ಜೂ.16: ಕರಾವಳಿಯ ಕರಾಳ ಸಂಘರ್ಷದ ಕಥೆಯ ‘ಬೇರ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ- ವಿನು‌ ಬಳಂಜ ನಿರ್ದೇಶನದ ಹಾಗೂ ದಿವಾಕರ ದಾಸ್ ನೇರ್ಲಾಜೆರವರ ನಿರ್ಮಾಣದ ಚೊಚ್ಚಲ ಚಿತ್ರ

0

ಈಗಿನ ಕಾಲಘಟ್ಟದಲ್ಲಿ ಸಮಾಜಲ್ಲಿ ನಡೆಯುತ್ತಿರುವ ವಾಸ್ತವ ಅಂಶಗಳನ್ನು ಜನರಿಗೆ ತಿಳಿಸಿ ಜಾಗೃತಿ ಮೂಡಿಸುವ, ಕರಾವಳಿಯ ಕರಾಳ ಸಂಘರ್ಷದ ವಿಭಿನ್ನ ಕಥಾಹಂದರವನ್ನು ಹೊಂದಿರುವ ಖ್ಯಾತ ನಿರ್ದೇಶಕ ವಿನುಬಳಂಜ ನಿರ್ದೇಶನದ, ಎಸ್.ಎಲ್.ವಿ ಗ್ರೂಪ್ಸ್ ಇಂಡಿಯಾ ಪ್ರೈವೇಟ್ ಲಿ. ಆಡಳಿತ ನಿರ್ದೇಶಕರಾದ ದಿವಾಕರ ದಾಸ್ ನೇರ್ಲಾಜೆರವರ ಎಸ್.ಎಲ್.ವಿ.ಕಲರ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾದ ಚೊಚ್ಚಲ ಚಿತ್ರ ‘ಬೇರ’ ಜೂ.16ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಕರಾವಳಿಗೆ ಫೋಕಸ್ ಆಗಿ ನಿರ್ಮಾಣಗೊಂಡಿರುವ ಈ ಚಿತ್ರ ‘ಕಾಶ್ಮೀರ ಫೈಲ್ಸ್’ ಹಾಗೂ ‘ಕೇರಳ ಸ್ಟೋರಿ’ ನಂತರ ಈಗ ಅದೇ ಹಾದಿಯಲ್ಲಿ ಸಮಾಜದ ವಾಸ್ತವ ಸತ್ಯದ ಬಗ್ಗೆ ಬೆಳಕು ಚೆಲ್ಲುವ‌ ಕೆಲಸವನ್ನು ‘ಬೇರ’ ಮಾಡಲಿದೆ.
ಬೇರ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಕರಾವಳಿಯ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಕಥನವನ್ನು ಹಸಿ ಹಸಿಯಾಗಿಯೇ ತೋರಿಸುವ ಪ್ರಯತ್ನ ಈ ಸಿನಿಮಾ ಮಾಡಲಾಗಿದೆ ಎಂಬುದು ಝಲಕ್ ನೋಡಿದಾಕ್ಷಣ ಅರ್ಥೈಸಿಕೊಳ್ಳಬಹುದು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾ ಹಿಂದೂ – ಮುಸ್ಲಿಂ ಸಂಘರ್ಷದ ಕತೆ ಹೊಂದಿದೆ.
‘ಕಾಶ್ಮೀರ್ ಫೈಲ್ಸ್’, ‘ಕೇರಳ ಸ್ಟೋರಿ’ ಕ್ರಮವಾಗಿ ಕಾಶ್ಮೀರ ಮತ್ತು ಕೇರಳದ ವಾಸ್ತವ ಕತೆಯುಳ್ಳ ಸಿನಿಮಾಗಳು ಎಂಬ ಪ್ರತಿಪಾದನೆ ಚಾಲ್ತಿಯಲ್ಲಿರುವ ಸಂದರ್ಭದಲ್ಲಿ ಕರ್ನಾಟಕ ಕರಾವಳಿಯ ಕೋಮು ಸಂಘರ್ಷದ ಕತೆ ಆಧರಿತ ಸಿನಿಮಾ ಬರುತ್ತಿರುವುದು ಗಮನಾರ್ಹ. ಖ್ಯಾತ ಕಿರುತೆರೆ ನಿರ್ದೇಶಕ ವಿನು ಬಳಂಜ ಈ ಸಿನಿಮಾ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ‘ಮರ್ಚೆಂಟ್ ಆಫ್ ಡೆತ್’ ಎಂಬ ಟ್ಯಾಗ್‌ಲೈನ್ ಇದೆ. ಹಿಂದು, ಮುಸ್ಲಿಂ ಧರ್ಮದ ಅಮಾಯಕ ತರುಣರನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ವ್ಯಕ್ತಿಗಳ ಕುರಿತ ಸಿನಿಮಾ ಎನ್ನಲಾಗಿದೆ. ಇದರಲ್ಲಿ ಹಿಂದೂ, ಮುಸ್ಲಿಂ ಯುವಕರ ಸಾವನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸುವ ನಾಯಕತ್ವದ ಕುರಿತ ಚಿತ್ರಣವೂ ಇದ್ದು, ಇದೆಲ್ಲದರ ಜೊತೆಗೆ ಉಗ್ರವಾದದ ಎಳೆಯೂ ಚಿತ್ರದಲ್ಲಿ ಬಂದಿದೆ ಎನ್ನಲಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ನಿರ್ದೇಶಕ ವಿನು ‘ಯಾರ ಮನೆಯ ಮಕ್ಕಳೂ ಸಾಯಬಾರದು ಎಂಬ ಉದ್ದೇಶ ಈ ಚಿತ್ರದ್ದು’ ಎಂಬ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಕಾರಣ ಧರ್ಮಗಳನ್ನು ಬಳಸಿಕೊಂಡು ಮುಗ್ಧರನ್ನು ಬಲಿ ತೆಗೆದುಕೊಳ್ಳುವ ಜನರ ವಿರುದ್ಧದ ಕತೆಯನ್ನು ಈ ಸಿನಿಮಾ ಒಳಗೊಂಡಿರುವ ಸಾಧ್ಯತೆ ಇದೆ.
