ಅಳದಂಗಡಿ : ವೈದಿಕ, ಜೈನ ಎಂಬ ಬೇಧವಿಲ್ಲದೆ ಮತೀಯ ಸೌಹಾರ್ದತೆಯಿಂದ ದೇವಸ್ಥಾನ ಮುನ್ನಡೆಯುತ್ತಿರುವುದು ಮಾದರಿಯಾಗಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ ಎಂ. ಪ್ರಭಾಕರ ಜೋಶಿ ಹೇಳಿದರು.
ಅವರು ಎ.5 ರಂದು ಸೂಳಬೆಟ್ಟು ಬರಾಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭ ನಡೆದ ಅಭಿನಂದನಾ ಪುರಸ್ಕಾರ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಚಿತ್ಪಾವನ ಸಮುದಾಯದ ಅತ್ಯಂತ ಪ್ರಾಚೀನ ದೇವಸ್ಥಾನದ ಪರಂಪರೆ ಅನೂಚಾನವಾಗಿ, ಉದಾರವಾಗಿ ಈಗಲೂ ಮುಂದುವರಿಯುತ್ತಿರುವುದು ಸಂತಸದ ವಿಚಾರ.ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಕೆಲ ಸಮುದಾಯಗಳ ಪೈಕಿ ಚಿತ್ಪಾವನ ಸಮಾಜವೂ ಒಂದು.ಈ ಸಮುದಾಯ ದೇಶದ ಉನ್ನತಿಗೂ ಅನೇಕ ಕೊಡುಗೆಗಳನ್ನು ನೀಡಿರುವುದು ಸ್ಮರಣೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲ ಅವರು ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿರುವುದು ಶ್ಲಾಘನೀಯ.ಇದಕ್ಕೆ ಕಾರಣ ಇಂದಿನ ಆಡಳಿತೆ ಮೊಕ್ತೇಸರರ ಬದ್ಧತೆ.ಮುಂದಿನ ವರ್ಷ ಇವರ ನೇತೃತ್ವದಲ್ಲೇ ಬ್ರಹ್ಮಕಲಶೋತ್ಸವ ನೆರವೇರಲಿ ಎಂದು ಹಾರೈಸಿದರು.
ಈ ಸಂದರ್ಭ ದಾನಿಗಳಾದ ನಾರಾಯಣ ಹೆಬ್ಬಾರ್ ಬೆಂಗಳೂರು, ಧ್ವಜಸ್ತಂಭದ ದಾನಿಗಳಾದ ಮುತ್ತಯ್ಯ ಪೂಜಾರಿ ಹಾಗೂ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಎಂ. ಪ್ರಭಾಕರ ಜೋಶಿ ಅವರನ್ನು ಸಮ್ಮಾನಿಸಲಾಯಿತು.
ಅಧ್ಯಾಪಕ ಕಾಜಿಮುಗೇರಿನ ವಿಕ್ರಾಂತ ಕೇಳ್ಕರ್ ಅವರ ಚೊಚ್ಚಲ ಕವನ ಸಂಕಲನ ಸತ್‌ಛಾಯಾವನ್ನು ಅಜಿಲರು ಬಿಡುಗಡೆಗೊಳಿಸಿದರು.
ಆಡಳ್ತೆಮೊಕ್ತೇಸರ ಸದಾನಂದ ಸಹಸ್ರಬುದ್ಧೆ ಅವರು ದೇವಸ್ಥಾನದಲ್ಲಿ ನಡೆದ ಸುಮಾರು ಒಂದು ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಿದರು. ಮೊಕ್ತೇಸರ ಗಜಾನನ ನಾತು ಅವರು ಸನ್ಮಾನಿತರ ಪರಿಚಯ ನೀಡಿದರು. ಚಂದ್ರಕಾಂತ ಗೋರೆ ಕುದ್ಯಾಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಮೊಕ್ತೇಸರರುಗಳಾದ ಪ್ರಭಾಕರ ಆಠವಳೆ, ಪದ್ಮನಾಭ ನಾತು, ದಯಾನಂದ ನಾತು, ಪುರುಷೋತ್ತಮ ತಾಮ್ಹನ್‌ಕರ್ ಉಪಸ್ಥಿತರಿದ್ದರು.
ಬಳಿಕ ದೇವರ ಬಲಿ ಉತ್ಸವ, ಪಲ್ಲಕಿ ಉತ್ಸವ, ಅಷ್ಟಸೇವಾದಿಗಳು ನೆರವೇರಿದವು.ರಾತ್ರಿ ಕೊಡಮಣಿತ್ತಾಯ ದೈವದ ನೇಮ, ಮಹಾರಥೋತ್ಸವ ನಡೆದು ದೈವ-ದೇವರ ಭೇಟಿ ನಡೆಯಿತು. ಕಾಜಿಮುಗೇರು ತಂತ್ರಿಗಳಾದ ಸೀತಾರಾಮ ಕೇಳ್ಕರ್ ಅವರ ನೇತೃತ್ವದಲ್ಲಿ ಹಾಗೂ ಪದ್ಮನಾಭ ಜೋಶಿ, ಭಾರ್ಗವ ಮರಾಠೆ, ಸಂತೋಷ ಕೇಳ್ಕರ್, ಅಮರೇಶ ಜೋಶಿ, ವೆಂಕಟೇಶ ಜೋಶಿ ಅವರ ಪೌರೋಹಿತ್ಯದಲ್ಲಿ ಎ. ೨ ರಂದು ಗರುಡಧ್ವಜಾರೋಹಣದ ಮೂಲಕ ಆರಂಭವಾದ ವಾರ್ಷಿಕ ಜಾತ್ರೋತ್ಸವ ನಡೆಯಿತು.
ಬರಾಯ ಜಾತ್ರೋತ್ಸವದಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ
p>