ಸಂವಿಂಧಾನ ಬದ್ಧವಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು 18 ವರ್ಷ ವಯಸ್ಸಾಗಿರಬೇಕೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ 18 ವರ್ಷದ ಒಳಗಿನ ಮಕ್ಕಳಿಗೂ ಒಂದು ಸಂದರ್ಭದಲ್ಲಿ ಚುನಾವಣೆಗೆ ಅವಕಾಶವಿದೆ. ಶಾಲಾ ಸಂಸತ್ತಿನ ಚುನಾವಣೆಯಲ್ಲಿ ಮಕ್ಕಳು ಕೂಡ ತಮ್ಮ ಮತವನ್ನು ಚಲಾಯಿಸಿ ಅಭ್ಯರ್ಥಿಯ ಗೆಲುವಿಗೆ ಕಾರಣಕರ್ತರಾಗುತ್ತಾರೆ ಅನ್ನುವ ವಿಚಾರವೂ ಸತ್ಯ.
ಬಹುತೇಕ ರಾಜ್ಯದ ಎಲ್ಲಾ ಶಾಲೆಗಳಲ್ಲಿಯೂ ವಿದ್ಯಾರ್ಥಿ ಸಂಸತ್ ರಚನೆ ಇದ್ದೇ ಇರುತ್ತದೆ. ಶಾಲಾ ಶಿಕ್ಷಕರ ಜ್ಞಾನ ಹಾಗೂ ಆಸಕ್ತಿಯ ಮೂಲಕ ಆಯಾಯ ಶಾಲೆಯ ಚುನಾವಣೆ ನಡೆದು ಮಂತ್ರಿಮಂಡಲ ರಚನೆಯಾಗುತ್ತದೆ. ಆ ಮೂಲಕ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿನ ಮಂತ್ರಿಮಂಡಲ ರಚನೆಯ ಪ್ರಕಾರವೇ ಶಾಲಾ ಮಂತ್ರಿಮಂಡಲ ರೂಪುಗೊಳ್ಳುತ್ತದೆ.
ವರ್ಷಗಳ ಹಿಂದೆ ಒಂದು ಸಣ್ಣ ಹಾಳೆಯ ಮೂಲಕ ಬ್ಯಾಲೆಟ್ ಪೇಪರ್ ತಯಾರಿಸಿ ಅದರಲ್ಲಿ ತಮಗಿಷ್ಟವಾದ ಅಭ್ಯರ್ಥಿಯ ಹೆಸರನ್ನು ಬರೆದು ಅದನ್ನು ಮುಚ್ಚಿದ ಒಂದು ಡಬ್ಬದ ಒಳಗೆ ಹಾಕಿ ಮತದಾನ ಮಾಡಲಾಗುತ್ತಿತ್ತು. ಬಳಿಕ ಡಬ್ಬದಲ್ಲಿ ಹಾಕಿದ ಬ್ಯಾಲೆಟ್ ಪೇಪರ್‌ಗಳನ್ನು ಅಭ್ಯರ್ಥಿಗಳ ಸಮ್ಮುಖದಲ್ಲೇ ಎಣಿಕೆ ನಡೆಸಿ ಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು ನಾಯಕನನ್ನಾಗಿ ಘೋಷಿಸಲಾಗುತ್ತಿತ್ತು. ಆದರೆ ಇದೀಗ ಈ ಚುನಾವಣೆಗೂ ಕೂಡ ಡಿಜಿಟಲ್ ಸ್ಪರ್ಶ ತರಲಾಗಿದ್ದು ಮೊಬೈಲ್ ಆ್ಯಪ್ ಮೂಲಕ ಮೊಬೈಲ್ ನಲ್ಲಿಯೇ ಪೇಪರ್‌ಲೆಸ್ ಬ್ಯಾಲೆಟ್ ಪೇಪರ್ ನಿರ್ಮಿಸಿ, ಮೊಬೈಲ್ ನ ಮೂಲಕವೇ ಮತದಾನ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ನಗರ ಪ್ರದೇಶದ ಶಾಲೆಗಳಲ್ಲಿ ಕಳೆದೊಂದು ವರ್ಷದಿಂದ ಈ ರೀತಿಯ ವ್ಯವಸ್ಥೆ ಜಾರಿಯಲ್ಲಿದ್ದರೂ ಗ್ರಾಮೀಣ ಭಾಗಕ್ಕೆ ಪೂರ್ಣಮಟ್ಟದಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿರಲಿಲ್ಲ. ಆದರೆ ಈ ಬಾರಿ ಗ್ರಾಮೀಣ ಭಾಗದಲ್ಲೂ ಶಾಲಾ ಸಂಸತ್ ಚುನಾವಣೆಗೆ ಡಿಜಿಟಲೀಕರಣ ನೀಡುವ ಸಲುವಾಗಿ ಶಿಕ್ಷಕರೇ ತಮ್ಮ ಮೊಬೈಲ್‌ನಲ್ಲಿ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಮಕ್ಕಳಿಗೂ ಹಿರಿಯರ ಹಾಗೆ ಇವಿಎಂ ಮಷೀನ್‌ಗಳ ಮೂಲಕ ಮತದಾನ ಮಾಡುವ ಬಗ್ಗೆ ಕಲ್ಪನೆಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಚುನಾವಣೆಗಳ ಹಾಗೆ ಇಲ್ಲೂ ಕೂಡಾ ಅಭ್ಯರ್ಥಿಗಳು ಶಾಲಾ ಆವರಣದೊಳಗೆ ಬಹಿರಂಗ ಪ್ರಚಾರ ನಡೆಸಲು ಅವಕಾಶವಿರುತ್ತದೆ. ಕಾಲೇಜು ಶಿಕ್ಷಣದಲ್ಲಿ ಈ ರೀತಿಯ ಚುನಾವಣೆ ಸಾಮಾನ್ಯವಾಗಿದ್ದು ಇದೀಗ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಈ ಪ್ರಯೋಗ ಜಾರಿಯಲ್ಲಿದೆ. ಚುನಾವಣಾ ಅಕಾರಿ ಹಾಗೂ ಮತಗಟ್ಟೆ ಅಧಿಕಾರಿ ಶಿಕ್ಷಕರೇ ಆಗಿರುತ್ತಾರೆ.
ವೋಟಿಂಗ್ ಮೆಷೀನ್ ಆ್ಯಪ್ ಬಳಕೆ ಹೇಗೆ:
