ಬಿಲ್ಲವ ಸಮಾಜದ ಪರಂಪರೆಯನ್ನು ಪರಿಚಯಿಸುವ ಉದ್ದೇಶ: ಜ.22: ಬೆಳ್ತಂಗಡಿಯಲ್ಲಿ ಜನಪದ ಸಮ್ಮೇಳನ ಜೀಟಿಗೆ

0



ಬೆಳ್ತಂಗಡಿ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಆಶ್ರಯದಲ್ಲಿ, ಮಹಿಳಾ ಬಿಲ್ಲವ ವೇದಿಕೆ, ಯುವ ಬಿಲ್ಲವ ವೇದಿಕೆ, ಯುವವಾಹಿನಿ ಬೆಳ್ತಂಗಡಿ ಮತ್ತು ವೇಣೂರು ಘಟಕದ ಸಹಾಭಾಗಿತ್ವದಲ್ಲಿ ಬಿಲ್ಲವ ಸಮಾಜದ ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಬಿಲ್ಲವ ಜನಪದ ಸಮ್ಮೇಳನ -೨೦೨೩, ಜೀಟಿಗೆ ಕಾರ್ಯಕ್ರಮ ಜ.22 ರಂದು ಶ್ರೀ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಪ್ರಧಾನ ಸಂಚಾಲಕ ಸಂಪತ್ ಬಿ. ಸುವರ್ಣ ಹೇಳಿದರು.
ಅವರು ಜ.17ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಮಾಹಿತಿಯನ್ನು ನೀಡಿ, ಬೆಳಿಗ್ಗೆ 9 ರಿಂದ ತುಳು ಪದರಂಗಿತ ಜನಪದ ಗೀತೆ ವೈವಿಧ್ಯ ನಡೆಯಲಿದ್ದು, 10ಕ್ಕೆ ಕೇಂದ್ರ ಸರಕಾರದ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಡಾ. ಗಣೇಶ್ ಅಮೀನ್ ಸಂಕಮಾರ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಕೆ. ವಸಂತ ಬಂಗೇರ, ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮೂರ್ತೆದಾರರ ಹಾಗೂ ದೈವರಾಧಕರ ಸಮ್ಮೇಳನ:
ಬೆಳಿಗ್ಗೆ 10:30ರಿಂದ ನಡೆಯುವ ಮೂರ್ತೆದಾರರ ಸಮ್ಮೇಳನದಲ್ಲಿ ಆರಂಭದಲ್ಲಿ ಮೂರ್ತೆ ಸಾಯನ ತಾಂಕಿನ ಜೋ ಕೇದಗೆ', ಗೀತಾ ನಾಟಕ ಪ್ರದರ್ಶನಗೊಳ್ಳಲಿದೆ. 11 ರಿಂದ ದ. ಕ. ಜಿಲ್ಲಾ ಮೂರ್ತೆದಾರರ ಮಹಾ ಮಂಡಲದ ಮಾಜಿ ಅಧ್ಯಕ್ಷ ಪಿ. ಕೆ. ಸದಾನಂದ ಇವರಿಂದ ವಿಚಾರ ಪ್ರಸ್ತುತಿ ನಡೆಯಲಿದೆ. ಈ ಸಂದರ್ಭ ತಾಲೂಕಿನ ಸುಮಾರು 1 ಸಾವಿರ ಮಂದಿ ಮೂರ್ತೆದಾರರು ಉಪಸ್ಥಿತರಿರುವರು. ಮಧ್ಯಾಹ್ನ 12 ರಿಂದ ದೈವಾರಾಧಕರ ಸಮ್ಮೇಳನ ನಡೆಯಲಿದ್ದು, ಆರಂಭದಲ್ಲಿಮಾಯೋದ ದೇಯಿ ಬೈದೆರ್ಲು’, ಗೀತಾ ನಾಟಕಪ್ರದರ್ಶನಗೊಳ್ಳಲಿದೆ. 12:30ರಿಂದ ಗುರುವಾಯನಕೆರೆ ಎಕ್ಸಲ್ ಪ. ಪೂ. ಕಾಲೇಜು ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ ಇವರಿಂದ ವಿಚಾರ ಪ್ರಸ್ತುತಿ ಜರುಗಲಿದ್ದು, ತಾಲೂಕಿನ ಸುಮಾರು 500 ಮಂದಿ ದೈವಸ್ಥಾನ ಮತ್ತು ಗರೋಡಿ ಪಾತ್ರಿಗಳು ಉಪಸ್ಥಿತರಿರುವರು.