ಕರಾವಳಿ ಭಾಗದ ಹೆಚ್ಚಿನ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದು ಮಾತ್ರವಲ್ಲದೆ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಯಾಸಿರ್ ಎಂಬವರ ಮ್ಯೂಸಿಯಂನಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ಉಳಿದಂತೆ ಕರಾವಳಿಯ ವಿವಿದ ಕಡೆಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರ ಜೂ.16ರಂದು ತೆರೆಕಾಣಲಿದೆ.
ರಾಜಶೇಖರ್ ರಮತ್ನಲ್ ಛಾಯಾಗ್ರಹಣ ಮಾಡಿರುವ ಈ ಚಿತ್ರಕ್ಕೆ ರಾಮ್ ದಾಸ್ ಶೆಟ್ಟಿ ವಿಟ್ಲ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಮಣಿಕಾಂತ್ ಕದ್ರಿಯವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ದತ್ತಣ್ಣ, ಸುಮನ್ ತಲ್ವಾರ್, ಹರ್ಷಿಕಾ ಪೂಣಚ್ಚ, ಅಶ್ವಿನ್ ಹಾಸನ್, ಚಿತ್ಕಲ ಬಿರಾದರ್, ಮಂಜುನಾಥ್ ಹೆಗಡೆ, ಸ್ವರಾಜ್ ಶೆಟ್ಟಿ, ತಮ್ಮಣ್ಣ ಶೆಟ್ಟಿ, ಶೈನ್ ಶೆಟ್ಟಿ, ಅಂಜಲಿ ಸುಧಾಕರ್, ಗುರು ಹೆಗಡೆ, ರಾಕೇಶ್ ಮಯ್ಯ, ದೀಪಕ್ ರೈ ಪಾಣಾಜೆ, ಧವಳ್ ದೀಪಕ್ ಇವರೆಲ್ಲರೂ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ದಿವಾಕರ್ ದಾಸ್ ನೇರ್ಲಾಜೆ ನಿರ್ಮಾಣದ ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ ಮೂಡಿಬಂದ ವಿನು ಬಳಂಜ ನಿರ್ದೇಶನದ ಬೇರ ಸಿನಿಮಾದ ಟೀಸರ್ ನ್ನು ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ರವರು ಬಿಡುಗಡೆಗೊಳಿಸಿದ್ದು, ಹತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಭಾರೀ ವೈರಲ್ ಆಗಿತ್ತು. ಇದೀಗ ಬೇರ ಚಿತ್ರದ ಟ್ರೈಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ವೀಕ್ಷಿಸಿ ಶುಭ ಆಶೀರ್ವಾದ ನೀಡಿ ಬಿಡುಗಡೆಗೊಳಿಸಿದ ‘ಬೇರ’ ಸಿನಿಮಾದ ಟ್ರೈಲರ್ ಭರ್ಜರಿ ಹವಾ ಸೃಷ್ಟಿಸಿದೆ. ವಿಭಿನ್ನ ಮತ್ತು ಸಖತ್ ಸ್ಟೋರಿಯನ್ನೂಳಗೊಂಡ ಬೇರ ಸಿನಿಮಾದ ಟ್ರೈಲರ್ ಇದೀಗ 5 ಲಕ್ಷಕ್ಕೂ ಅಧಿಕ ವೀಕ್ಷಣೆಯೊಂದಿಗೆ ಭಾರಿ ಸದ್ದು ಮಾಡುತ್ತಿದೆ. ಜೂ.16ರಂದು ತೆರೆ ಕಾಣಲಿರುವ ಬೇರ ಸಿನಿಮಾದ ಟೀಸರ್ ಹಾಗೂ ಟ್ರೈಲರ್ ಬಗ್ಗೆ ಸಿನಿ ಪ್ರಿಯರು ಈಗಾಗಲೇ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಇದೀಗ ಟ್ರೈಲರ್ ಎಲ್ಲಡೆ ಭಾರೀ ಸೌಂಡ್ ಮಾಡುತ್ತಿದ್ದು ಸಿನಿ ಪ್ರಿಯರಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.
ಜೂ.16ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದ್ದು, ದ.ಕ.ಜಿಲ್ಲೆಯ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಪ್ರದರ್ಶಣ ಕಾಣಲಿದೆ.

LEAVE A REPLY

Please enter your comment!
Please enter your name here