ಅಳದಂಗಡಿ: ಭಾವನೆಯಿಂದಲೆ ಭವ ಪರಿವರ್ತನೆಯಾಗುತ್ತದೆ. ದೇವರು, ಗುರುಗಳು ಮತ್ತು ಶಾಸ್ತ್ರದ ಬಗ್ಗೆ ಶ್ರದ್ಧಾ-ಭಕ್ತಿಯನ್ನು ಹೊಂದಿದ್ದು, ಪ್ರತಿಯೊಬ್ಬರೂ ನಿತ್ಯವೂ ಬಸದಿಗೆ ಹೋಗಿ ದೇವರ ದರ್ಶನ, ಪ್ರಾರ್ಥನೆ, ಪೂಜೆ ಮಾಡಬೇಕು. ಮಂತ್ರಗಳು ಹಾಗೂ ಸ್ತೋತ್ರ ಪಠಣದಿಂದ ಬಸದಿಯಲ್ಲಿ ಕಲೆ ಹಾಗೂ ಸಾನ್ನಿಧ್ಯ ವೃದ್ಧಿಯಾಗುತ್ತದೆ ಎಂದು ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಅವರು ಫೆ.17 ರಂದು ಅಳದಂಗಡಿಯಲ್ಲಿ ಬೆಟ್ಟದ ಬಸದಿಯಲ್ಲಿ ಬಸದಿಯ ವಾರ್ಷಿಕೋತ್ಸವ, ಸಮುದಾಯ ಭವನದ ಶಿಲಾನ್ಯಾಸ ಹಾಗೂ ಬಸದಿಯ ಅರ್ಚಕರಿಗೆ ನೂತನ ಮನೆ ಹಸ್ತಾಂತರ ಸಮಾರಂಭದಲ್ಲಿ ಮಂಗಲ ಪ್ರವಚನ ನೀಡಿದರು.
ಅಧ್ಯಕ್ಷತೆ ವಹಿಸಿದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಮಾತನಾಡಿ ಜೈನಧರ್ಮದ ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್‌ಚಾರಿತ್ರ್ಯವನ್ನು ನಿತ್ಯವೂ ಅನುಷ್ಠಾನ ಮಾಡಿದರೆ ಆತ್ಮಗಂಟಿದ ಕರ್ಮದ ಕೊಳೆ ಕಳೆದು ಜೀವನ ಪಾವನವಾಗುತ್ತದೆ ಎಂದರು.
ತೋರಣಮುಹೂರ್ತ, ವಿಮಾನಶುದ್ಧಿ, ದೇವರಿಗೆ 24 ಕಲಶ ಅಭಿಷೇಕ ಮತ್ತು ವಿಶೇಷ ಪೂಜೆಗಳು ನಡೆದವು.
ಬೆಳ್ತಂಗಡಿ ಬಸದಿಯ ಪ್ರಧಾನ ಅರ್ಚಕ ಜಯರಾಜ ಇಂದ್ರರು ಮತ್ತು ಸ್ಥಳ ಪುರೋಹಿತ ಯುವರಾಜ ಇಂದ್ರರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಪೆರಂದಬೈಲು ಚಂದ್ರರಾಜ ಪೂವಣಿ. ಸುರೇಂದ್ರ ಜೈನ್ ಸಂತೋಷ್ ಜೈನ್, ಪ್ರಕಾಶ ಕುಮಾರ್ ಮತ್ತು ಕುಟುಂಬಸ್ಥರು ಸಹಕರಿಸಿದರು.
ಮಿತ್ರಸೇನ ಜೈನ್ ಅಳದಂಗಡಿ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.