ಪ್ರದೀಶ್ ಮರೋಡಿ ರವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರತಿಷ್ಠಿತ ‘ಮೈಸೂರು ದಿಗಂತ ಪ್ರಶಸ್ತಿ’ ಪ್ರದಾನ

0

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ 2020ನೇ ಸಾಲಿನ ಪ್ರತಿಷ್ಠಿತ ‘ಮೈಸೂರು ದಿಗಂತ’ ಪ್ರಶಸ್ತಿಯನ್ನು ಮಂಗಳೂರಿನ ಪ್ರಜಾವಾಣಿ ಪತ್ರಕರ್ತ ಪ್ರದೀಶ್ ಮರೋಡಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾ.13 ರಂದು ಪ್ರದಾನ ಮಾಡಿದರು.

ಕಂದಾಯ ಸಚಿವರಾದ ಆರ್.ಅಶೋಕ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕೆ.ಸದಾಶಿವ ಶೆಣೈ, ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್. ರಂಗನಾಥ್, ವಿಆರ್ ಎಲ್ ಸಮೂಹದ ಮುಖ್ಯಸ್ಥ ವಿಜಯ ಸಂಕೇಶ್ವರ, ಅಕಾಡೆಮಿ ಸದಸ್ಯರು, ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಮಾಧ್ಯಮ ಅಕಾಡೆಮಿಯಲ್ಲಿ ಮೈಸೂರು ದಿಗಂತ ಪತ್ರಿಕೆ ಸ್ಥಾಪಿಸಿರುವ ‘ಮೈಸೂರು ದಿಗಂತ’ ದತ್ತಿ ಪ್ರಶಸ್ತಿಯು ರೂ. 10,000 ನಗದು ಬಹುಮಾನ, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಕರ್ನಾಟಕ ಮಾಧ್ಯಮ ಅಕಾಡೆಮಿಯು ಅತ್ಯುತ್ತಮ ಮಾನವೀಯ ಸಮಸ್ಯೆಯ ಲೇಖನಕ್ಕೆ ನೀಡಲಾಗುವ 2020ನೇ ಸಾಲಿನ ‘ಮೈಸೂರು ದಿಗಂತ’ ದತ್ತಿ ಪ್ರಶಸ್ತಿಗೆ ಪ್ರಜಾವಾಣಿಯಲ್ಲಿ ಪ್ರಕಟವಾದ ಪ್ರದೀಶ್ ಮರೋಡಿ ಅವರು ಬರೆದ ‘ಕೇಳುತ್ತಿಲ್ಲ ಮಲೆ ಮಕ್ಕಳ ಅಳಲು’ ವಿಶೇಷ ವರದಿಯು ಆಯ್ಕೆಯಾಗಿತ್ತು.

ಮಾಧ್ಯಮ ಕ್ಷೇತ್ರದಲ್ಲಿ ಒಂದೂವರೆ ದಶಕದಿಂದ ಕರ್ತವ್ಯ ನಿರ್ವಹಿಸುತ್ತಿರುವ ಪ್ರದೀಶ್‌ ಮರೋಡಿ ಅವರು ಬೆಳ್ತಂಗಡಿಯ ಸುದ್ದಿಬಿಡುಗಡೆ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಕೆಲ ವರ್ಷ ಟಿವಿ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2013ರಿಂದ ಪ್ರಜಾವಾಣಿ ಪತ್ರಿಕೆಯಲ್ಲಿ ಮೈಸೂರಿನಲ್ಲಿ, ಪ್ರಸ್ತುತ ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅವರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ 2020ನೇ ಸಾಲಿನ ಪ್ರತಿಷ್ಠಿತ ‘ಪ.ಗೋ. ಪ್ರಶಸ್ತಿ’ಗೂ ಭಾಜನರಾಗಿದ್ದರು.

ಬಿಎಡ್, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಎಂ.ಎ. ಪದವೀಧರರಾಗಿರುವ ಅವರಿಗೆ ಪತ್ನಿ ಸಂಪ್ರಿಯ ಪ್ರದೀಶ್, ಪುತ್ರ ಅಗಸ್ತ್ಯ ಪ್ರದೀಶ್ ಇದ್ದಾರೆ.

LEAVE A REPLY

Please enter your comment!
Please enter your name here