ಕೊಕ್ಕಡದ ಮುಂಡೂರುಪಲ್ಕೆಯಲ್ಲಿ ಜೇನು ಕುಟುಂಬಕ್ಕಾಗಿ ಹೋಗಿದ್ದಾಗ ನಡೆದ ಘಟನೆ- ಕಾಡಿನಲ್ಲಿ ಅಣ್ಣ ಸಂತೋಷ್‌ಗೆ ಕಚ್ಚಿದ ಹಾವು-ವಿಷ ಹೀರಿ ಬದುಕಿಸಿದ ತಮ್ಮ ಗಣೇಶ್

0

ಬೆಳ್ತಂಗಡಿ: ಜೇನು ಕುಟುಂಬಕ್ಕಾಗಿ ಕಾಡಿಗೆ ತೆರಳಿದ್ದಾಗ ತನ್ನ ಅಣ್ಣನಿಗೆ ವಿಷದ ಹಾವು ಕಚ್ಚಿದ್ದನ್ನು ಕಂಡ ತಮ್ಮ ತನ್ನ ಬಾಯಿಯಿಂದ ವಿಷ ಹೀರಿ ಅಣ್ಣನನ್ನು ಪ್ರಾಣಾಪಾಯದಿಂದ ರಕ್ಷಿಸಿದ ಘಟನೆ ಕೊಕ್ಕಡ ಗ್ರಾಮದ ಮುಂಡೂರುಪಲ್ಕೆಯಲ್ಲಿ ಮೇ ೩೦ರಂದು ನಡೆದಿದೆ. ತನ್ನ ಪ್ರಾಣವನ್ನೂ ಲೆಕ್ಕಿಸದೆ ಅಣ್ಣನ ಪ್ರಾಣ ಉಳಿಸಿದ ತಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಅಣ್ಣ ಸಂತೋಷ್‌ರವರನ್ನು ರಕ್ಷಿಸಿದ ತಮ್ಮ ಗಣೇಶ್:
ಕೊಕ್ಕಡ ಗ್ರಾಮದ ಮುಂಡೂರುಪಲ್ಕೆ ನಿವಾಸಿಗಳಾದ ತಿಮ್ಮಯ್ಯ ಮಲೆಕುಡಿಯ ಮತ್ತು ಸುಧಾರವರ ಪುತ್ರರಾದ ಗಣೇಶ್ ಮತ್ತು ಸಂತೋಷ್ ಅವರು ಜೇನು ಕುಟುಂಬ ಸಂಗ್ರಹಕ್ಕಾಗಿ ಪಕ್ಕದ ಕಾಡಿಗೆ ತೆರಳಿದ್ದರು. ಈ ವೇಳೆ ಸಂತೋಷ್ ಅವರಿಗೆ ವಿಷದ ಹಾವು ಕಚ್ಚಿತ್ತು. ಇದನ್ನು ನೋಡಿದ ಗಣೇಶ್‌ರವರು ತನ್ನ ಬಾಯಿಯಿಂದ ವಿಷವನ್ನು ಹೀರಿದ್ದಾರೆ. ಈ ಮೂಲಕ ಪ್ರಾಣಾಪಾಯವನ್ನೂ ಲೆಕ್ಕಿಸದೆ ಅಣ್ಣನ ಪ್ರಾಣ ಉಳಿಸಿದ್ದಾರೆ. ಈ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜೇನು ಕೃಷಿಯ ಕಾರ್ಯ:
ಗಣೇಶ್ ಅವರು ಮೇಲಂತಬೆಟ್ಟು ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಸಿಸಿ ಕ್ಯಾಡೆಟ್‌ನ ವಿದ್ಯಾರ್ಥಿಯಾಗಿದ್ದರು. ಪದವಿ ಪಡೆದ ಬಳಿಕ ಉಜಿರೆ ರುಡ್‌ಸೆಟ್‌ನಲ್ಲಿ ಜೇನುಕೃಷಿ ತರಬೇತಿ ಪಡೆದು ಜೇನುಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಇವರು ತಮ್ಮ ಜೇನು ಪೆಟ್ಟಿಗೆಗೆ ಸ್ಥಳೀಯ ಕಾಡಿನಲ್ಲಿ ಜೇನು