ಉಜಿರೆ: ಎಸ್.ಡಿ.ಎಂ. ಮಹಿಳಾ ಐ.ಟಿ.ಐ ಕಾಲೇಜಿನಲ್ಲಿ ಸೋಲಾರ್ ವಿದ್ಯುತ್ ಘಟಕ ಉದ್ಘಾಟನೆ

0

ಉಜಿರೆ: ವಿದ್ಯುತ್ತಿನ ಅಭಾವದ ಸಂದರ್ಭದಲ್ಲಿ ಉಚಿತವಾಗಿ ದೊರಕುವ ಸೌರಶಕ್ತಿಯ ಸದುಪಯೋಗ ಮಾಡಬೇಕು ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.
ಅವರು ಜ. 9 ರಂದು ಉಜಿರೆಯಲ್ಲಿ ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಕೆನರಾ ಬ್ಯಾಂಕ್ ಮತ್ತು ಸೆಲ್ಕೊ ಸೋಲಾರ್ ಲೈಟ್ ಸಂಸ್ಥೆಯ ಸಹಯೋಗದೊಂದಿಗೆ ಆರಂಭಿಸಿದ ಸೋಲಾರ್ ವಿದ್ಯುತ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸದುಪಯೋಗ ಪಡೆದು ವಿದ್ಯಾರ್ಥಿಗಳು ಸಮಾಜಕ್ಕೆ ಉಪಯುಕ್ತವಾದ ಸೇವಾ ಕಾರ್ಯಗಳನ್ನು ಮಾಡಬೇಕು. ಹರೀಶ್ ಹಂದೆಯವರ ನೇತೃತ್ವದಲ್ಲಿ ಸೋಲಾರ್ ಶಕ್ತಿಯ ಸದುಪಯೋಗದ ಬಗ್ಗೆ ನೀಡಿದ ಮಾಹಿತಿ, ಮಾರ್ಗದರ್ಶನದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸೋಲಾರ್ ವಿದ್ಯುತ್ ಘಟಕದ ಬಳಕೆಯೊಂದಿಗೆ ಅದರ ಸಮರ್ಪಕ ನಿರ್ವಹಣೆ ಬಗ್ಗೆಯೂ ಗಮನ ಕೊಡಬೇಕು ಎಂದು ಅವರು ಸಲಹೆ ನೀಡಿದರು.
ಮಣಿಪಾಲದಲ್ಲಿರುವ ಸೆಲ್ಕೊ ಸೋಲಾರ್ ಲೈಟ್ ಸಂಸ್ಥೆಯ ಡಿ.ಜಿ.ಎಂ. ಗುರುಪ್ರಕಾಶ್ ಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಹತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸೌರಶಕ್ತಿ ಬಳಸಿ ಪಾಠಗಳನ್ನು ಬೋಧಿಸಲಾಗುತ್ತದೆ. ಎಲ್ಲರಿಗೂ ಉಚಿತವಾಗಿ ದೊರಕುವ ಸೌರಶಕ್ತಿಯ ಬಳಕೆಯಿಂದ ಭೂಮಿಯ ತಾಪಮಾನ ಏರಿಕೆ, ಪ್ರಾಕೃತಿಕ ವಿಕೋಪ, ಹವಾಮಾನ ವೈಪರೀತ್ಯ ಮೊದಲಾದ ಸಮಸ್ಯೆಗಳನ್ನು ಪರಿಹರಿಸಿ, ವಿದ್ಯುತ್ ಉಳಿತಾಯವನ್ನೂ ಮಾಡಬಹುದು. ಶಾಲಾ-ಕಾಲೇಜುಗಳಲ್ಲಿ ಈ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತದೆ ಎಂದು ಹೇಳಿದರು.  
ಕೆನರಾ ಬ್ಯಾಂಕ್ ಡಿ.ಜಿ.ಎಂ. ಸರ್ವೇಶ್ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮತ್ತು ಕೌಶಲ ಬೆಳೆಸಿಕೊಂಡಲ್ಲಿ ಉತ್ತಮ ಉದ್ಯೋಗ ಪಡೆಯಬಹುದು. ಶಿಕ್ಷಣ ಮತ್ತು ಸ್ವಯಂ ಉದ್ಯೋಗಕ್ಕೆ ಕೆನರಾ ಬ್ಯಾಂಕ್ ಆರ್ಥಿಕ ನೆರವು ಮತ್ತು ಮಾರ್ಗದರ್ಶನ ನೀಡುತ್ತಿದ್ದು, ಆಸಕ್ತರು ತಮಗೆ ಸಮೀಪದ ಕೆನರಾ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಮಾತನಾಡಿ ಶಕ್ತಿಯ ಅಭಾವದ ಇಂದಿನ ಕಾಲದಲ್ಲಿ ಸೌರಶಕ್ತಿಯಂತಹ ಪರ್ಯಾಯ ಶಕ್ತಿಯ ಬಳಕೆ ಅನಿವಾರ್ಯವಾಗಿದೆ ಎಂದು ಹೇಳಿ ಸೆಲ್ಕೊ ಸೋಲಾರ್ ಲೈಟ್ ಮತ್ತು ಕೆನರಾ ಬ್ಯಾಂಕ್ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿದರು.
ಉಜಿರೆ ಕೆನರಾ ಬ್ಯಾಂಕ್ ಶಾಖೆಯ ಪ್ರಬಂಧಕಿ ರಾಜಶ್ರೀ ಮತ್ತು ಮಂಜುಶ್ರೀ ಪ್ರಿಂಟರ್ಸ್ ಪ್ರಬಂಧಕ ಶೇಖರ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲ ಪ್ರಕಾಶ್ ಕಾಮತ್ ಸ್ವಾಗತಿಸಿದರು. ಕುಮಾರಿ ಮೇಘನಾ ಧನ್ಯವಾದವಿತ್ತರು. ಸಂಸ್ಥೆಯ ಉಪನ್ಯಾಸಕಿ ಸಂಧ್ಯಾ ಕಾರ್ಯಕ್ರಮ ನಿರ್ವಹಿಸಿದರು.

p>

LEAVE A REPLY

Please enter your comment!
Please enter your name here