ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರಿಗೆ “ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ”

0

ತೆಂಕುತಿಟ್ಟಿನ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರಿಗೆ ಈ ಸಾಲಿನ “ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ” ಎ.7 ಸಂಜೆ ಗಂಟೆ 4 ಕ್ಕೆ ಮುಂಬಯಿ ಮಹಾನಗರದ ಕುರ್ಲಾ ಬಂಟರ ಭವನದಲ್ಲಿ ಪ್ರದಾನವಾಗಲಿದೆ. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ರಿ. ಉಜಿರೆ ರಜತಪರ್ವ ತಾಳಮದ್ದಳೆ ಸರಣಿ 3 ದಿನದ ಕಾರ್ಯಕ್ರಮ ಇದೇ ದಿನ ಆರಂಭವಾಗಲಿದೆ ಎಂದು ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ತಿಳಿಸಿದ್ದಾರೆ.
ತಮ್ಮ ವಿಶಿಷ್ಟ ಧ್ವನಿ:
ಯಕ್ಷಗಾನ ಕ್ಷೇತ್ರದ ತಾರಾವರ್ಚಸ್ಸಿನ, ಪ್ರಥಮ ವಿಮಾನ ಭಾಗವತ ಎಂಬ ಖ್ಯಾತಿಯ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿಯವರು ತಾಳಮದ್ದಳೆ ಅರ್ಥಧಾರಿ ಪೊಲ್ಯ ದೇಜಪ್ಪ ಶೆಟ್ಟಿ ಮತ್ತು ಪದ್ಮಾವತಿ ಶೆಟ್ಟಿಯವರಿಗೆ 27-12-1956 ರಲ್ಲಿ ಜನಿಸಿದರು. ಉಡುಪಿ ಎಂ. ಜಿ. ಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ ಕಾಲಕ್ಕೆ ಕು. ಶಿ. ಹರಿದಾಸ ಭಟ್ಟರ ಪ್ರೇರಣೆಯಿಂದ ಡಾ| ಶಿವರಾಮ ಕಾರಂತರ ಯಕ್ಷಗಾನ ಕೇಂದ್ರ ಸೇರಿ ಶಾಸ್ತ್ರೀಯವಾಗಿ ಬಡಗುತಿಟ್ಟು ಯಕ್ಷಗಾನದ ನಾಟ್ಯಾಭ್ಯಾಸ ಮಾಡಿದರು. ನೀಲಾವರ ರಾಮಕೃಷ್ಣಯ್ಯ, ಹಿರಿಯಡಕ ಗೋಪಾಲ ರಾವ್, ಕೋಟ ಮಹಾಬಲ ಕಾರಂತ, ಜಾನುವಾರುಕಟ್ಟೆ ಗೋಪಾಲಕೃಷ್ಣ ಕಾಮತ್, ಹೆರಂಜಾಲು ವೆಂಕಟರಮಣ ಗಾಣಿಗ ಮೊದಲಾದ ಗುರುಗಳ ಮಾರ್ಗದರ್ಶನ ಪಡೆದರು.
ಪಣಿಯೂರು ಬಾಲಕೃಷ್ಣ ತಂತ್ರಿ ಅವರಲ್ಲಿ ಶಾಸ್ತ್ರೀಯ ಸಂಗೀತಾಭ್ಯಾಸ, ವಿದ್ವಾನ್ ದಾಮೋದರ ಮಂಡೆಚ್ಚರಲ್ಲಿ ತೆಂಕುತಿಟ್ಟಿನ ಭಾಗವತಿಕೆಗೆ ಮಾರ್ಗದರ್ಶನ ಪಡೆದರು. ಬಿ. ಕಾಂ. ಪದವಿ ಬಳಿಕ ಬ್ಯಾಂಕಿನ ನೌಕರಿಗೆ ಸೇರಿ, ಉದ್ಯೋಗದೊಡನೆ ವೃತ್ತಿಪರ ಕಲಾವಿದರಿಗೆ ಸಾರಿಸಾಟಿಯಾಗಿ ಯಕ್ಷಗಾನದಲ್ಲಿ ತೊಡಗಸಿ ಕೊಂಡರು.
