ವೇಣೂರು: ನಿಟ್ಟಡೆಯ ಕುಂಭಶ್ರೀ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಜ. 1ರಂದು ಎಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಮಾತಾ-ಪಿತಾ-ಗುರುದೇವೋಭವ ಹೃದಯಸ್ಪರ್ಶಿ ಕಾರ್ಯಕ್ರಮವು ಶಾಲೆಯ ಆವರಣದಲ್ಲಿ ಜರಗಿತು.
ಮಾಜಿ ವಿಧಾನ ಪರಿಷತ್ ಶಾಸಕ ಕ್ಯಾ| ಗಣೇಶ್ ಕಾರ್ಣಿಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಾಲೆಯಲ್ಲಿ ಕಲಿಸುವ ಎಲ್ಲಾ ವಿದ್ಯೆಗಿಂತ ಹೆತ್ತವರನ್ನು ಗೌರವಿಸಬೇಕೆನ್ನುವ ಮೌಲ್ಯದ ಪ್ರತಿಬಿಂಬಕ್ಕಿಂತ ದೊಡ್ಡ ವಿದ್ಯೆ ಇನ್ನೊಂದಿಲ್ಲ. ಸಂಸ್ಕಾರವೂ ಕಲಿಕೆಯ ಒಂದು ಭಾಗವೆಂದ ಅವರು, ಹೆತ್ತವರನ್ನು ದೇವರಂತೆ ಕಾಣುವ ಅದ್ಭುತ ಚಿಂತನೆ ಜಗತ್ತಿನ ಬೇರೆಲ್ಲೂ ಇಲ್ಲದ ನಮ್ಮ ಸಂಸ್ಕೃತಿಯಲ್ಲಿ ಮಾತ್ರ ಎಂದರು.
ಚಿಂತನೆ ಅತ್ಯದ್ಭುತ
ದೇಶ ಕಳೆದ 75 ವರ್ಷಗಳಲ್ಲಿ ಅದ್ಭುತ ಸಾಧನೆ ಮಾಡಿದೆ. ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎನ್ನುವುದು ನಮ್ಮ ಸಂಸ್ಕೃತಿಯ ಆಳವಾದ ಬೇರು. ಆದರೆ ಇಂದು ಬೇರುಗಳಿಂದ ಕಳಚಿಕೊಳ್ಳುತ್ತಿರುವುದು ಖೇದಕರ. ಇಂತಹ ಮೌಲ್ಯ ಬಿತ್ತುವ ಕುಂಭಶ್ರೀ ಶಾಲೆಯ ಚಿಂತನೆ ಅತ್ಯದ್ಭುತವಾದದ್ದು ಎಂದರು. ಶಾಲೆಯ ಸಂಸ್ಥಾಪಕ ಗಿರೀಶ್ ಕೆ.ಎಚ್., ಕಾರ್ಯನಿರ್ವಹಣಾಧಿಕಾರಿ ಅಶ್ವಿತ್ ಕುಲಾಲ್, ವೈಭವ ಸಮಿತಿಯ ವಿವಿಧ ಪದಾಧಿಕಾರಿಗಳಾದ ಹರೀಶ್ ಕುಮಾರ್, ಗುರುಪ್ರಕಾಶ್ ಕಕ್ಕೆಪದವು, ಶರಬಯ್ಯ, ಬಾಲಕೃಷ್ಣ ಭಟ್, ಜಗದೀಶ್, ಪ್ರಶಾಂತ್, ಗಣೇಶ್ ಕುಂದರ್, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಉಷಾ ಜಿ., ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಶೋಭಾ ಎಲ್.ಎನ್. ರಾವ್, ಪೂರ್ವಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಅಕ್ಷತಾ, ವಿದ್ಯಾರ್ಥಿ ಸಂಘದ ನಾಯಕಿ ಸಿಂಚನಾ ಭಟ್ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಭವಾನಿದಿವ್ಯಾ ಮತ್ತು ದೀಪಾ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಹೃದಯಸ್ಪರ್ಶಿ ಕಾರ್ಯಕ್ರಮ
ಸಾಂಪ್ರದಾಯಿಕ ಉಡುಗೆತೊಟ್ಟ ಎಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಧನ್ಯತಾ ಭಾವದೊಂದಿಗೆ ಪೂಜಿಸುವ ಕಾರ್ಯಕ್ರಮ ಇದಾಗಿದೆ. ಶಾಲೆಯ ಸಂಸ್ಥಾಪಕ ದಂಪತಿ ಮಕ್ಕಳ ಪೋಷಕರಿಗೆ ಹೂಹಾರ ಹಾಕಿ ಸ್ವಾಗತಿಸಿದರು. ಬಳಿಕ ಪೋಷಕರಿಗೆ ಆರತಿ ಎತ್ತಿದ ಮಕ್ಕಳು ಅವರ ತೊಡೆಯಲ್ಲಿ ತಲೆಯಿಟ್ಟು ಕೆಲವೊತ್ತು ಮಲಗಿ ತನ್ನೆಲ್ಲಾ ತಪ್ಪುಗಳನ್ನು ಮನ್ನಿಸಿ ಆಶೀರ್ವದಿಸಬೇಕೆಂಬ ಮಕ್ಕಳ ಭಾವನಾತ್ಮಕ ಸಂದೇಶ ಸಾರಿದಾಗ ಪೋಷಕರ ಕಣ್ಣಂಚಿನಿಂದ ನೀರು ಬಂತು. ಬಳಿಕ ವಿದ್ಯಾರ್ಥಿಗಳು ಗುರುಗಳಿಗೆ ನಮಸ್ಕರಿಸಿದರು.