ಕಟುಂಬವನ್ನು ಹುಡುಕಿ ಪೆಟ್ಟಿಗೆಯಲ್ಲಿ ಕೂರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮೇ. ೩೦ರಂದು ಅಣ್ಣ ಸಂತೋಷ್ ಹಾಗೂ ತಮ್ಮ ಗಣೇಶ್ ಅವರು ತಮ್ಮ ಮನೆಯ ಸಮೀಪದ ಕಾಡಿಗೆ ಜೇನು ಕುಟುಂಬ ಹುಡುಕಾಟಕ್ಕೆ ತೆರಳಿದ್ದರು. ಕಾಡಿನಲ್ಲಿ ಸುಮಾರು ಎರಡೂವರೆ ಕಿಲೋ ಮೀಟರ್ ದೂರ ಸಾಗಿದ್ದರು. ದಟ್ಟವಾದ ಕಾಡಿನಲ್ಲಿ ಪೊದೆ, ಗಿಡಗಳನ್ನು ಸರಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಕಾಡಿನ ಮಧ್ಯೆ ಅಣ್ಣ ಸಂತೋಷ್ ಅವರಿಗೆ ಗಿಡವೊಂದರಲ್ಲಿದ್ದ ವಿಷಪೂರಿತ ಮಲಬಾರ್ ಗುಳಿ ಮಂಡಲ ಹಾವು ಕೈ ಬೆರಳಿಗೆ ಕಚ್ಚಿತ್ತು. ಸ್ವಲ್ಪ ಸಮಯದಲ್ಲೇ ಅವರು ವಿಷವೇರಿ ತೀವ್ರ ಅಸ್ವಸ್ಥಗೊಂಡರು. ತಮ್ಮ ಗಣೇಶ್ ಅವರಿಗೆ ಈ ವಿಷಯ ಗೊತ್ತಾಗುತ್ತಲೇ ಅವರು ತಕ್ಷಣ ಹಾವು ಕಚ್ಚಿದ ಜಾಗದ ಮೇಲೆ ಕೈಗೆ ಬಟ್ಟೆ ಕಟ್ಟಿದರು. ಹಾವು ಕಚ್ಚಿ ಗಾಯಗೊಂಡ ಅಣ್ಣನ ಬೆರಳಿನ ಜಾಗವನ್ನು ಬಾಯಿಯಿಂದ ಹೀರಿ ಹಾವಿನ ವಿಷವನ್ನು ಮೂರು, ನಾಲ್ಕು ಬಾರಿ ತೆಗೆದು ಪ್ರಥಮ ಚಿಕಿತ್ಸೆ ನೀಡಿದರು. ನಿತ್ರಾಣಗೊಂಡು ನಡೆದು ಬರಲು ಸಾಧ್ಯವಾಗದೆ ಕುಸಿದು ಬಿದ್ದಿದ್ದ ಅಣ್ಣನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಸುಮಾರು ಎರಡೂವರೆ ಕಿ.ಮೀ ಕಾಡಿನಲ್ಲಿ ನಡೆದು ಬಂದ ಗಣೇಶ್ ಅವರು ತಮ್ಮ ಮನೆಯವರಿಗೆ ವಿಷಯ ತಿಳಿಸಿದರು. ನಂತರ ನಾಟಿವೈದ್ಯರಿಂದ ಚಿಕಿತ್ಸೆ ಕೊಡಿಸಿದರು. ಸಂತೋಷ್ ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಗಣೇಶ್ ಅವರ ಸಕಾಲಿಕ ಪ್ರಥಮ ಚಿಕಿತ್ಸೆಯಿಂದ ಅಣ್ಣ ಸಂತೋಷ್ ಅವರ ಜೀವ ಉಳಿದಿದೆ. ಇವರ ಇನ್ನೋರ್ವ ಸಹೋದರ ವಿಠಲ ಕುರ್ಲೆ ಅವರು ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here