ಪೆರ್ಡೂರು ಮೇಳದಲ್ಲಿ ಭಾಗವತರಾಗಿ ಒಂದು ವರ್ಷದ ತಿರುಗಾಟವನ್ನು ನಡೆಸಿ ಕದ್ರಿ ಮೇಳದಲ್ಲಿ 8 ವರ್ಷ, ಮಂಗಳಾದೇವಿ ಮೇಳದಲ್ಲಿ 2 ವರ್ಷಗಳ ಕಾಲ ಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದುಕೊಂಡೇ ತಿರುಗಾಟ ಮಾಡಿದವರು. 90 ರ ದಶಕದಲ್ಲಿ ಯಕ್ಷಗಾನ ಪ್ರದರ್ಶನಕ್ಕೆಂದೇ ವಿಮಾನದಲ್ಲಿ ಮುಂಬಯಿಯಿಂದ ಊರಿಗೆ ಬರುತ್ತಿದ್ದ ಏಕೈಕ ಕಲಾವಿದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿಯವರು. ಇದು ಅವರ ತಾರಾವರ್ಚಸ್ಸು. ದಿ| ಕಾಳಿಂಗ ನಾವಡರ ಜತೆ ಮೊದಲ ಬಾರಿಗೆ ದ್ವಂದ್ವ ಹಾಡುಗಾರಿಕೆ ಪ್ರಾರಂಭವಾದದ್ದು ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರ ಜತೆ. ಇದು ಹೊಸ ಪರಂಪರೆಗೆ ನಾಂದಿ ಹಾಡಿತು. ಪೊಲ್ಯರ ಯಕ್ಷಗಾನದ ಸಾಧನೆಯನ್ನು ಗುರುತಿಸಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ’ನಾದಲೋಲ’ ಅಭಿನಂದನಾ ಗ್ರಂಥ ಬಂದಿದೆ. 250 ಕ್ಕೂ ಹೆಚ್ಚು ಮಾನ ಸಮ್ಮಾನಗಳು ನಡೆದಿವೆ.
ಪತ್ನಿ ನೀತಾ ಶೆಟ್ಟಿ ಮತ್ತು ಮಕ್ಕಳಾದ ನವ್ಯ, ಕಾರ್ತಿಕ್ ಜತೆಯಲ್ಲಿ ಸದ್ಯ ಮುಂಬೈಯಲ್ಲಿ ನೆಲೆಸಿ ತಮ್ಮ ಯಕ್ಷಗಾನ ಕಲಾಸೇವೆಯನ್ನು ಮುಂದುವರೆಸುತ್ತ ಬರುತ್ತಿದ್ದಾರೆ.
ರಜತ ವರ್ಷದಲ್ಲಿ ಕುರಿಯ ಪ್ರತಿಷ್ಠಾನ ಪೊಲ್ಯರಿಗೆ ಪ್ರಶಸ್ತಿ ನೀಡುವ ಮೂಲಕ ಕಲೆ ಕಲಾವಿದರ ಮಾನ ಸನ್ಮಾನದಲ್ಲಿ ಗುರುತರವಾಗಿ ತೊಡಗಿಸಿಕೊಂಡಿದೆ. ರಜತ ಸರಣಿಯಲ್ಲಿ ವರ್ಷವೊಂದರಲ್ಲಿ 100 ತಾಳಮದ್ದಳೆ ‌ಮಾಡುವ ಸಂಕಲ್ಪ ಪೂರ್ಣವಾಗುವ ಹಂತದಲ್ಲಿ ಇದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

p>

LEAVE A REPLY

Please enter your comment!
Please enter your name here