ವೇಣೂರು: ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದು ರಾಜ್ಯಾದ್ಯಂತ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಮಾಡುತ್ತಿದ್ದಾರೆ.
ಪ್ರತಿ ದಿನ ರಾಜವೈಬೋಗದ ಭವ್ಯ ವೇದಿಕೆಯಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದೆ.
ಫೆ.24 ರಂದು ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ನಾವುಗಳು ಸತ್ಕರ್ಮದಿಂದ ಜೀವನ ನಡೆಸಿದರೆ ಬದುಕು ಪಾವನ ವಾಗುತ್ತದೆ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.
ಉಡುಪಿ ಏಕಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ ಗುರೂಜೀ ಬ್ರಹ್ಮಕಲಶೋತ್ಸವದಿಂದ ಇಡೀ ಊರಿನಲ್ಲಿ ಬೆಳಕು ಮೂಡುತ್ತದೆ ಎಂದು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಾಸಕ ಹರೀಶ್ ಪೂಂಜ ಸಭಾ ಅಧ್ಯಕ್ಷತೆ ವಹಿಸಿ ದೇವರ ಮೇಲಿರುವ ಅಚಲ ನಂಬಿಕೆಯಿಂದ ಭಕ್ತರು ನಡೆಸಿರುವ ಶ್ರಮದಾನಕ್ಕೆ ಬೆಲೆ ಕಟ್ಟಲಾಗದು ಎಂದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಮಾಜಿ ಸಚಿವ ಗಂಗಾಧರ ಗೌಡ, ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೋಕ್ತೇಸರ ಶಿವಪ್ರಸಾದ ಅಜಿಲ, ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪೆರಾಜೆ, ಬೊಳ್ಳೂರು ರಾಜ್ಯಗುತ್ತು ಕೃಷ್ಣ ಪ್ರಸಾದ ರೈ, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್ ಪುರುಷೋತ್ತಮ ರಾವ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಧರಣೇಂದ್ರ ಕುಮಾರ್, ವ್ಯವಸ್ಥಾನ ಸಮಿತಿ ಸದಸ್ಯರಾದ ಸತೀಶ್ ಕೆರಿಯಾರ್ ಮತ್ತು ಪ್ರಶಾಂತ ಹೆಗ್ಡೆ, ವಸತಿ ಸಮಿತಿ ಸಂಚಾಲಕ ವಿಜಯ ಗೌಡ, ಬೆಳಕು- ನೀರಾವರಿ ಸಮಿತಿ ಸಂಚಾಲಕ ಯೋಗೀಶ್ ಬಿಕ್ರೋಟ್ಟು, ಪ್ರಚಾರ ಮತ್ತು ಮಾಧ್ಯಮ ಸಮಿತಿ ಸಂಚಾಲಕ ರಾಜೇಶ್ ಪೂಜಾರಿ ಮೂಡುಕೋಡಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು. ತುಳು ಜಾನಪದ ವಿದ್ವಾಂಸ ಕದ್ರಿ ನವನೀತ್ ಶೆಟ್ಟಿ ನಿರೂಪಿಸಿದರು. ವೇಣೂರು ಪ್ರಜ್ಞಾ ಪ್ರಭು ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್ ವಂದಿಸಿದರು.