ಶ್ರವಣಬೆಳಗೊಳದ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನಿಧನಕ್ಕೆ ಡಾ. ಡಿ ಹೆಗ್ಗಡೆಯವರಿಂದ ಸಂತಾಪ

0


ಧರ್ಮಸ್ಥಳ: ಅತಿಶಯಕ್ಷೇತ್ರ ಶ್ರವಣಬೆಳಗೊಳದ ಕರ್ಮಯೋಗಿ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ನಿಧನರಾದ ಸುದ್ದಿ ತಿಳಿದು ವಿಷಾದವಾಯಿತು.
ಶ್ರವಣಬೆಳಗೊಳದ ಪೀಠಾಧೀಶರಾಗಿ ದೀಕ್ಷೆ ತೆಗೆದುಕೊಂಡ ಬಳಿಕ, ಸಮಕಾಲೀನವಾಗಿ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಯೊಂದಿಗೆ ಅನೇಕ ಜನಮಂಗಳ ಕಾರ್ಯಕ್ರಮಗಳನ್ನು ಪೂಜ್ಯರು ಯಶಸ್ವಿಯಾಗಿ ಅನುಷ್ಠಾನಗೊಳಿಸಿದರು.
ಅವರ ನೇತೃತ್ವದಲ್ಲಿ ಶ್ರವಣಬೆಳಗೊಳದಲ್ಲಿ 1981ರಲ್ಲಿ ನಡೆದ ಭಗವಾನ್ ಬಾಹುಬಲಿ ಸ್ವಾಮಿಯ ಸಹಸ್ರಾಬ್ಧಿ ಮಹಾಮಸ್ತಕಾಭಿಷೇಕವು ಐತಿಹಾಸಿಕ ಸಮಾರಂಭವಾಗಿ ನಡೆದು ವಿಶ್ವವಿಖ್ಯಾತವಾಯಿತು. ದೇಶ-ವಿದೇಶಗಳಿಂದ ಭಕ್ತರು ಶ್ರವಣಬೆಳಗೊಳಕ್ಕೆ ಬಂದು ಪುಣ್ಯ ಸಂಚಯ ಮಾಡಿಕೊಂಡರು.
ಆರೋಗ್ಯಸೇವೆ, ಶಿಕ್ಷಣ, ಸಂಶೋಧನೆ ಮತ್ತು ವಿಶೇಷ ಅಧ್ಯಯನಕ್ಕಾಗಿ ಪೂಜ್ಯರು ಶ್ರವಣಬೆಳಗೊಳದಲ್ಲಿ ಹೊಸ ಸಂಸ್ಥೆಗಳನ್ನು ಪ್ರಾರಂಭಿಸಿದರು. ಧಾರ್ಮಿಕ ಶಿಕ್ಷಣ ಮತ್ತು ಅಧ್ಯಯನಕ್ಕಾಗಿ, ಜೈನ ಅಧ್ಯಯನ ಸಂಸ್ಥೆ, ಗೋಮಟೇಶ್ವರ ವಿದ್ಯಾಪೀಠ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಕೃತ ಭಾಷೆಯ ಅಧ್ಯಯನ ಮತ್ತು ಸಂಶೋಧನೆಗಾಗಿ ಹೊಸ ಸಂಸ್ಥೆಯನ್ನು ಪ್ರಾರಂಭಿಸಿ ಶ್ರವಣಬೆಳಗೊಳವನ್ನು ಜ್ಞಾನಕಾಶಿಯಾಗಿ ಬೆಳೆಸಿದರು.


ಧವಲ, ಜಯಧವಲ ಮತ್ತು ಮಹಾಧವಲ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿ, ಪ್ರಕಟಿಸಿ ಪೂಜ್ಯರು ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇಂದು ಪ್ರತಿ ಮನೆಯಲ್ಲಿಯೂ ಧವಲತ್ರಯ ಗ್ರಂಥಗಳ ಸ್ವಾಧ್ಯಾಯ, ಚಿಂತನ ಮಂಥನ ನಡೆಯುತ್ತಿದೆ. ಸರಳ ಹಾಗೂ ಆಕರ್ಷಕ ವ್ಯಕ್ತಿತ್ವ ಹೊಂದಿರುವ ಪೂಜ್ಯರು ಕನ್ನಡ, ಸಂಸ್ಕೃತ, ಇಂಗ್ಲೀಷ್, ಸಂಸ್ಕೃತ, ಹಾಗೂ ಹಿಂದಿ ಭಾಷೆಯಲ್ಲಿ ಅಪಾರ ಪಾಂಡಿತ್ಯ ಪ್ರಭುತ್ವ ಹೊಂದಿದ್ದು, ಸರ್ವಧರ್ಮಗಳ ಗ್ರಂಥಗಳನ್ನು ಅಧ್ಯಯನ ಮಾಡಿ ಉತ್ತಮ ವಾಗ್ಮಿಯಾಗಿಯೂ ಚಿರಪರಿಚಿತರು.
ಪೂಜ್ಯರಿಂದ ಶಿಷ್ಯರಾಗಿ ದೀಕ್ಷೆ ಪಡೆದ ಭಟ್ಟಾರಕರುಗಳೆ ಇಂದು ಮೂಡಬಿದ್ರೆ, ಕಾರ್ಕಳ, ಹೊಂಬುಜ, ಕನಕಗಿರಿ, ಕಂಬದಹಳ್ಳಿ, ನರಸಿಂಹರಾಜಪುರ, ಅರಹಂತಗಿರಿ ಮಠದಲ್ಲಿ ಪೀಠಾಧೀಶರಾಗಿ ಧರ್ಮಪ್ರಭಾವನಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ನಮ್ಮ ವಿಶೇಷ ಗೌರವ ಮತ್ತು ಆದರಾಭಿಮಾನಕ್ಕೆ ಪಾತ್ರರಾಗಿದ್ದ ಪೂಜ್ಯರು ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ, ಮಹಾಮಸ್ತಕಾಭಿಷೇಕ ಹಾಗೂ ನಮ್ಮ ಎಲ್ಲಾ ಇತರ ಸೇವಾ ಕಾರ್ಯಗಳಿಗೆ ಮಾರ್ಗದರ್ಶನ, ಪ್ರೇರಣೆ ನೀಡುತ್ತಿದ್ದರು. ಶ್ರವಣಬೆಳಗೊಳದಲ್ಲಿ ನಡೆಯುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಹಾಗೂ ಇತರ ವಿಶೇಷ ಸಂದರ್ಭಗಳಲ್ಲಿಯೂ ನಮಗೆ ಅಪೂರ್ವ ಸೇವೆಗೆ ಅವಕಾಶ ನೀಡುತ್ತಿದ್ದರು. ಪೂಜ್ಯರು ಪ್ರಾತಃ ಸ್ಮರಣೀಯರಾಗಿದ್ದು, ಅವರ ಮಾರ್ಗದರ್ಶನ ಮತ್ತು ನೇತೃತ್ವವನ್ನು ಕಳೆದುಕೊಂಡ ಇಡೀ ಸಮಾಜವೇ ಸದಾ ಪೂಜ್ಯರ ಸ್ಮರಣೆಯನ್ನು ಧನ್ಯತೆಯಿಂದ ಮಾಡುತ್ತಿದೆ. ಪೂಜ್ಯರಿಗೆ ಗೌರವಪೂರ್ವಕ ವಿನಯಾಂಜಲಿ ಅರ್ಪಿಸುತ್ತೇನೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here