ ಗಿಡಗಳನ್ನು ೪,೨೬೧ ಎಕ್ರೆ ಪ್ರದೇಶದಲ್ಲಿ ಗಿಡನಾಟಿಯನ್ನು ವಿಪತ್ತು ನಿರ್ವಹಣಾ ತಂಡ ನಿರ್ವಹಿಸಿದೆ.

ವಾತ್ಸವ್ಯ ಮನೆ ನಿರ್ಮಾಣ: ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ ರಚಿಸಲಾಗುವ ಮನೆ ನಿರ್ಮಾಣಕ್ಕೆ ಸ್ವಯಂಸೇವಕರು ವಿಶೇಷವಾಗಿ ತೊಡಗಿಕೊಂಡು ಸೇವೆ ಸಲ್ಲಿಸಿರುತ್ತಾರೆ. ಮಳೆಗಾಲದಲ್ಲಿ ಮನೆಗಳಿಗೆ ಹಾನಿಯಾದಾಗ ರಿಪೇರಿ ಮಾಡಿಕೊಡುವುದು, ತೀರಾ ಹಳೆಯ ಮನೆಗಳಾಗಿದ್ದಲ್ಲಿ ರಿಪೇರಿ ಮಾಡಿ ಕೊಡುವ ಕೆಲಸಗಳಲ್ಲಿಯೂ ಸ್ವಯಂಸೇವಕರು ತೊಡಗಿಕೊಂಡಿರುತ್ತಾರೆ. ವರದಿ ವರ್ಷದಲ್ಲಿ 48 ಮನೆಗಳನ್ನು ರಚಿಸಲಾಗಿದ್ದು, ಇದುವರೆಗೆ 216 ಮನೆಗಳನ್ನು ನಿರ್ಮಾಣ ಮಾಡಲಾಗಿದೆ.

ನಿರ್ವಹಣೆ: ಸ್ವಯಂಸೇವಕರ ಮಾಸಿಕ ಸಭೆಗಳನ್ನು ನಡೆಸುವ ಮೂಲಕ ಸಾಮಾಜಿಕ ಕಳಕಳಿಯ ಚಟುವಟಿಕೆಗಳಿಗೆ ತೊಡಗಿಕೊಳ್ಳಲು ಹಾಗೂ ಯಾವುದೇ ವಿಪತ್ತು ಸಂಭವಿಸಿದಾಗ ಸ್ಪಂದಿಸಲು ಪ್ರೇರಣೆಯನ್ನು ನೀಡಲಾಗುತ್ತಿದೆ. ವಾಟ್ಸಾಪ್ ಗುಂಪುಗಳ ಮೂಲಕ ಅನುಪಾಲನೆ ಮಾಡಲಾಗುತ್ತಿದೆ. ಸೇವೆಯಲ್ಲಿ ತೊಡಗಿಕೊಳ್ಳುವ ಸ್ವಯಂಸೇವಕರು ಸ್ವತಃ ತೊಂದರೆಗೆ ಈಡಾದ ಸಂದರ್ಭ ಬಂದಲ್ಲಿ ಅವರಿಗೆ ಸಹಾಯಧನ ನೀಡುವ ಮೂಲಕ ಸ್ಪಂದನೆಯನ್ನು ಯೋಜನೆಯಿಂದ ಮಾಡಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ವೈಯಕ್ತಿಕ ಸಾಧನೆ ತೋರುವ ಸ್ವಯಂಸೇವಕರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗಿದೆ. ವಿಪತ್ತು ನಿರ್ವಹಣೆ ಸದಸ್ಯರಿಗೆ ಮತ್ತು ಅವರ ಕುಟುಂಬಕ್ಕೆ ಯೋಜನೆಯ ವತಿಯಿಂದ ಉಚಿತವಾಗಿ ಆರೋಗ್ಯ ರಕ್ಷಾ ವಿಮೆಯನ್ನು ಒದಗಿಸಲಾಗಿದೆ.

ಸೇವೆಯ ‘ಶೌರ್ಯ’ಕ್ಕೆ ಇದೀಗ 3 ವರ್ಷ:‘ಶೌರ್ಯ’ ಶ್ರೀ ಧರ್ಮಸ್ಥಳದ ವಿಪತ್ತು ನಿರ್ವಹಣೆ ಕಾರ್ಯಕ್ರಮವು ಅನುಷ್ಠಾನಗೊಂಡು ಇದೀಗ 3 ವರ್ಷ ಪೂರೈಸಿದೆ. ಪೂಜ್ಯರ ಮತ್ತು ಮಾತೃಶ್ರೀ ಅಮ್ಮನವರ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ 74 ತಾಲೂಕುಗಳಲ್ಲಿ ಕಾರ್ಯಕ್ರಮ ಬಹಳ ಉತ್ತಮವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಪ್ರಸ್ತುತ 9480 ಸ್ವಯಂಸೇವಕರುಳ್ಳ ‘ಶೌರ್ಯ’ ವಿಪತ್ತು ನಿರ್ವಹಣಾ ಸಮಿತಿಗಳು ಕೆಲಸ ನಿರ್ವಹಿಸುತ್ತಿದೆ. ಮಳೆಗಾಲದಲ್ಲಿ ಅಥವಾ ಯಾವುದೇ ತುರ್ತು ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಲು ವಿಪತ್ತು ನಿರ್ವಹಣಾ ತಂಡ ಸಿದ್ಧವಾಗಿದೆ. ಈ ಕುರಿತು ಕ್ಷೇತ್ರದಿಂದ ಸ್ವಯಂಸೇವಕರಿಗೆ ರಕ್ಷಣಾ ಪರಿಕರಗಳನ್ನು ಒದಗಿಸಲಾಗಿದೆ. ಮುಂದೆ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ 20 ಸಾವಿರ ಸ್ವಯಂಸೇವಕರನ್ನು ಆಯ್ಕೆ ಮಾಡುವ ಗುರಿ ಹೊಂದಲಾಗಿದೆ. ಅಲ್ಲದೆ ಪ್ರತೀ ತಾಲೂಕುಗಳಲ್ಲಿ ತುರ್ತು ಸ್ಪಂದನಾ ತಂಡವನ್ನು ರಚಿಸುವ ಉದ್ದೇಶ ಹೊಂದಲಾಗಿದೆ. -ಡಾ| ಎಲ್.ಹೆಚ್. ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.)ಧರ್ಮಸ್ಥಳ

LEAVE A REPLY

Please enter your comment!
Please enter your name here