ಕಾಂಗ್ರೆಸ್ ಜನ ಬೆಂಬಲ ನೋಡಿ ಹತಾಶಾ ಭಾವನೆಯಿಂದ ಬಿಜೆಪಿಯವರೇ ಗಲಾಟೆ ಮಾಡಿದ್ದಾರೆ: ಮಾಜಿ ಶಾಸಕ ವಸಂತ ಬಂಗೇರ ಆರೋಪ – ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ಎ.೧೭ರಂದು ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ರವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ದಾಖಲೆ ಸಂಖ್ಯೆಯಲ್ಲಿ ನಮ್ಮ ಕಾರ್ಯಕರ್ತರು ಬಂದು ಬೆಂಬಲ ಸೂಚಿಸಿದ್ದಾರೆ. ಈ ಜನ ಸಂಖ್ಯೆಯನ್ನು ಕಂಡು ಹತಾಶೆಗೊಂಡ ಬಿಜೆಪಿಯವರು ಅವರೇ ಗಲಾಟೆ ಮಾಡಿದ್ದಾರೆ ಎಂದು ಮಾಜಿ ಶಾಸಕ ವಸಂತ ಬಂಗೇರರು ಹೇಳಿದ್ದಾರೆ.
ಎ.೧೯ರಂದು ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಎ.೧೭ರಂದು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ಬಿಜೆಪಿಯವರಿಗೆ ಬೆಳಗ್ಗೆ ೧೦ ರಿಂದ ೧೨ ರವರೆಗೆ ಹಾಗೂ ನಮಗೆ ೧೨ ರಿಂದ ಮಧ್ಯಾಹ್ನ ೩ ಗಂಟೆ ಒಳಗೆ ನಾಮಪತ್ರಕ್ಕೆ ಸಮಯ ನೀಡಲಾಗಿತ್ತು. ನಾಮಪತ್ರ ಸಲ್ಲಿಸಿ ವಾಪಸ್ ಹೋಗಲು ಬೇರೆ ಬದಲಿ ರಸ್ತೆಯನ್ನು ತೋರಿಸಲಾಗಿತ್ತು.ಆದರೆ ಮೊನ್ನೆಯ ದಿನ ನಮ್ಮ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಬರುವಾಗ ನಮ್ಮೊಡನಿದ್ದ ಜನ ಸಂಖ್ಯೆಯನ್ನು ನೋಡಿ ಬಿಜೆಪಿಗರಿಗೆ ಹತಾಶೆಯಾಗಿದೆ.ಅವರೇ ಗಲಾಟೆ ಎಬ್ಬಿಸಿ, ಅವರ ಕಾರಿನ ಗಾಜನ್ನು ಅವರೇ ಹೊಡೆದಿದ್ದಾರೆ. ನಾಮಪತ್ರ ಸಲ್ಲಿಸಿ ಹೋಗಲು ಬದಲಿ ರಸ್ತೆಯನ್ನು ತೋರಿಸಿದ್ದರೂ ಬಿಜೆಪಿಗರು ನಮ್ಮ ಮೆರವಣಿಗೆ ಬರುವಲ್ಲೇ ವಾಪಸ್ ಬಂದಿದ್ದರೆ. ಅದಕ್ಕೆ ಪೋಲೀಸರು ಅವಕಾಶ ನೀಡಿದ್ದು ಸರಿಯಲ್ಲಿ. ಆದ್ದರಿಂದ ಅಲ್ಲಿ ಗಲಾಟೆ ಆಗಲೂ ಪೋಲೀಸರೂ ಕಾರಣ ಆಗುತ್ತಾರೆ ಎಂದವರು ಆರೋಪಿಸಿದರು. ನಾನು ೧೦ ಬಾರಿ ನಾಮಪತ್ರ ಸಲ್ಲಿಸಿzನೆ. ಯವತ್ತೂ ಈ ರೀತಿಯ ಜನ ಸಂಖ್ಯೆ ನೋಡಿಲ್ಲ ಎಂದ ಬಂಗೇರರು ಮೊನ್ನೆಯ ನಾಮಪತ್ರ ಸಲ್ಲಿಕೆಗೆ ಬಂದು ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಆದರೂ ಕೆಲವು ಗ್ರಾಮಗಳಲ್ಲಿ ಬಿಜೆಪಿಯವರು ಹಣ ಹಂಚಿಕೆ ಮಾಡಿ ನಾಮಪತ್ರ ಸಲ್ಲಿಕೆ ಸಂದರ್ಭ ಹೋಗಬಾರದಂದು ಹೇಳಿದ್ದರಿಂದ ಹಲವು ಬಂದಿಲ್ಲ. ಇಲ್ಲದಿದ್ದರೆ ಇನ್ನೂ ೩ ಸಾವಿರ ಮಂದಿ ನಮ್ಮ ಮೆರವಣಿಗೆಯಲ್ಲಿ ಹೆಚ್ಚು ಇರುತ್ತಿದ್ದರು ಎಂದ ಅವರು ಈ ಬಾರಿಯ ಚುನಾವಣೆ ಶಾಂತಿಯಿಂದ ನಡೆಸಲು ಕಾಂಗ್ರೆಸ್ ಸಹಕಾರ ನೀಡುತ್ತದೆ ಎಂದು ಹೇಳಿದರು.

