ಬೆಳ್ತಂಗಡಿ: ’ಬೇರ’ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿ ನೋಡಿದೆ, ಬಹಳ ಇಂಟ್ರೆಸ್ಟಿಂಗ್ ಆಗಿದೆ. ವಿಶ್ವಲ್ ತುಂಬಾ ಚೆನ್ನಾಗಿದೆ. ಇದೊಂದು ಬೇರೆ ತೆರನಾದ ವಿಭಿನ್ನ ಸಬ್ಜೆಕ್ಟ್ ಹೊಂದಿದ ಚಿತ್ರವಾಗಿದೆ. ಮೇ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು ಯಶಸ್ವಿ ಉದ್ಯಮಿ ದಿವಾಕರ ದಾಸ್‌ರವರು ನಿರ್ಮಾಣ ಮಾಡಿದ ಚೊಚ್ಚಲ ಚಿತ್ರ ಇದಾಗಿದ್ದು ಎಲ್ಲರೂ ಈ ಚಿತ್ರವನ್ನು ನೋಡಿ ಎಂದು ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರು ಹೇಳಿದರು.
ಅವರು ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿ.ನ ಆಡಳಿತ ನಿರ್ದೇಶಕರಾದ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ದಿವಾಕರ ದಾಸ್ ರವರು ತನ್ನ ಎಸ್. ಎಲ್.ವಿ. ಕಲರ್ಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣ ಮಾಡಿದ ಬಿಗ್ ಬಜೆಟ್ ಚಿತ್ರ ’ಬೇರ’ದ ಟೀಸರ್ ಅನ್ನು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ಸಿನಿಮಾ ನಿರ್ದೇಶಕ ಬೆಳ್ತಂಗಡಿಯ ವಿನು ಬಳಂಜ ಮಾತನಾಡಿ, ಕಳೆದ ನಾಲ್ಕೈದು ವರ್ಷ ನಾನು ವೈಯಕ್ತಿಕ ಕಾರಣದಿಂದ ಕಿರುತೆರೆ ಹಾಗೂ ಹಿರಿತೆರೆಯಿಂದ ದೂರವಿದ್ದೆ. ಆನಂತರ ಒಂದು ಮ್ಯೂಸಿಯಂಗೆ ಹೋದೆ. ಅಲ್ಲೇ ಈ ಕಥೆ ಹುಟ್ಟಿದ್ದು. ಆನಂತರ ಮತ್ತೆ ನನ್ನನ್ನು ಸಿನಿಮಾ ಮಾಡಲು ಪ್ರೇರೇಪಿಸಿದ್ದು ನಿರ್ಮಾಪಕ ದಿವಾಕರ್ ದಾಸ್. ತುಳುವಿನಲ್ಲಿ ಬೇರ ಎಂದರೆ ಕನ್ನಡದಲ್ಲಿ ವ್ಯಾಪಾರ ಎಂದು ಅರ್ಥ. ಅಮಾಯಕರನ್ನು ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಹಾಗೂ ಯಾವ ತಾಯಂದ್ರ ಮಕ್ಕಳೂ ಇನ್ನೊಬ್ಬರಿಂದ ಸಾಯಬಾರದು ಎಂಬುದೇ ಕಥಾಹಂದರ. ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತ ಇಲ್ಲ. ಬರುವ ಎಲ್ಲಾ ಪಾತ್ರಗಳು ಮುಖ್ಯ ಪಾತ್ರಗಳಾಗಿರುತ್ತದೆ. ಸದ್ಯ ಟೀಸರ್ ಬಿಡುಗಡೆ ಮಾಡಿದ್ದೇವೆ. ಮೇ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ ಎಂದರು.
ಸಿನಿಮಾ ನಿರ್ಮಾಪಕ ದಿವಾಕರ್ ದಾಸ್ ನೇರ್ಲಾಜೆ ಮಾತನಾಡಿ ಕೇವಲ ಮೂರು ಜನ ಕೆಲಸಗಾರರಿಂದ ಶುರುವಾದ ಎಸ್ಎಲ್ವಿ ಸಂಸ್ಥೆಯಲ್ಲಿ ಇಂದು ನೂರೈವತ್ತು ಜನ ಕೆಲಸಗಾರರಿದ್ದಾರೆ. ಈಗ ಎಸ್ಎಲ್ವಿ ಕಲರ್ಸ್ ಲಾಂಛನದಲ್ಲಿ ಬೇರ ಎಂಬ ಮೊದಲ ಚಿತ್ರ ನಿರ್ಮಾಣ ಮಾಡಿದ್ದೇವೆ.. ಈ ಚಿತ್ರಕ್ಕೆ ನಿಮ್ಮ ಹಾರೈಕೆ ಇರಲಿ ಎಂದು ಹೇಳಿದರು. ಖ್ಯಾತ ನಟ ಸುಮನ್ ತಲ್ವಾರ್, ಹರ್ಷಿಕಾ ಪೂಣಚ್ಚ, ಹರ್ಷವರ್ಧನ್, ಅರವಿಂದ್ ರಾವ್, ರಾಕೇಶ್ ಮಯ್ಯ, ದತ್ತಣ್ಣ, ಅಶ್ವಿನ್ ಹಾಸನ್, ಯಶ್ ಶೆಟ್ಟಿ, ಶೈನ್ ಶೆಟ್ಟಿ, ಸ್ವರಾಜ್ ಶೆಟ್ಟಿ, ದೀಪಕ್ ರೈ ಪಾಣಾಜೆ, ತಮ್ಮಣ್ಣ ಶೆಟ್ಟಿ, ರಾಜಶೇಖರ ಶೆಟ್ಟಿ, ಮಂಜುನಾಥ್ ಹೆಗ್ಡೆ, ಎಂ. ಕೆ. ಮಠ, ಚಿತ್ಕಲ ಬಿರಾದಾರ್,ಅಂಜಲಿ, ಶೋಭರಾಣಿ, ಶಾಂತಲಾ ಕಾಮತ್, ಗುರು ಹೆಗ್ಡೆ, ಸಬಿತ ಕಾಮತ್, ಧವಲ್, ಪ್ರಸನ್ನ, ಪ್ರದೀಪ್ ಚಂದ್ರ ಕುತ್ಪಾಡಿ, ಗಿರೀಶ್ ಮೊದಲಾವದರು ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಟೀಸರ್ ಬಿಡುಗಡೆ ಸಂದರ್ಭದಲ್ಲಿ ಸಿನಿಮಾ ಛಾಯಾಗ್ರಾಹಕ ರಾಜಶೇಖರ್ ಹಾಗೂ ಕಾರ್ಯಕಾರಿ ನಿರ್ಮಾಪಕ ರಾಮದಾಸ ಶೆಟ್ಟಿ ವಿಟ್ಲ, ದತ್ತಣ್ಣ, ಯಶ್ ಶೆಟ್ಟಿ, ಹರ್ಷಿಕಾ ಪೂಣಚ್ಛ, ಅಶ್ವಿನ್ ಹಾಸನ್, ಚಿತ್ಕಲ ಬಿರಾದಾರ್, ಮಂಜುನಾಥ್ ಹೆಗಡೆ, ಗುರು ಹೆಗಡೆ, ರಾಕೇಶ್ ಮಯ್ಯ, ಧವಳ್ ದೀಪಕ್ ಸೇರಿದಂತೆ ಹಲವಾರು ಕಲಾವಿದರು ಉಪಸ್ಥಿತರಿದ್ದರು.