ಫೆ.21-28 ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ

0

ಬೆಳ್ತಂಗಡಿ: ಅರಸಿನಮಕ್ಕಿಯ ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಫೆ.21ರಿಂದ 28ರವರೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಧಾರ್ಮಿಕ ಸಭೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸುಧೀರ್ ಕುಮಾರ್ ಎಂ. ಎಸ್. ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಾಮನ ತಾಮ್ಹನ್ ಕರ್ ಹೇಳಿದರು.

ಅವರು ಫೆ.14 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ಪ್ರಕೃತಿಯ ಮಧ್ಯೆ ಕಂಗೊಳಿಸುತ್ತಿರುವ ಈ ದೇವಸ್ಥಾನದ ಪಕ್ಕದ ಶಿವಾಜಿ ಗ್ರಾಮದಲ್ಲಿ ಪೂಜಿಸಲ್ಪಡುತ್ತಿರುವ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಒಂದು ಅಂಶ ಇಲ್ಲಿನ ದೇವರು ಎಂಬ ಐತಿಹ್ಯವೂ ಇದೆ. ಹಿಂದೆ ಜೈನ ಅರಸರ ಕಾಲದಲ್ಲಿ ದೇವಿಗುಡಿಯಾಗಿ ರೂಪುಗೊಂಡಿರಬಹುದೆಂದು ಹೇಳಲಾಗಿದೆ. ಇದೀಗ ಪೆರಡೇಲು ಮನೆತನದವರು ಕ್ಷೇತ್ರವನ್ನು ಮುನ್ನಡೆಸುತ್ತಿದ್ದಾರೆ. ಭಕ್ತರು ಜಾನುವಾರುಗಳಿಗೆ ಆರೋಗ್ಯ ಸಮಸ್ಯೆಯಾದರೆ ಬೊಂಕ (ಬಿದಿರಿನ ಮೊಂಟೆ) ಗಳನ್ನೂ ದೇವಿಗೆ ಹರಕೆಯಾಗಿ ಒಪ್ಪಿಸುವುದು ಇಲ್ಲಿನ ವಿಶೇಷತೆ. ದೇಗುಲದಲ್ಲಿ ಪ್ರತಿದಿನ ಮೂರು ಹೊತ್ತು ಪೂಜೆ ಇದ್ದು ಕುಂಕುಮಾರ್ಚನೆ, ಹೂವಿನ ಪೂಜೆ, ಆಗಳು ಪಾಯಸ, ವಿಶೇಷ ರಂಗಪೂಜೆ ಇತ್ಯಾದಿ ಸೇವೆಗಳು ಹುಣ್ಣಿಮೆಯಂದು ವಿಶೇಷ ಪೂಜೆ ನವರಾತ್ರಿಯಲ್ಲಿ ಪ್ರತಿದಿನ ರಾತ್ರಿ ರಂಗಪೂಜೆ ಸಹಿತ ವಿಶೇಷ ಪೂಜೆ ನಡೆಯುತ್ತದೆ. ವಾರ್ಷಿಕ ಜಾತ್ರೆಯೂ ನಡೆಯುತ್ತಾ ಬರುತ್ತಿದೆ.
ಇದೀಗ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದ್ದು . ಗರ್ಭಗುಡಿಯ ಸುತ್ತಲಿನ ಒಳಾಂಗಣಕ್ಕೆ ಹಾಸುಕಲ್ಲು ಅಳವಡಿಕೆ, ನಾಗನ ಕಟ್ಟೆ, ವಸಂತ ಕಟ್ಟೆ ಮತ್ತು ಮೂಲಸ್ಥಾನದಲ್ಲಿ ಶಿಲಾಮಯ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಒಳಾಂಗಣಕ್ಕೆ ಛಾವಣಿ ನಿರ್ಮಾಣ, ಸುಸಜ್ಜಿತ ಪಾಕಶಾಲೆ ನಿರ್ಮಾಣಕ್ಕೆ ಯೋಚಿಸಲಾಗಿದ್ದು,, ಶೌಚಾಲಯಗಳ ನಿರ್ಮಾಣ ಕಾಮಗಾರಿ ಸೇರಿದಂತೆ ಸುಮಾರು ರೂ.60 ಲಕ್ಷದ ಕಾಮಗಾರಿ ಪ್ರಗತಿಯಲ್ಲಿದೆ ಅಲ್ಲದೆ ಊರ ಭಕ್ತರಿಂದ ಶ್ರಮದಾನ ನಡೆಯುತ್ತಿದೆ.
ಶಾಸಕ ಹರೀಶ್ ಪೂಂಜ ಬಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಮಾರ್ಗದರ್ಶನದಲ್ಲಿ ಬಹ್ಮಕಲಶೋತ್ಸವದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಅಚ್ಚುಕಟ್ಟಾಗಿ ಕೆಲಸಗಳು ನಡೆಯುತ್ತಿವೆ.
ವೇ. ಮೂ.ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತಿಗಳ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು ಪ್ರತಿದಿನ ಬೆಳಿಗ್ಗೆ ಸಾಮೂಹಿಕ ಲಲಿತಾ ಸಹಸ್ರನಾಮ ಪಠಣವಿದೆ, ಮತ್ತು ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದೆ. ಫೆ.21 ರಂದು ಸಂಜೆ ತಂತ್ರಿವರ್ಯರಿಗೆ ಸ್ವಾಗತ, ಫೆ.22 ರಂದು ಶ್ರೀದೇವರಿಗೆ ಪುಷ್ಟ ಕನ್ನಡಿಯ ಸಮರ್ಪಣೆ ಕಾರ್ಯಕ್ರಮ, ನಾಲ್ಕು ದಿನಗಳ ಕಾಲ ಧಾರ್ಮಿಕ ಸಭೆ ನಡೆಯಲಿದೆ
ಫೆ.23ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡುವರು. ಫೆ. 24 ರಂದು ಸಂಜೆ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರುಗಳು ಭಾಗವಹಿಸುವರು. ಫೆ.25 ರಂದು ಧಾರ್ಮಿಕ ಸಭೆಯಲ್ಲಿ ಕೇಶವ ಬಂಗೇರ ಧಾರ್ಮಿಕ ಉಪನ್ಯಾಸವನ್ನು ನೀಡಲಿದ್ದು ವಿಧಾನ ಪರಿಷತ್‌ ಸದಸ್ಯರುಗಳಾದ ಪ್ರತಾಪ್ ಸಿಂಹ ನಾಯಕ್, ಕೆ. ಹರೀಶ್ ಕುಮಾರ್ ಮತ್ತು ಶರತ್ ಕೃಷ್ಣ ಪಡ್ವೆಟ್ನಾಯ ಮತ್ತು ಡಾ| ಎಂ.ಎಂ. ದಯಾಕರ್ ಭಾಗವಹಿಸುವರು.

