ಶಾಸಕ ಹರೀಶ್ ಪೂಂಜ ರಾಜ್ಯದ ಜನರಲ್ಲಿ ಕ್ಷಮೆ ಯಾಚಿಸಲಿ: ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘ ಒತ್ತಾಯ

0

ಬೆಳ್ತಂಗಡಿ: ಪಠ್ಯಪುಸ್ತಕದಿಂದ ನಮ್ಮ ಸಮಾಜದ ಗುರುಗಳಾದ ಗುರು ನಾರಾಯಣ ಸ್ವಾಮಿಗಳು ಸೇರಿದಂತೆ ಹಲವು ಮಹನೀಯರ ವ್ಯಕ್ತಿತ್ವಕ್ಕೆ ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭ ಕುಂದು ಬರುವ ರೀತಿಯಲ್ಲಿ ನಡೆದುಕೊಂಡ ರೋಹಿತ್ ಚಕ್ರತೀರ್ಥರನ್ನು ಬೆಳ್ತಂಗಡಿಯ ಜನರ ವಿರೋಧದ ನಡುವೆಯೂ ವೇಣೂರು ದೇವಸ್ಥಾನಕ್ಕೆ ಕರೆದುಕೊಂಡು ಬಂದಿರುವ ಶಾಸಕ ಹರೀಶ್ ಪೂಂಜರವರ ನಡೆ ತೀವ್ರ ಖಂಡನೀಯ. ಅವರು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಆಗ್ರಹಿಸಿದೆ.
ಮಾ.1ರಂದು ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಘದ ಗೌರವಾಧ್ಯಕ್ಷ, ಮಾಜಿ ಶಾಸಕ ವಸಂತ ಬಂಗೇರರು ಈ ವಿಷಯ ತಿಳಿಸಿದರು.

ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುಗಳು , ಡಾ| ಬಿ.ಆರ್. ಅಂಬೇಡ್ಕರ್, ಕುವೆಂಪು, ರಾಣಿ ಅಬ್ಬಕ್ಕ, ಕಯ್ಯಾರ ಕುಂಞಣ್ಣ ರೈ ಮುಂತಾದ ದಾರ್ಶನಿಕರ ವ್ಯಕ್ತಿತ್ವಕ್ಕೆ ಕುಂದು ಬರುವ ರೀತಿಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ನಡೆಸಿ ಕೊನೆಗೆ ಸರಕಾರದ ಆದೇಶದಂತೆ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ಪದಚ್ಯುತಗೊಂಡ ವಿಕೃತ ವಿಚಾರಧಾರೆಗಳನ್ನು ಹೊಂದಿರುವ ರೋಹಿತ್ ಚಕ್ರತೀರ್ಥರನ್ನು ವೇಣೂರು ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಕರೆಯುವ ವಿಚಾರಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಅಲ್ಲಿಯ ಮುಖ್ಯಸ್ಥರಾದ ಆಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರವರು ಆಹ್ವಾನದ ಮೇರೆಗೆ ನಾವು ಅವರನ್ನು ಭೇಟಿ ಮಾಡಿ ನಮ್ಮ ವಿರೋಧವನ್ನು ತಿಳಿಸಿದ್ದೆವು. ಅದರಂತೆ ಅವರು ಮಧ್ಯಪ್ರವೇಶಿಸಿ ದೇವಸ್ಥಾನದ ಸಮಿತಿಯವರೊಂದಿಗೆ ಮಾತುಕತೆ ನಡೆಸಿ ರೋಹಿತ್ ಚಕ್ರತೀರ್ಥರವರ ಉಪನ್ಯಾಸವನ್ನು ರದ್ದುಗೊಳಿಸಿ, ವಿವಾದ ಸುಖಾಂತ್ಯಗೊಳಿಸಿದ್ದರು.

ಆದರೆ ಫೆ.27ರಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾರವರು ವೇಣೂರು ದೇವಸ್ಥಾನಕ್ಕೆ ರೋಹಿತ್ ಚಕ್ರತೀರ್ಥರನ್ನು ಪೊಲೀಸ್ ಬೆಂಗಾವಲಿನಲ್ಲಿ ಕರೆಸಿದ್ದು ಅಲ್ಲಿಗೆ ಬಂದ ರೋಹಿತ್ ಚಕ್ರತೀರ್ಥರು ದೇವರ ಮುಂದೆ “ನಾನುವತ್ತು ಬರುವುದಕ್ಕೆ ಒಂದು ಕಾರಣ ಮಹಾಲಿಂಗೇಶ್ವರ ದೇವರ ಸನ್ನಿಧಿಯಾದರೆ, ಎರಡನೇ ಕಾರಣ ಹರೀಶ್ ಪೂಂಜಾರವರು. ಇದನ್ನು ನಾನು ಹೇಳಲೇಬೇಕು ಏಕೆಂದರೇ ಪಠ್ಯ ಪುಸ್ತಕ ರಚನೆಯ ಅಥವಾ ಪರಿಸ್ಕರಣೆಯ ಸಂದರ್ಭದಲ್ಲಿ ನಡೆದ ಅನೇಕ ಘಟನಾವಳಿಗಳಲ್ಲಿ ನನ್ನ ಜೊತೆ ಬಲವಾಗಿ ನಿಂತದ್ದು ಹರೀಶ್ ಪೂಂಜಾರವರು ಎಂದು ಹೇಳಿದ್ದಾರೆ.
ನಾರಾಯಣ ಗುರುಗಳ ಪಠ್ಯವನ್ನು ತೆಗೆದುಹಾಕುವಲ್ಲಿ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜಾರವರು ದೊಡ್ಡ ಪಾತ್ರ ಇದೆ ಎನ್ನುವುದು ಚಕ್ರತೀರ್ಥರ ಮೂಲಕ ದೇವರ ಮುಂದೆ ಜಗಜ್ಜಾಹಿರಾಗಿದೆ. ಇದು ನಮ್ಮ ಸಮಾಜಕ್ಕೆ ಮಾತ್ರವಲ್ಲ. ಇತದಾ ದಾರ್ಶನಿಕರ ಹೆಸರಿಗೂ ಕುಂದು ಬರುವಂತೆ ಮಾಡಿ ಇತರ ಸಮಾಜಕ್ಕೂ ಅನ್ಯಾಯ ಮಾಡಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತಿದ್ದು ಈ ಬಗ್ಗೆ ಶಾಸಕ ಹರೀಶ್ ಪೂಂಜಾರವರು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸುವುದಾಗಿ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ , ಮಾಜಿ ಅಧ್ಯಕ್ಷರುಗಳಾದ ಪೀತಾಂಬರ ಹೇರಾಜೆ, ಭಗೀರಥ ಜಿ., ಜಯರಾಮ ಬಂಗೇರ ಹೇರಾಜೆ, ಸಂಘದ ಪ್ರಧಾನ ಕಾರ್ಯದರ್ಶಿ ಜಯವಿಕ್ರಮ್ ಕಲ್ಲಾಪು, ಕೋಶಾಧಿಕಾರಿ ಶೇಖರ ಬಂಗೇರ, ನಿರ್ದೇಶಕ ಗೋಪಾಲ ಪೂಜಾರಿ ಮಚ್ಚಿನ, ಮಹಿಳಾ ವೇದಿಕೆ ಅಧ್ಯಕ್ಷೆ ಸುಜಿತಾ ವಿ. ಬಂಗೇರ, ಯುವ ವೇದಿಕೆ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here