ಹೋಲಿ ರಿಡೀಮರ್ ಆಂ.ಮಾ. ಶಾಲೆ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿದಾಯ ಸಮಾರಂಭ

0

ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಮಾ. 24ರಂದು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು ಸಹ ಶಿಕ್ಷಕಿಯರಾದ ಶ್ರೀಮತಿ ಕವಿತಾ, ಕು. ದಿವ್ಯ ಹಾಗೂ ಚರ್ಚ್ ನ ಪ್ರಧಾನ ಸೇವಕ ಪ್ರೀತಮ್ ಜೋಯೆಲ್ ರೆಗೋರವರಿಗೆ ವಿದಾಯ ಸಮಾರಂಭವನ್ನು ಏರ್ಪಡಿಸಲಾಯಿತು.

ಸಂಸ್ಥೆಯಿಂದ ಬೀಳ್ಕೊಡುವ ಶಿಕ್ಷಕಿಯರು ಮತ್ತು ಪ್ರೀತಮ್ ಜೋಯೆಲ್ ರೆಗೋರವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ಶಾಲೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಶಿಕ್ಷಕಿಯರಿಗೆ ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ವಾಲ್ಟರ್ ಮೋನಿಸ್ ಹಾಗೂ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಬೊನವೆಂಚರ್ ಪಿಂಟೋ ರವರು ಶುಭ ಹಾರೈಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಶಿಕ್ಷಕಿಯರ ಮುಂದಿನ ವೃತ್ತಿ ಜೀವನ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿ ಆಶೀರ್ವದಿಸಿದರು. ವಿದ್ಯಾರ್ಥಿಗಳು ನೃತ್ಯಗಳ ಮೂಲಕ ಎಲ್ಲರ ಮನರಂಜಿಸಿದರು. ಸಹಶಿಕ್ಷಕಿ ಶ್ರೀಮತಿ ಸರಿತಾ ರೋಡ್ರಿಗಸ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಾದ ಬಿ. ರೋಹನ್ ಹಾಗೂ ಈವೋನ್ ಡಿಸೋಜ ಶಾಲಾ ದಿನಗಳ ಸವಿನೆನಪುಗಳನ್ನು ಹಂಚಿಕೊಂಡರು. ಮೌಲ್ಯಶಿಕ್ಷಣ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ಹಾಗೂ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ವಿದ್ಯಾರ್ಥಿಗಳಾದ ಸಾನ್ವಿ ಸ್ವಾಗತಿಸಿ, ಸನಾ ವಂದಿಸಿದರು. ಸಹಶಿಕ್ಷಕಿ ಶ್ರೀಮತಿ ಪ್ರೀತಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here