ಶೇ.17 ರಷ್ಟು ವೇತನ ಹೆಚ್ಚಳ ಮಾಡಿ ಸರಕಾರ ಆದೇಶ: ಒಪಿಎಸ್ ಜಾರಿ ಕುರಿತು ಅಧ್ಯಯನಕ್ಕೆ ಸಮಿತಿ ರಚನೆ: ಸರಕಾರಿ ನೌಕರರ ಮುಷ್ಕರ ವಾಪಸ್

0

ರಾಜ್ಯ ಸರಕಾರಿ ನೌಕರರ ವೇತನ ಶೇ.17 ರಷ್ಟು ಹೆಚ್ಚಳ ಮಾಡಿ ಸರಕಾರ ಆದೇಶ ಹೊರಡಿಸಿದ್ದು ಇದರ ಬೆನ್ನಲ್ಲೇ ರಾಜ್ಯ ಸರಕಾರಿ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ವಾಪಸ್ ಪಡೆದಿದ್ದಾರೆ. 2023ಎಪ್ರಿಲ್ 1 ರಿಂದ ಅನ್ವಯ ಆಗುವಂತೆ ಶೇ.17 ವೇತನ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಮಾಡಿದೆ.

7ನೇ ವೇತನ ಆಯೋಗ ಜಾರಿ, ಹೊಸ ಪಿಂಚಣಿ ಯೋಜನೆ ರದ್ದು ಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂಬ ಬೇಡಿಕೆ ಮುಂದಿರಿಸಿಕೊಂಡು ರಾಜ್ಯ ಸರಕಾರಿ ನೌಕರರು ಮಾ.1 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಬೆಳ್ತಂಗಡಿ ತಾಲೂಕಿನ ಸುಮಾರು 15000 ಕ್ಕೂ ಅಧಿಕ ಸರಕಾರಿ ನೌಕರರು ರಾಜ್ಯ ಸಂಘ ನೀಡಿದ ಕರೆಯಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಬೆಳಗ್ಗೆಯಿಂದಲೇ ತಾಲೂಕಿನ ಸರಕಾರಿ ಇಲಾಖೆಗಳು ಬಂದ್ ಆಗಿತ್ತು. ಸರಕಾರಿ ಶಾಲೆಗಳಿಗೆ ಮೊದಲೇ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳು ಬಂದಿರಲಿಲ್ಲ. ಆದರೆ ಖಾಸಗಿ ಶಾಲೆಗಳು ಎಂದಿನಂತೆ ನಡೆದವು. ತಾಲೂಕಿನಲ್ಲಿ ಆರೋಗ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ಅಗ್ನಿ ಶಾಮಕ, ಅರಣ್ಯ ಇಲಾಖೆಗಳು ತುರ್ತು ಸೇವೆಯಲ್ಲಿ ಮಾತ್ರ ತೊಡಗಿಸಿಕೊಂಡವು. ಉಳಿದಂತೆ ಎಲ್ಲ ಇಲಾಖೆಗಳ ಸಿಬ್ಬಂದಿಗಳು ಕಚೇರಿಗೆ ಬಾರದೆ ಗೈರಾಗುವ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಸರಕಾರಿ ನೌಕರರ ಬೇಡಿಕೆಯ ಕುರಿತು ಸರಕಾರಕ್ಕೆ ಮೊದಲೇ ಮನವಿ ಸಲ್ಲಿಸಲಾಗಿತ್ತು. ಫೆ.