ಕೋರಂ ಕೊರತೆಯಿಂದ ಇಳಂತಿಲ ಗ್ರಾ.ಪಂ. ಸಭೆ ರದ್ದು: ಅಧ್ಯಕ್ಷರ ಸರ್ವಾಧಿಕಾರ ಧೋರಣೆ: ಆರೋಪ

0

ಇಳಂತಿಲ : ಇಳಂತಿಲ ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಯು ಕೋರಂ ಕೊರತೆಯಿಂದಾಗಿ ರದ್ದುಗೊಂಡ ಘಟನೆ ಮಾ.9 ರಂದು ನಡೆದಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಿಕಾ ಭಟ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ನಲ್ಲಿ ಗುರುವಾರ ಬೆಳಗ್ಗೆ 10.30ಕ್ಕೆ ಸಭೆ ನಿಗದಿಯಾಗಿತ್ತು. ಆದರೆ ಸಮಯ 11.30 ಆದರೂ ಒಟ್ಟು14 ಮಂದಿ ಸದಸ್ಯರುಗಳ ಪೈಕಿ 6 ಮಂದಿಯ ಹಾಜರಾತಿ ಮಾತ್ರ ಇತ್ತು. ಅಧ್ಯಕ್ಷರು ಸಭೆ ನಡೆಸಲು ಮುಂದಾಗುತ್ತಿದ್ದಂತೆ ಸದಸ್ಯ ಯೂಸುಫ್ ಪೆದಮಲೆ “ಸಭೆ ನಡೆಸಲು ಕೋರಂ ಇಲ್ಲ, ಸಭೆ ನಡೆಸುವುದಾದರೂ ಹೇಗೆ”? ಎಂದು ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದರು. ಆಗ ಅಧ್ಯಕ್ಷರು “ಎಲ್ಲರಿಗೂ ನೋಟೀಸು ಮಾಡಲಾಗಿದೆ, ಯಾರೂ ಬಂದಿಲ್ಲ, ಏನು ಮಾಡುವುದು ಎಂದರು”.
ಇದರಿಂದ ಅಸಮಾಧಾನಗೊಂಡ ಸದಸ್ಯ ಯೂಸುಫ್ ಪೆದಮಲೆ ಅಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿ “ಪಂಚಾಯತ್‌ನಲ್ಲಿ ಒಟ್ಟು 14 ಸದಸ್ಯ ಬಲ ಇದೆ. ಅದರಲ್ಲಿ 12 ಮಂದಿ ನಿಮ್ಮ ಪಕ್ಷದ ಬೆಂಬಲಿತ ಸದಸ್ಯರುಗಳು, ಅದರಲ್ಲಿ ನೀವು, ಉಪಾಧ್ಯಕ್ಷರು ಸೇರಿದಂತೆ ಕೇವಲ 5 ಮಂದಿ ಮಾತ್ರ ಬಂದಿದ್ದೀರಾ. ಇನ್ನುಳಿದ 7 ಮಂದಿ ಗೈರು ಹಾಜರಿ ಆಗಿದ್ದಾರೆ, ನಿಮ್ಮವರೇ ಬಾರದೇ ಇರುವುದಕ್ಕೆ ನಿಮ್ಮ ಸರ್ವಾಧಿಕಾರಿ ಧೋರಣೆಯೇ ಕಾರಣವಾಗಿರುತ್ತದೆ. ಎಲ್ಲವೂ ನೀವು ಹೇಳಿದ ಹಾಗೆ ಆಗಬೇಕು ಎಂದು ವರ್ತಿಸುತ್ತೀರಿ. ಇದು ಯಾವೊಬ್ಬ ಸದಸ್ಯರಿಗೂ ಸರಿ ಅನಿಸುವುದಿಲ್ಲ” ಎಂದು ನೇರ ಆರೋಪ ಮಾಡಿದ ಅವರು ಈ ಸಭೆಯನ್ನು ರದ್ದುಪಡಿಸಿ, ಮುಂದೆ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಿ ಎಂದು ಸಲಹೆ ನೀಡಿದರು.
