ವಿಕಲ ಚೇತನರಿಗೆ ಸಾಧನಾ ಸಲಕರಣೆಗಳ ವಿತರಣೆ

0

ಉಜಿರೆ: ವಿಕಲಚೇತನರಿಗೆ ಮಾನವೀಯತೆಯಿಂದ ಸಾಧನಾ ಸಲಕರಣೆಗಳನ್ನು ನೀಡಿ ಅವರು ಕೂಡಾ ಸಮಾಜದ ಮುಖ್ಯ ವಾಹಿನಿಗೆ ಬಂದು ಸ್ವಾವಲಂಬಿ ಜೀವನ ನಡೆಸಲು ಪ್ರೇರಣೆ ಮತ್ತು ಪ್ರೋತ್ಸಾಹ ನೀಡುವುದು ಅತ್ಯಂತ ಪವಿತ್ರ ಹಾಗೂ ಪುಣ್ಯದ ಕಾಯಕವಾಗಿದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್, ಸತೀಶ್ಚಂದ್ರ ಹೇಳಿದರು.
ಅವರು ಮಾ.17 ಉಜಿರೆಯಲ್ಲಿ ಜಾಗೃತಿ ಸೌಧದಲ್ಲಿ ಮದ್ದಡ್ಕದ ಬ್ರೈಟ್ಇಂಡಿಯಾ ಸಂಸ್ಥೆಯ ಆಶ್ರಯದಲ್ಲಿ ಮೂವತ್ತನಾಲ್ಕು ಮಂದಿ ವಿಕಲಚೇತನರಿಗೆ ಸಾಧನಾ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.


ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ನೆರವಿನೊಂದಿಗೆ ಕೆ.ವಿ. ಶೆಟ್ಟಿ ಅವರು ಮದ್ದಡ್ಕದಲ್ಲಿ ಕುಷ್ಠರೋಗಿಗಳ ಪುನರ್ವಸತಿಗಾಗಿ ಬ್ರೈಟ್ ಇಂಡಿಯಾ ಸಂಸ್ಥೆಯನ್ನು ಪ್ರಾರಂಭಿಸಿದರು.


2007 ರಿಂದ ಡಿ. ವೀರೇಂದ್ರ ಹೆಗ್ಗಡೆಯವರು ಸಂಸ್ಥೆಯ ಅಧ್ಯಕ್ಷರಾಗಿದ್ದು ಅಲ್ಲಿ ವಿಕಲಚೇತನರು ಹಾಗೂ ದುರ್ಬಲರಿಗಾಗಿ ಅನೇಕ ಕಲ್ಯಾಣ ಕಾರ್ಯಗಳನ್ನು ಮಾಡಲಾಗುತ್ತದೆ.
ಸಮಾಜದಲ್ಲಿ ಎಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸ ಮತ್ತು ಗೌರವದಿಂದ ಸಹಕಾರದಿಂದ ಸಾರ್ಥಕ ಜೀವನ ನಡೆಸಿದಲ್ಲಿ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ. ಹೆಗ್ಗಡೆಯವರ ನೇತೃತ್ವದಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಿಕಲ ಚೇತನರಿಗೆ ಸಾಧನಾ ಸಲಕರಣೆಗಳನ್ನು ಬ್ರೈಟ್ ಇಂಡಿಯಾ ಸಂಸ್ಥೆ ವತಿಯಿಂದ ವಿತರಿಸಿ ಅವರ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ.
ಅವಕಾಶ ವಂಚಿತರಿಗೆ ಹೆಗ್ಗಡೆಯವರು ಸದಾ ಕಾಯಕಲ್ಪ ನೀಡಿ ಸಮಾಜದ ಮುಖ್ಯವಾಹಿನಿಗೆ ಬಂದು ಅವರು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಸಾರ್ಥಕ ಜೀವನ ನಡೆಸಲು ಅನುಕೂಲ ಮಾಡಿಕೊಟ್ಟಿರುವುದು ಅತ್ಯಂತ ಪುಣ್ಯದಾಯಕವಾಗಿದೆ ಎಂದು ಹೇಳಿ ಅಭಿನಂದಿಸಿದರು.
ಫಲಾನುಭವಿಗಳ ಪರವಾಗಿ ಉಜಿರೆಯ ವಿಪುಲ್ ಅನಿಸಿಕೆ ವ್ಯಕ್ತಪಡಿಸಿ, ಸಂಸ್ಥೆಯ ನೆರವಿನಿಂದ ತನ್ನ ಬದುಕಿನ ಭಾಗ್ಯದ ಬಾಗಿಲು ತೆರೆದು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಹೇಳಿ ಕೃತಜ್ಞತೆ ವ್ಯಕ್ತಪಡಿಸಿದರು.


ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ಸಂಸ್ಥೆಯ ಕಾರ್ಯದರ್ಶಿ ಶಿಶುಪಾಲ ಪೂವಣಿ, ಬ್ರೈಟ್ ಇಂಡಿಯಾ ನೇತೃತ್ವದಲ್ಲಿ ವಿಕಲಚೇತನರಿಗೆ ಉದ್ಯಮಶೀಲತೆ, ಆರ್ಥಿಕ ಸಾಕ್ಷರತೆ, ಸ್ವ-ಉದ್ಯೋಗ ತರಬೇತಿ, ಕಂಪ್ಯೂಟರ್ ಸಾಕ್ಷರತಾ ತರಬೇತಿ, ಸಂಸ್ಥೆಯ ಕೃಷಿ  ಜಾಗದಲ್ಲಿ ಅಡಿಕೆ ತೋಟ, ರೈತರಿಗೆ ವಿವಿಧ ಹಣ್ಣಿನ ಗಿಡಗಳ ಪೂರೈಕೆ ಇತ್ಯಾದಿ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಪ್ರತಿವರ್ಷ ವಿಕಲಚೇತನರಿಗೆ ಸಾಧನಾ ಸಲಕರಣೆಗಳನ್ನು  ವಿತರಿಸಲಾಗುತ್ತದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಆರ್.ಯನ್. ಪೂವಣಿ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here