ಅಂತರ್‌ರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಫ್‌ನಲ್ಲಿ ಪ್ರಶಸ್ತಿ; ಪಡೆದ ವಿವಿಧ ಶಾಲೆಗಳ 18 ವಿದ್ಯಾರ್ಥಿಗಳಿಗೆ ಅಭಿನಂದನೆ

0

ಬೆಳ್ತಂಗಡಿ: ಹುಬ್ಬಳ್ಳಿ ನಗರದ ಗೋಕುಲ್ ರಸ್ತೆ ಗೋಕುಲ್ ಗಾರ್ಡನ್ ಸಭಾಭವನದಲ್ಲಿ ನಡೆದ ಪ್ರಥಮ ಅಂತರ್ ರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಫ್‌ನಲ್ಲಿ ಪ್ರಶಸ್ತಿ ಪಡೆದ ವಿವಿಧ ಶಾಲೆಗಳ 18 ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಜ.26 ಗಣರಾಜೋತ್ಸವದ ದಿನದಂದು ಶಾಸಕರ ಶ್ರಮಿಕ ಕಚೇರಿ ಬೆಳ್ತಂಗಡಿಯಲ್ಲಿ ಜರುಗಿತು.

ತಾಲೂಕಿನ ವಿವಿಧ ಶಾಲೆಗಳ 18 ವಿದ್ಯಾರ್ಥಿಗಳಲ್ಲಿ 4 ವಿದ್ಯಾರ್ಥಿಗಳು ಚಿನ್ನದ ಪದಕ, 4 ಮಂದಿ ಬೆಳ್ಳಿಯ ಪದಕ, ಹಾಗೂ 10ಮಂದಿ ವಿದ್ಯಾರ್ಥಿಗಳು ಕಂಚಿನ ಪದಕ ಹಾಗೂ ಬೆಳ್ತಂಗಡಿ ವಿದ್ಯಾರ್ಥಿಗಳು ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಶಾಸಕ ಹರೀಶ್ ಪೂಂಜ ಅವರು ಪ್ರಶಸ್ತಿ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ, ಹೂ ಹಾರ ಹಾಕಿ ಅಭಿನಂದಿಸಿದರು. ನಂತರ ಮಾತನಾಡಿ, ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ತಾಲೂಕಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿರುವುದು ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಮುಂದೆಯೂ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೇಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ನೀಡುವುದಾಗಿ ತಿಳಿಸಿದರು.

ಕರಾಟೆ ಶಿಕ್ಷಕ ವಸಂತ ಬಿ. ಬಂಗೇರ ಅವರು ಮಾತನಾಡಿ, ಅಂತರ್‌ರಾಷ್ಟ್ರೀಯ ಓಪನ್ ಕರಾಟೆ ಸ್ಪರ್ಧೆಯಲ್ಲಿ ನಮ್ಮ ತಾಲೂಕಿನ ೧೮ ವಿದ್ಯಾರ್ಥಿಗಳು ಭಾಗವಹಿಸಿದ್ದು, 4 ಚಿನ್ನ, 4 ಬೆಳ್ಳಿ ಹಾಗೂ 10 ಕಂಚು ಜೊತೆಗೆ ತಂಡ ಪ್ರಶಸ್ತಿಯನ್ನು ಪಡೆದುಕೊಂಡು ತಾಲೂಕಿಗೆ ಕೀರ್ತಿ ತಂದಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕಾದರೆ ಸುಮಾರು ೮ ಸಾವಿರಕ್ಕೂ ಹೆಚ್ಚು ಖರ್ಚು ಬರುತ್ತದೆ. ಮಕ್ಕಳು ಬಡ ಕುಟುಂಬದವರಾಗಿದ್ದು, ಪೋಷಕರು ಇದರ ಖರ್ಚನ್ನು ಭರಿಸಲು ಸಾಧ್ಯವಿಲ್ಲ ಎಂದಾಗ ನಾವು ಶಾಸಕರ ಗಮನಕ್ಕೆ ತಂದೆವು ಅವರು ಎಲ್ಲಾ ಖರ್ಚು-ವೆಚ್ಚಗಳನ್ನು ತಾನು ಭರಿಸುವುದಾಗಿ ಹೇಳಿ ಪೂರ್ಣ ಸಹಕಾರ ನೀಡಿದ್ದಾರೆ. ಜೊತೆಗೆ ಗ್ರಾ.ಪಂ ಸದಸ್ಯ ಪುನಿತ್ ಹಾಗೂ ಯೋಗೀಶ್ ಅವರು ಪ್ರೋತ್ಸಾಹ ನೀಡಿದ್ದಾರೆ ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here