ಪಿಡಿಒಗೆ ತರಾಟೆ: ಪೂರ್ವಾಹ್ನ10.30ಕ್ಕೆ ಸಭೆ ಕರೆದಿದ್ದೀರಿ. ಆದರೆ ಆ ಸಮಯದಲ್ಲಿ ಬೇರೊಂದು ಸಭೆ ನಡೆಸಿದ್ದೀರಿ, ಇದೆಲ್ಲ ಸರಿ ಅಲ್ಲ ಎಂದು ಸದಸ್ಯ ಯೂಸುಫ್ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪಿಡಿಒ ಚೆನ್ನಪ್ಪ ನಾಯ್ಕ್ ಪ್ರತಿಕ್ರಿಯಿಸಿ, “ಆಗ ಯಾರೂ ಬಂದಿರಲಿಲ್ಲ, ಹಾಗಾಗಿ ಅಧ್ಯಕ್ಷರು ಬೇರೊಂದು ದೂರು ನೀಡಲು ಬಂದಿದ್ದವರ ಜೊತೆ ಸಭೆ ನಡೆಸಿದ್ದು ಎಂದರು. ಆಗ ಯೂಸುಫ್ ಪೆದಮಲೆ ಪಿಡಿಒರನ್ನು ಉದ್ದೇಶಿಸಿ, “ಸಭೆಗೆ ಬಾರದೇ ಇರುವವರನ್ನು ಕಾಯುವ ಸಲುವಾಗಿ ಬಂದವರನ್ನು ಕಾಯಿಸುವುದು ಸರಿ ಅಲ್ಲ. ಕೋರಂ ಇಲ್ಲದ ಕಾರಣ ಸಭೆ ಮುಂದೂಡಿಕೆ ಮಾಡಿ ಘೋಷಣೆ ಮಾಡಬಹುದಿತ್ತಲ್ಲ ಎಂದರು. ಆಗ ಪಿಡಿಒ ಅವರು ಈ ವಿಷಯ ಅಧ್ಯಕ್ಷರ ಗಮನಕ್ಕೆ ತಂದಿದ್ದೆ. ಆದರೆ ಅವರು ಸಮ್ಮತಿಸಿರಲಿಲ್ಲ ಎಂದರು. ಆಗ ಸದಸ್ಯ ಯೂಸುಫ್ “ನೋಡಿ ಅಧ್ಯಕ್ಷರೇ, ಎಲ್ಲವನ್ನೂ ನೀವು ನಿಮ್ಮ ಇಷ್ಟದಂತೆ, ನಿಮಗೆ ತೋಚಿದಂತೆ ಮಾಡುತ್ತಿದ್ದೀರಿ. ಇದೆಲ್ಲ ಸರಿ ಅಲ್ಲ. ಎಲ್ಲಾ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ಹರಿಸಿ” ಎಂದರು.
ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಇದೆ: ಬಿರು ಬೇಸಿಗೆಯಿಂದ ಈಗ ಎಲ್ಲೆಡೆ ಕುಡಿಯುವ ಸಮಸ್ಯೆ ಇದೆ. ಅದರಲ್ಲೂ ಕಡವಿನಬಾಗಿಲು ಮೊದಲಾದ ಕಡೆಯಲ್ಲಿ ಕುಡಿಯುವ ನೀರಿಗೆ ತಾತ್ವಾರ ಉಂಟಾಗಿದೆ. ಇಂದಿನ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಬಹಳಷ್ಟು ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳಬೇಕಾಗಿತ್ತು. ಆದರೆ ಸಭೆಯೇ ನಡೆಯದಂತಾಯಿತು. ವಾರದ ಒಳಗಾಗಿ ಮತ್ತೆ ಸಭೆ ಕರೆಯುವಂತೆ ಯೂಸುಫ್ ಪೆದಮಲೆ ಸಲಹೆ ನೀಡಿದರು. ಅದರಂತೆ ಮಾ. ೨೦ರಂದು ಮುಂದಿನ ಸಭೆ ನಡೆಸುವುದಾಗಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಸುಪ್ರಿತ್, ಸದಸ್ಯರಾದ ಉಷಾ, ಜಾನಕಿ, ರಮೇಶ್, ಕಾರ್ಯದರ್ಶಿ ಕಿರಣ್ ಇದ್ದರು.

LEAVE A REPLY

Please enter your comment!
Please enter your name here