ಬೆಳ್ತಂಗಡಿ: ವಿಜಯೋತ್ಸವದ ವೇಳೆ ಬಿಜೆಪಿ ಕಾರ್ಯಕರ್ತರ ತಂಡ ಕಾಂಗ್ರೆಸ್ ಕಾರ್ಯಕರ್ತನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಐವರ ವಿರುದ್ಧ ಕೇಸು ದಾಖಲಾಗಿದೆ.
ಬೆಳ್ತಂಗಡಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾಂಗ್ರೆಸ್ ಕಾರ್ಯಕರ್ತ ದಯಾನಂದ ಪೂಜಾರಿ ಎಂಬವರು ಬೆಳ್ತಂಗಡಿ ತಾಲೂಕಿನ ಪೇರಾಡಿ ಎಂಬಲ್ಲಿ ಬಿಜೆಪಿ ವಿಜಯೋತ್ಸವ ನಡೆಯುತ್ತಿತ್ತು.
ಬಿಜೆಪಿಯ 150 ಕಾರ್ಯಕರ್ತರ ತಂಡ ಅಲ್ಲಿ ಇತ್ತು. ವಿಜಯಾ ವೈನ್ ಶಾಪ್ ಬಳಿ ಮೆರವಣಿಗೆ ಬಂದಾಗ ಅಲ್ಲಿಯೇ ಇದ್ದ ನನ್ನನ್ನು ಬರುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡಿದರು. ನಾನು ಬರುವುದಿಲ್ಲ ಎಂದು ಹೇಳಿದರೂ ಬಲವಂತವಾಗಿ ವಿಜಯೋತ್ಸವಕ್ಕೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ದಯಾನಂದ ಪೂಜಾರಿ ಆರೋಪಿಸಿದ್ದರು. ಈ ಸಂಬಂಧ ವೇಣೂರು ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ಆಸ್ಪತ್ರೆಗೆ ಮಾಜಿ ಶಾಸಕ ವಸಂತ ಬಂಗೇರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹಾಗೂ ಕಾರ್ಯಕರ್ತರು ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ವಸಂತ ಬಂಗೇರ ಮತ್ತು ರಕ್ಷಿತ್ ಶಿವರಾಮ್ ಅವರು ಅಪರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಂಡು ಮುಂದಕ್ಕೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು. ಬಳಿಕ ಬೆಳ್ತಂಗಡಿ ಆಸ್ಪತ್ರೆಗೆ ಭೇಟಿ ನೀಡಿದ್ದ ವೃತ್ತ ನಿರೀಕ್ಷಕ ಶಿವಕುಮಾರ್ ಮತ್ತು ವೇಣೂರು ಠಾಣಾ ಎಸ್.ಐ. ಶ್ರೀಶೈಲ ಮುರುಗೋಡುರವರು ದಯಾನಂದ ಪೂಜಾರಿಯವರ ಹೇಳಿಕೆ ಪಡೆದುಕೊಂಡು ಸುನಿಲ್, ಅನಿಲ್, ಸುಧೀರ್, ಸುದರ್ಶನ್ ಮತ್ತು ಸಂತೋಷ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.