೨೮ರಂದು ಮಧ್ಯ ರಾತ್ರಿ ವರೆಗೆ ಸರಕಾರಿ ನೌಕರರ ಮನವೊಲಿಕೆಗೆ ಸರಕಾರ ಪ್ರಯತ್ನಿಸಿದರೂ ಯಾವುದೇ ಫಲಪ್ರದವಾಗಿರಲಿಲ್ಲ. ಮಾ.1ರಂದು ಬೆಳಗ್ಗೆ ಸರಕಾರಿ ಕಚೇರಿ ಬಂದ್ ಆಗಿ ಸೇವೆಗಳು ಸ್ಥಗಿತಗೊಳ್ಳುತ್ತಿದ್ದಂತೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ನಡೆಸಿದರು. ಮಧ್ಯಾಹ್ನ 12ರ ಸುಮಾರಿಗೆ ಸರಕಾರಿ ನೌಕರರಿಗೆ ಶೇ.17 ತಾತ್ಕಾಲಿಕ ವೇತನ ಹೆಚ್ಚಳ ಮಾಡಿ ಆದೇಶ ಮಾಡಿತು. ಹಾಗೂ ಸರಕಾರಿ ನೌಕರರ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆದೇಶಿಸಿದೆ. ಈ ಸಮಿತಿಯು ರಾಷ್ಟ್ರೀಯ ಪಿಂಚಣಿ ಯೋಜನೆಯ ಸೌಲಭ್ಯವನ್ನು ಸ್ಥಗಿತಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಪುನರ್ ಸ್ಥಾಪಿಸುವ ನಿರ್ಧಾರಗಳನ್ನು ಕೈಗೊಂಡಿರುವ ರಾಜ್ಯಗಳಿಗೆ ಭೇಟಿ ನೀಡಿ ಸೂಕ್ತ ಅಧ್ಯಯನ ನಡೆಸಿ ಎರಡು ತಿಂಗಳೊಳಗೆ ವರದಿಯುನ್ನು ಸಲ್ಲಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಿದೆ. ಈ ಆದೇಶದ ಹಿನ್ನಲೆಯಲ್ಲಿ ಸರಕಾರಿ ನೌಕರರ ರಾಜ್ಯಾಧ್ಯಕ್ಷರಾಗಿರುವ ಷಡಕ್ಷರಿಯವರು ಪ್ರತಿಭಟನೆಯನ್ನು ವಾಪಸ್ ಪಡೆಯಲು ಸಮಿತಿಯ ಸಭೆ ನಡೆಸಿ ನಿರ್ಧರಿಸಿದರು. ಅದರಂತೆ ಸರಕಾರಿ ನೌಕರರು ಪ್ರತಿಭಟನೆ ವಾಪಸ್ ಪಡೆದು ಕೆಲಸಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ.
ಈ ಕುರಿತು ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಯರಾಜ್ ಜೈನ್ ಪ್ರತಿಕ್ರಿಯಿಸಿ “ನಮ್ಮ ಮುಖ್ಯವಾದ ಎರಡು ಬೇಡಿಕೆಗೆ ಸರಕಾರ ಸ್ಪಂದಿಸಿದೆ. ನಮ್ಮ ಮೂಲ ವೇತನದ ಶೇ.17 ಸಂಬಳ ಹೆಚ್ಚಳಕ್ಕೆ ಆದೇಶವಾಗಿದ್ದು, ಎನ್.ಪಿ.ಎಸ್. ರದ್ದುಗೊಳಿಸಿ ಒಪಿಎಸ್ ಜಾರಿಗೆ ಅಧ್ಯಯನಕ್ಕಾಗಿ ಸರಕಾರ ಸಮಿತಿ ರಚಿಸಿದೆ. ಎರಡು ತಿಂಗಳೊಳಗೆ ಈ ಸಮಿತಿ ವರದಿ ನೀಡಬೇಕಾಗಿದೆ. ಮಾ.1ರಂದು ತುರ್ತು ಸೇವೆ ನೀಡುವ ಇಲಾಖೆ ಹೊರತು ಪಡಿಸಿ ಉಳಿದ ಎಲ್ಲ ಇಲಾಖೆಯವರು ಪ್ರತಿಭಟನೆ ನಡೆಸಿದ್ದಾರೆ. ಸುಮಾರು 15000ಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ. ರಾಜ್ಯಾಧ್ಯಕ್ಷರ ಕರೆಯಂತೆ ಪ್ರತಿಭಟನೆ ವಾಪಸ್ ಪಡೆಯಲಾಗಿದೆ” ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here