ಫೆ.26 ರಂದು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡುವರು. ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಕಶೆಕೋಡಿ, ಸೂರ್ಯನಾರಾಯಣ ಭಟ್‌ ಧಾರ್ಮಿಕ ಉಪನ್ಯಾಸ ನೀಡುವರು, ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಶಾಸಕ ಹರೀಶ್‌ ಪೂಂಜ, ಉದ್ಯಮಿ ಶಶಿಧರ ಶೆಟ್ಟಿ, ಆರಸಿನಮಕ್ಕಿ ಗ್ರಾ.ಪಂ. ಅಧ್ಯಕ್ಷ ನವೀನ್ ರೆಖ್ಯ, ಡಾ| ಸುಧಾ ರಾವ್, ಉದ್ಯಮಿ ಚಂದ್ರಹಾಸ ಶೆಟ್ಟಿ ಭಾಗವಹಿಸುವರು, ಫೆ.27ರಂದು ಬೆಳಿಗ್ಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಹರಿನಾರಾಯಣ ಆಸ್ರಣ್ಣರ ಉಪಸ್ಥಿತಿಯಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಆನುವಂಶಿಕ ಆಡಳಿತ ಮೊಕ್ತೇಸರ ಎಂ. ಪಿ. ರಾಜಗೋಪಾಲ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಪದ್ಮಯ್ಯ ಗೌಡ ಉಡ್ಯೇರೆ, ಸದಸ್ಯ ರಾಜರಾಮ ಕಾರಂತ್ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here