ನಾಟಿ ವೈದ್ಯರ ಹಾಗೂ ಗುತ್ತಿನಾರರ ಸಮ್ಮೇಳನ:
ಮಧ್ಯಾಹ್ನ 2 ರಿಂದ ನಾಟಿ ವೈದ್ಯರ ಸಮ್ಮೇಳನ ನಡೆಯಲಿದ್ದು, ಆರಂಭದಲ್ಲಿ ಮರ್ದ್‌ದ ಬಿರ್ಸೆದಿ ದೇವಿ ಬೈದೆತಿ' ಗೀತಾ ನಾಟಕ ಪ್ರದರ್ಶನಗೊಳ್ಳಲಿದೆ. ಬಳಿಕ ಪಡುಬಿದ್ರೆ ಅಂಚನ್ ಆಯುರ್ವೇದಿಕ್‌ನ ಡಾ. ಏನ್. ಟಿ. ಅಂಚನ್ ವಿಚಾರ ಪ್ರಸ್ತುತಿ ಮಾಡಲಿದ್ದು, ತಾಲೂಕಿನ ಬಿಲ್ಲವ ನಾಟಿ ವೈದ್ಯರು ಈ ಸಂದರ್ಭ ಉಪಸ್ಥಿತರಿರುವರು. ಸಂಜೆ 3:30 ರಿಂದ ಗುತ್ತಿನಾರರ ಸಮ್ಮೇಳನ ನಡೆಯಲಿದ್ದು, ಆರಂಭದಲ್ಲಿಬಿರುವೆರೆ ಗುತ್ತುಡ್ ಅಳಿಯಕಟ್’ ಗೀತಾ ನಾಟಕ ಪ್ರದರ್ಶನಗೊಳ್ಳಲಿದೆ ಗುತ್ತು ಬರ್ಕೆ ಅಧ್ಯಯನಕಾರ ಸುಕೇತ್ ಪೂಜಾರಿ ವಿಚಾರ ಪ್ರಸ್ತುತಿ ಮಾಡಲಿದ್ದಾರೆ. ಬಿಲ್ಲವ ಗುತ್ತು ಬಾರಿಕೆ, ಮಾಗಂದಡಿಗಳ ಗುತ್ತಿನಾರರು ಈ ಸಂದರ್ಭ ಉಪಸ್ಥಿತರಿರುವರು.
ಶಾಂತಿ ಸಮ್ಮೇಳನ:
ಸಂಜೆ 4:30 ರಿಂದ ಶಾಂತಿ ಸಮ್ಮೇಳನ ನಡೆಯಲಿದ್ದು, ಆರಂಭದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದಿಂದ ತುಳು ರೂಪಕ ಮೌನ ಗುರು ಕ್ರಾಂತಿ, ಗೀತಾ ನಾಟಕ ಪ್ರದರ್ಶನಗೊಳ್ಳಲಿದೆ. ನರಿಕೊಂಬು ಪುರೋಹಿತ ಕೇಶವ ಶಾಂತಿ, ಹೆಜಮಾಡಿ ಪುರೋಹಿತ ಮಹೇಶ್ ಶಾಂತಿ ವಿಚಾರ ಪ್ರಸ್ತುತಿ ಮಾಡಲಿದ್ದಾರೆ. ತಾಲೂಕಿನ ಶಾಂತಿಗಳು ಉಪಸ್ಥಿತರಿರುವರು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್ ಭಾಗವಹಿಸಲಿದ್ದಾರೆ ಸಂಪತ್ ಸುವರ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರು, ಸಂಘದ ಪ್ರಧಾನ ಕಾರ್ಯದರ್ಶಿ ಜಯವಿಕ್ರಂ ಕಲ್ಲಾಪು, ಜೊತೆ ಕಾರ್ಯದರ್ಶಿ ರಾಜೀವ್ ಸಾಲ್ಯಾನ್, ಸಂಘದ ಉಪಾಧ್ಯಕ್ಷ ಶೇಖರ ಬಂಗೇರ, ನಿರ್ದೇಶಕರಾದ ಲಕ್ಷ್ಮಣ ಪೂಜಾರಿ, ಜಗದೀಶ್ ಡಿ, ಯಶೋಧರ ಚಾರ್ಮಾಡಿ, ಸಮ್ಮೇಳನ ಕಾರ್ಯದರ್ಶಿ ನಿತ್ಯಾನಂದ ನಾವರ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೇಶ್ ಎಚ್, ಮಹಿಳಾ ಬಿಲ್ಲವ ವೇದಿಕೆ ಕಾರ್ಯದರ್ಶಿ ಶಾಂಭವಿ ಬಂಗೇರ, ಸಾಮಾಜಿಕ ಜಾಲತಾಣದ ಸಂಚಾಲಕ ಯೋಗೀಶ್ ಅಳಕೆ, ಜಯಂತ ಕೋಟ್ಯಾನ್ ಕುಕ್ಕೇಡಿ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here