ಕಾಶಿಪಟ್ಣ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಕಲಿಕಾ ಹಬ್ಬದ ಮೂಲಕ ಕಲಿಕಾ ಪ್ರಕ್ರಿಯೆಗಳನ್ನು ಚಟುವಟಿಕೆಗಳ ಮುಖೇನ ಅನುಷ್ಠಾನಗೊಳಿಸುವ ಮೂಲಕ ಕಲಿಕಾ ಪ್ರಕ್ರಿಯೆ ಸಾಗುವುದರಿಂದ ಕಲಿತ ಶಿಕ್ಷಣ ಭದ್ರ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಸರಕಾರಿ ಪ್ರೌಢಶಾಲೆ ಕಾಶಿಪಟ್ಣ ಇಲ್ಲಿ ಜರುಗಿದ ಪಡ್ಡಂದಡ್ಕ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಹೇಳಿದರು.
ಕಾಶಿಪಟ್ಣ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕೆ ಮಾತನಾಡಿ ವಿದ್ಯಾ ದೇಗುಲಗಳಿಗೆ ನೀಡಿದ ದಾನ ಶ್ರೇಷ್ಠದಾನ, ಸರ್ವರೂ ವಿದ್ಯಾಭ್ಯಾಸವನ್ನು ಪಡೆಯುವ ಸರಕಾರಿ ಶಾಲೆಗಳಿಗೆ ವಿದ್ಯಾಭಿಮಾನಿಗಳು ಅತಿಹೆಚ್ಚಿನ ರೀತಿಯಲ್ಲಿ ಸ್ಪಂದಿಸಬೇಕು ಎಂದು ಕರೆ ನೀಡಿದರು. ಕಾಶಿಪಟ್ಣ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಿಲ್ಪ ಎರಡು ದಿನದ ಕಲಿಕಾ ಹಬ್ಬವನ್ನು ಉದ್ಘಾಟಿಸಿದರು. ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ಪದ್ಮಶ್ರೀ ಜೈನ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಸವಿತಾ ,ಅಶೋಕ್ ಕುಮಾರ್ ಜೈನ್, ರವೀಂದ್ರ, ಹಿರಿಯರಾದ ರಾಜು ಪೂಜಾರಿ, ಪ್ರವೀಣ್ ಪಿಂಟೊ, ಅಬ್ದುಲ್ ರೆಹಮಾನ್, ಪ್ರಾಥಮಿಕ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ಶೇಖರ ಕೋಟ್ಯಾನ್, ಸಿ.ಆರ್.ಪಿ.ಆರತಿ ಮತ್ತು ಕಲಿಕಾ ಹಬ್ಬದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು ಸಂಪನ್ಮೂಲ ವ್ಯಕ್ತಿಗಳಾದ ಪ್ರಶಾಂತ್ ಪ್ರಸ್ತಾವಿಸಿದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪದ್ಮಿನಿ ಸ್ವಾಗತಿಸಿ, ಶಿಕ್ಷಕಿ ವಿಜಯಾಂಬಿಕಾ ವಂದಿಸಿದರು. ಶಾಲಾ ಶಿಕ್ಷಕ ದೇವದಾಸ್ ನಾಯಕ್ ನಿರೂಪಿಸಿದರು.
ಇದಕ್ಕೂ ಮೊದಲು ಪ್ರಾಥಮಿಕ ಶಾಲೆ ಕಾಶಿಪಟ್ಣ ದಿಂದ ಪ್ರೌಢಶಾಲೆ ಗೆ ಕಲಿಕಾ ಹಬ್ಬದ ಭವ್ಯವಾದ ಮೆರವಣಿಗೆ ಸಾಗಿ ಬಂದಿತು. ಮೆರವಣಿಗೆಯನ್ನು ಶುಭಕರ ಕೋಟ್ಯಾನ್ ಮತ್ತು ಅಖ್ತರ್ ಹಾಸ್ಕೋ ಉದ್ಘಾಟಿಸಿದರು. ವಿದ್ಯಾರ್ಥಿಗಳ ಶಿಸ್ತುಬದ್ಧ ಬ್ಯಾಂಡ್ ವಾದನದೊಂದಿಗೆ ವಿವಿಧ ವೇಷಭೂಷಣಗಳೊಂದಿಗೆ ಕಲಿಕಾ ಹಬ್ಬದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳನ್ನು ಮತ್ತು ಅತಿಥಿಗಳನ್ನು ಗೌರವಯುತವಾಗಿ ಬರಮಾಡಿಕೊಳ್ಳಲಾಯಿತು.
ಎರಡನೇ ದಿನ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸತೀಶ್ ಕೆ ಸಹಕಾರ ನೀಡಿದ ಸರ್ವರನ್ನು ಕೃತಜ್ಞತೆಯಿಂದ ನೆನೆಯುತ್ತ ಶಾಲೆಗೆ ಊರ ವಿದ್ಯಾ ಅಭಿಮಾನಿಗಳು ಇನ್ನಷ್ಟು ಕೊಡುಗೆಗಳನ್ನು ನೀಡುವುದರ ಮೂಲಕ ನಮ್ಮೂರ ಶಾಲೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸೋಣ ಎಂದು ಕರೆ ನೀಡಿದರು. ಕಲಿಕಾ ಹಬ್ಬದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆಗಳನ್ನು ವಿತರಿಸಲಾಯಿತು. ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಸ್ವಾಗತಿಸಿ ಶಿಕ್ಷಕಿ ಶ್ರೀಮತಿ ಸರಿನ್ ತಾಜ್ ವಂದಿಸಿದರು.