ವೇಣೂರು: ಸುಮಾರು ರೂ. 1.85 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಾಣಿಜ್ಯ ಸಂಕೀರ್ಣ ಒಳಗೊಂಡ ವೇಣೂರು ಮುಖ್ಯ ಬಸ್ ತಂಗುದಾಣದ ಉದ್ಘಾಟನೆಯು ಮಾ.28 ರಂದು ಸಂಜೆ 6 ಗಂಟೆಗೆ ನೆರವೇರಲಿದೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಲಿದ್ದು, ವೇಣೂರು ಗ್ರಾ.ಪಂ. ಅಧ್ಯಕ್ಷರಾದ ನೇಮಯ್ಯ ಕುಲಾಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರಿದ ಅಧ್ಯಕ್ಷರು, ಪಿಡಿಒ ನಾಗೇಶ್ ಎಂ. ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಹಾಗೂ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ.
ಶಾಸಕ ಹರೀಶ್ ಪೂಂಜ ಅವರು ರೂ. 1 ಕೋಟಿ ಅನುದಾನ ನೀಡಿ ಬಳಿಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ರೂ. 55 ಲಕ್ಷ ಅನುದಾನ ದೊರೆಯುವಂತೆ ಮಾಡಿದ್ದರು. ವೇಣೂರು ಗ್ರಾ.ಪಂ.ನಿಂದ ವಿವಿಧ ಯೋಜನೆಯಡಿ ರೂ. 30 ಲಕ್ಷ ವಿನಿಯೋಗಿಸಿ ಒಂದು ಆಕರ್ಷಣೀಯ ಮತ್ತು ವ್ಯವಸ್ಥಿತ ಬಸ್ ತಂಗುದಾಣ ನಿರ್ಮಿಸಲಾಗಿದೆ. ಬಸ್ ನಿಲ್ದಾಣಕ್ಕೆ 2016ರ ಆಗಸ್ಟ್‌ನಲ್ಲಿ ಸ.ನಂ. 127/2ಪಿ2ರಲ್ಲಿ 9 ಸೆಂಟ್ಸ್ ಜಾಗವನ್ನು ಕಾಯ್ದಿರಿಸಲಾಗಿತ್ತು.
ಅತ್ಯಂತ ಆಕರ್ಷಣೀಯ
ಒಟ್ಟು ಮಹಡಿಗಳನ್ನು ಹೊಂದಿರುವ ಕಟ್ಟಡದಲ್ಲಿ ತಳಮಹಡಿಯಲ್ಲಿ 7 ಅಂಗಡಿಕೋಣೆಗಳು ಮತ್ತು ಸಾರ್ವಜನಿಕ ಮಹಿಳೆಯರ ಮತ್ತು ಪುರುಷರ ಶೌಚಾಲಯವಿದೆ. ನೆಲ ಮಹಡಿಯಲ್ಲಿ 6 ಅಂಗಡಿಕೋಣೆಗಳಿವೆ. ಪ್ರಥಮ ಮಹಡಿಯಲ್ಲಿ ಚೊಕ್ಕದಾದ ಸಭಾಂಗಣವಿದ್ದು, ಅತ್ಯಂತ ಆಕರ್ಷಣೀಯವಾಗಿ ಕಟ್ಟಡವನ್ನು ರೂಪುಗೊಳಿಸಲಾಗಿದೆ. ಕಟ್ಟಡದ ಹೊರಾಂಗಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಆಸನದ ವ್ಯವಸ್ಥೆ ಮಾಡಲಾಗಿದೆ. ಕಟ್ಟಡ, ಹೂವು, ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಲೋಕಾರ್ಪಣೆಗೆ ಸಿದ್ದಗೊಂಡಿದೆ.