ಮಹೇಶ್ ಶೆಟ್ಟಿ ತಿಮರೋಡಿ ಪರ ವಾಟ್ಸಾಪ್ ಸ್ಟೇಟಸ್ ಹಾಕಿದ ವಿಚಾರ- ಮೊಬೈಲ್ ಫೋನ್ ಅಂಗಡಿಯ ಉದ್ಯೋಗಿಗೆ ಜಾತಿ ನಿಂದನೆ, ಹಲ್ಲೆ- ಉಮೇಶ್ ಕುಲಾಲ್, ರಂಜಿತ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಕೇಸ್ ದಾಖಲು

0

ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿ ಪರ ವಾಟ್ಸಾಪ್ ಸ್ಟೇಟಸ್ ಹಾಕಿದ ವಿಚಾರಕ್ಕೆ ಸಂಬಂಧಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಬೆಳ್ತಂಗಡಿ ಕಸಬಾ ಗ್ರಾಮದ ರೆಂಕೆದಗುತ್ತು ಕೆಂಬರ್ಜೆಯ ಶೇಖರ ನಾಯ್ಕ ಎಂಬವರ ಪುತ್ರ ಯಶವಂತ ನಾಯ್ಕ(19ವ)ರವರು ನೀಡಿದ ದೂರಿನಂತೆ ಉಮೇಶ್ ಕುಲಾಲ್, ರಂಜಿತ್ ಮತ್ತಿತರರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 504, 506, 323 ಜೊತೆಗೆ 34 ಐಪಿಸಿ ಮತ್ತು ಕಲಂ 3(1)(S) ಎಸ್.ಸಿ/ಎಸ್.ಟಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಹಿಂದೂ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಯಶವಂತ ನಾಯ್ಕರವರು ಮಹೇಶ್ ಶೆಟ್ಟಿ ತಿಮರೋಡಿ ಪರವಾಗಿ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದರು.ಬಳಿಕ ಉಮೇಶ್ ಕುಲಾಲ್ ಎಂಬವರು ಮೇ.29 ರಂದು ಸಂಜೆ 7-15ಕ್ಕೆ ಯಶವಂತ ನಾಯ್ಕರವರು ಕೆಲಸ ಮಾಡಿಕೊಂಡಿರುವ ಬೆಳ್ತಂಗಡಿ ಕಸಬಾ ಗ್ರಾಮದ ಮೂರು ಮಾರ್ಗದ ಬಳಿಯ ಅನುರಾಧ ಬಿಲ್ಡಿಂಗ್‌ನಲ್ಲಿರುವ ಫೋನು ಬಿ ಮೊಬೈಲ್ ಅಂಗಡಿಗೆ ಬಂದು ಯಶವಂತ ನಾಯ್ಕರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಅಂಗಿಯ ಕಾಲರ್ ಪಟ್ಟಿ ಹಿಡಿದು ಕೈಯಿಂದ ಎದೆಗೆ ಹಲ್ಲೆ ನಡೆಸಿದ್ದಾರೆ. ಯಶವಂತ ನಾಯ್ಕರವರು ತಪ್ಪಿಸಿಕೊಂಡು ಅಂಗಡಿಯ ಒಳಗೆ ಓಡಿ ಹೋಗಿ ತನ್ನ ಬೈಕಿನ ಕೀಯನ್ನು ತೆಗೆದುಕೊಂಡು ಬಂದು ತನ್ನ ಬೈಕ್‌ನಲ್ಲಿ ಕುಳಿತುಕೊಂಡಿರುವಾಗ ಪರಿಚಯದ ರಂಜಿತ್ ಎಂಬವರು ಯಶವಂತ ನಾಯ್ಕರವರ ತಲೆಯಿಂದ ಹೆಲ್ಮೆಟ್ ಎಳೆದು ಜಾತಿ ನಿಂದನೆ ಮಾಡಿದ್ದಲ್ಲದೆ ಬೆದರಿಕೆ ಒಡ್ಡಿದ್ದಾರೆ. ಈ ಸಮಯದಲ್ಲಿ ಆರೋಪಿಗಳೊಂದಿಗೆ ಕೃತ್ಯವೆಸಗಲು ಇತರರೂ ಸಮಾನ ಉದ್ದೇಶದಿಂದ ಸೇರಿಕೊಂಡಿದ್ದರು. ಬಳಿಕ ಯಶವಂತ ನಾಯ್ಕರವರು ಬೆಳ್ತಂಗಡಿ ಸಂತೆಕಟ್ಟೆಗೆ ತನ್ನ ಬೈಕಿನಲ್ಲಿ ಹೋಗಿ ಪರಿಚಯದ ಅಭಿಷೇಕ್ ರವರನ್ನು ಭೇಟಿಯಾಗಿ ನಡೆದ ಘಟನೆಯನ್ನು ತಿಳಿಸಿ ಅವರೊಂದಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here