ಮೊದಲು ಒಟ್ಟು ನಿಗದಿಪಡಿಸಿದ ಮಂತ್ರಿ ಸ್ಥಾನಗಳನ್ನು ಪ್ರತ್ಯೇಕಿಸಿಕೊಳ್ಳಬೇಕು. ಒಟ್ಟು ಎಷ್ಟು ಸ್ಥಾನವಿದೆ ಅಷ್ಟು ಮೊಬೆಲ್ ಗಳನ್ನು ಶಿಕ್ಷಕರು ಹೊಂದಿದ್ದು, ಪ್ರತಿಯೊಂದು ಮಂತ್ರಿ ಸ್ಥಾನಕ್ಕೂ ಪ್ರತ್ಯೇಕವಾದ ಮೊಬೈಲನ್ನು ಜೋಡಿಸಿಕೊಳ್ಳಬೇಕು.ಮೊಬೈಲ್ ಪ್ಲೇಸ್ಟೋರ್‌ಗೆ ಹೋಗಿ ವೋಟಿಂಗ್ ಮೆಷೀನ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ನಿಗದಿತ ಮಂತ್ರಿ ಪದವಿಯ ಅಭ್ಯರ್ಥಿಗಳ ಹೆಸರುಗಳನ್ನು ಮತ್ತು ಆತನ ಫೋಟೋ ಅಥವಾ ಚಿಹ್ನೆಯನ್ನು ಉಳಿಸಿಕೊಳ್ಳಬೇಕು. ಬಳಿಕ ಮತದಾನಕ್ಕೆ ಅವಕಾಶವಿರುವ ವಿದ್ಯಾರ್ಥಿಗಳು ಒಬ್ಬರೊಬ್ಬರಾಗಿ ಬಂದು ತಮ್ಮ ನೆಚ್ಚಿನ ನಾಯಕನಿಗೆ ಮತವನ್ನು ನೀಡಬೇಕು. ಮೊಬೆ
ಲ್ ಪರದೆಯಲ್ಲಿ ಕಾಣುವ ಅಭ್ಯರ್ಥಿಯ ಹೆಸರು ಮತ್ತು ಆತನ ಫೋಟೋ ಚಿತ್ರ ಇರುವ ಎದುರಿನಲ್ಲಿಯೇ ಒಂದು ಗುಂಡಿ ಇದ್ದು ಮತದಾರರು ಗುಂಡಿಯಲ್ಲಿ ಬೆರಳಿಟ್ಟಾಗ ಬೀಪ್ ಸೌಂಡ್ ಆಗುತ್ತದೆ. ಆಗ ಮತದಾನ ನಡೆದಿದೆ ಎಂದರ್ಥ. ಬಳಿಕ ಮತದಾರನ ಬೆರಳಿಗೆ ಶಾಯಿ ಬಳಿಯಲಾಗುತ್ತದೆ. ಹಾಕಿದ ಪ್ರತಿಯೊಂದು ಮತವು ಕೂಡ ಆ್ಯಪ್‌ನಲ್ಲಿ ಸಂಗ್ರಹವಾಗುತ್ತದೆ. ಮತವನ್ನು ಉಳಿಸಿಕೊಳ್ಳುವ ವ್ಯವಸ್ಥೆಯನ್ನು ಕೂಡ ಈ ಆ್ಯಪ್ ಹೊಂದಿದೆ. ಕಾಗದದ ಹಾಳೆಯಲ್ಲಿ ಮತದಾನ ಮಾಡಿದ ಹಾಳೆಯನ್ನು ಎಣಿಕೆ ಮಾಡುವಾಗ ಸಮಯ ವ್ಯರ್ಥವಾದರೆ, ಇಲ್ಲಿ ಪ್ರತಿಯೊಂದು ಮತವನ್ನೂ ಕೂಡಾ ಆ್ಯಪ್ ಸಂಕಲನ ಮಾಡುತ್ತದೆ.
ಗೊಂದಲ ಬರದಂತೆ ಶಿಕ್ಷಕರು ಹೀಗೂ ಪರೀಕ್ಷಿಸಿಕೊಳ್ಳಬಹುದು:
ವಿದ್ಯಾರ್ಥಿಗಳು ಆ್ಯಪ್ ಮೂಲಕ ಮತದಾನ ಮಾಡುವಾಗ ಶಿಕ್ಷಕರು ಹಾಳೆಯಲ್ಲಿ ಬರೆದು ಮತದಾನದ ಎಣಿಕೆಯನ್ನು ಮಾಡಬಹುದು. ಆ ಮೂಲಕ ಎಣಕೆ ಪ್ರಕ್ರಿಯೆಯನ್ನು ತಾಳೆ ಹಾಕಿ ನೋಡಬಹುದು. ಇದರಿಂದ ಎರಡು ಹಂತದ ಎಣಿಕೆ ಕಾರ್ಯವಾದಂತಾಗುತ್ತದೆ.