೫೦ ಸಾವಿರ ಜನಸಂಖ್ಯೆ ವರದಿಯಿಂದ ದಿಗ್ಭ್ರಮೆ, ಸತ್ಯ ಸಂಗತಿ ಪ್ರಚುರ ಪಡಿಸಿ : ಬಂಗೇರ

ಪತ್ರಿಕಾಗೋಷ್ಠಿಯಲ್ಲಿ ವಸಂತ ಬಂಗೇರರು ಪತ್ರಕರ್ತರನ್ನೇ ಪ್ರಶ್ನಿಸಿದ ಘಟನೆಯೂ ನಡೆಯಿತು. ಮೊನ್ನೆ ನಾಮಪತ್ರ ಸಲ್ಲಿಕೆಯ ಸಂದರ್ಭ ಬಿಜೆಪಿ ಶಾಸಕ ಹರೀಶ್ ಪೂಂಜರವರೊಂದಿಗೆ ೫೦ ಸಾವಿರ ಬೆಂಬಲಿಗರೆಂದು ಪತ್ರಿಕೆ ಮತ್ತು ಮಾಧ್ಯಮದಲ್ಲಿ ವರದಿ ನೋಡಿ ನನಗೆ ದಿಗ್ಭ್ರಮೆಯಾಗಿದೆ. ನಾನು ಮೆರವಣಿಗೆಯನ್ನು ನೋಡಿದ್ದೇನೆ. ನೀವು ಗಮನಿಸಿರಬಹುದು ಎಷ್ಟು ಜನ ಆಗಬಹುದೆಂದು…ಸತ್ಯ ಹೇಳಿ? ಎಂದು ಬಂಗೇರರು ಪ್ರಶ್ನಿಸಿದರು. ೫೦ ಸಾವಿರ ಎಂಬ ವರದಿ ಮಾಡಿದ್ದನ್ನು ಎಲ್ಲರೂ ನೋಡುತ್ತಾರೆ. ಆದ್ದರಿಂದ ಸತ್ಯಸಂಗತಿಯನ್ನು ಮಾತ್ರ ಪ್ರಚುರ ಪಡಿಸಿ.ಸುಳ್ಳು ಮಾಹಿತಿ ನೀಡಬೇಡಿ ಎಂದು ಅವರು ಕೇಳಿಕೊಂಡರಲ್ಲದೆ, ಪೋಲೀಸ್ ರಿಪೋರ್ಟ್ ಪ್ರಕಾರ ಬಿಜೆಪಿ ಬೆಂಬಲಿಗರ ಸಂಖ್ಯೆಯಿಂದ ಒಂದೂವರೆಯಿಂದ ಎರಡು ಸಾವಿರದಷ್ಟು ಹೆಚ್ಚು ಜನ ಕಾಂಗ್ರೆಸ್ ನಲ್ಲಿ ಇದ್ದುದು ಎಂಬ ವರದಿ ಇದೆ. ನಾನು ದೈವ ದೇವರನ್ನು ನಂಬುವವ ಯಾವತ್ತೂ ಸುಳ್ಲು ಹೇಳುವುದಿಲ್ಲ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಕೆ.ಶೈಲೇಶ್ ಕುಮಾರ್ ಮಾತನಾಡಿ ನಾಮಪತ್ರ ಹಾಗೂ ಸಮಾವೇಶಕ್ಕೆ ನಮ್ಮ ಕಾರ್ಯಕರ್ತರು ಬರುವಾಗ ಗುರುವಾಯನಕೆರೆ ಹಾಗೂ ಲಾಯಿಲದಲ್ಲಿ ಪೋಲೀಸರು ತಡೆದಿದ್ದಾರೆ. ಇದು ಸರಿಯಾದ ಕ್ರಮವಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆಯಲು ಹೇಳಿದ್ದಾರೆ.