ಗ್ರಾಮೀಣ ಭಾಗದ ಇರುವ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಚುನಾವಣೆ ಹಾಗೂ ಮತದಾನದ ಪ್ರಕ್ರಿಯೆ ಕುರಿತು ಮಾಹಿತಿ ಹಾಗೂ ಕಲ್ಪನೆಯನ್ನು ನೀಡಲು ವಿದ್ಯಾರ್ಥಿಗಳ ಶಾಲಾ ಸಂಸತ್ತನ್ನು ಪ್ರತಿ ವರ್ಷವೂ ರಚಿಸುತ್ತಿದ್ದೇವೆ ಇದನ್ನು ನಮ್ಮ ಶಾಲೆಯಲ್ಲಿ ಶಿಕ್ಷಣದ ಭಾಗವಾಗಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದೇವೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್ ಗೆ ಹೋಲುವ ಮೊಬೈಲ್ ಆಪ್ ಅನ್ನು ಬಳಸಿ ವೋಟಿಂಗ್ ಮಾಡಿಸುತ್ತಿರುವುದು ವಿಶೇಷವಾಗಿದೆ ವಿದ್ಯಾರ್ಥಿಗಳು ಆಸಕ್ತಿಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ- ಚಂದ್ರಶೇಖರ ಶೇಟ್, ಮುಖ್ಯೋಪಧ್ಯಾಯರು ಶ್ರೀರಾಮ ಪ್ರೌಢಶಾಲೆ ಪಟ್ಟೂರು.
ಭವಿಷ್ಯದ ಪ್ರಜೆಗಳಾದಂತಹ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೂಲ ಪರಿಕಲ್ಪನೆಯಾದ ಚುನಾವಣೆಯ ಪ್ರಕ್ರಿಯೆ ಕುರಿತು ಒಂದು ಕಲ್ಪನೆ ಕೊಡಬೇಕಾದ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ನಮ್ಮ ಶಾಲೆ ಪ್ರತಿವರ್ಷ ಚುನಾವಣೆ ನಡೆಸಿ ಶಾಲಾ ಸಂಸತ್ತನ್ನು ರಚಿಸಿ ವಿದ್ಯಾರ್ಥಿಗಳಿಗೆ ಜವಾಬ್ದಾರಿ ನೀಡಿ ವಿದ್ಯಾರ್ಥಿಗಳನ್ನು ಬೆಳೆಸುವ ಕಾರ್ಯ ಮಾಡುತ್ತದೆ.ಈ ಕಾರ್ಯ ಎಲ್ಲಾ ಶಾಲೆಗಳಲ್ಲಿ ಆಗಬೇಕು- ಪ್ರಶಾಂತ ಶೆಟ್ಟಿ ದೇರಾಜೆ, ಸಂಚಾಲಕರು ಶ್ರೀರಾಮ ವಿದ್ಯಾ ಸಂಸ್ಥೆ, ಪಟ್ಟೂರು
ಶಾಲೆಯಲ್ಲಿ ಚುನಾವಣೆ ನಡೆಯುತ್ತಿರುವುದು ತುಂಬಾ ಖುಷಿ ತಂದಿದೆ ಚುನಾವಣಾ ಮತಗಟ್ಟೆ ಹೇಗಿರುತ್ತದೆ? ಓಟ್ ಮಾಡುವುದು ಹೇಗೆ ಎಂಬುದು ಒಂದು ಕಲ್ಪನೆ ನಮಗೆ ಶಾಲಾ ಶಿಕ್ಷಣದಲ್ಲೆ ಸಿಗುತ್ತಿರುವುದು ವಿಶೇಷ ನಾನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೆಚ್ಚು ಮತಗಳಿಂದ ಆಯ್ಕೆಯಾಗಿದ್ದೇನೆ ಜವಾಬ್ದಾರಿ ದೊಡ್ಡದಿದೆ ಶಿಕ್ಷಕರ ಮಾರ್ಗದರ್ಶನದಲ್ಲಿ ನಿಭಾಯಿಸಿಕೊಂಡು ಹೋಗಲು ಪ್ರಯತ್ನಿಸುತ್ತೇನೆ- ಸಂದ್ಯಾ, ಶಾಲಾ ವಿದ್ಯಾರ್ಥಿ ನಾಯಕಿ