ಆದ್ದರಿಂದ ಕಾರ್ಯಕರ್ತರು ಬರಲು ಸಾಧ್ಯವಾಗಲಿಲ್ಲ. ಇಲ್ಲವಾದರೆ ಇನ್ನೂ ಹೆಚ್ಚು ಮಂದಿ ಸೇರುತ್ತಿದ್ದರು ಎಂದ ಅವರು ಗಲಾಟೆ ನಡೆದ ಬಳಿಕ ಶಾಸಕ ಹರೀಶ್ ಪೂಂಜರು ಕಾಂಗ್ರೆಸ್ ನವರು ಬೀರ್ ಕುಡಿದಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಅದು ಖಂಡನೀಯ. ನಾವು ಬಸದಿ ವಠಾರದಿಂದ ಬಂದವರು. ಅಲ್ಲಿ ಬೀಯರ್ ಕುಡಿಯಲು ಆಗುತ್ತದಾ ಎಂದು ಪ್ರಶ್ನಿಸಿದರು. ಬಿಜೆಪಿಯವರು ಮಾಡಿದಂತೆ ನಾವು ಆರೋಪ ಮಾಡುವುದಿಲ್ಲ. ಜನರು ಕೋಮು ಸಂಘರ್ಷದಂತ ಘಟನೆಯಿಂದ ಬೇಸತ್ತಿದ್ದಾರೆ. ಬೆಲೆ ಏರಿಕೆ, ನೋಟ್ ಬ್ಯಾನ್, ಜಿಎಸ್‌ಟಿ ಇದೆಲ್ಲದಿದ್ದಲೂ ತೊಂದರೆಗೊಳಗಾಗಿದ್ದಾರೆ ಆದ್ದರಿಂದ ಈ ಬಾರಿ ಜನರು ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್ ಕಾನೂನು ಸಲಹೆಗಾರ ಮನೋಹರ ಕುಮಾರ್ ಇಳಂತಿಲ ಮಾತನಾಡಿ ನಮ್ಮ ರೋಡ್ ಶೋ ಸಂದರ್ಭ ಬಿಜೆಪಿಯ ಶಾಸಕ ಹರೀಶ್ ಪೂಂಜರ ಆಪ್ತರೊಬ್ಬರ ಖುಷಿ ಅಂಬ್ಯುಲೆನ್ಸ್ ೧೧ ಬಾರಿ ಅತ್ತಿಂದಿತ್ತ ಹೋಗಿದೆ. ಅದರಲ್ಲಿ ರೋಗಿಗಳಿಲ್ಲದಿದ್ದರೂ ಅತ್ತಿಂದಿತ್ತ ಹೋಗಿ ನಮಗೆ ತೊಂದರೆ ನೀಡಿದ್ದಾರೆ.ಈ ಕುರಿತು ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗುವುದು.ಇಲಾಖಾ ತನಿಖೆ ನಡೆಯಬೇಕೆಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ಜಿಲ್ಲಾ ವೀಕ್ಷಕ ಪ್ರಶಾಂತ್ ವೇಗಸ್ ಅಳದಂಗಡಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಿ.ಜೆ. ಇದ್ದರು.

LEAVE A REPLY

Please enter your comment!
Please enter your name here