ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಸುದೀರ್ಘ 37ವರ್ಷ ಸೇವೆ ಸಲ್ಲಿಸಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಯೋ ನಿವೃತ್ತಿ ಹೊಂದಲಿರುವ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ಲಿಯೋ ನೊರೋನ್ಹಾರ ವಿದಾಯ ಸಮಾರಂಭ ಇತ್ತೀಚೆಗೆ ಸೇಕ್ರೆಡ್ ಹಾರ್ಟ್ ಸಭಾ ಭವನದಲ್ಲಿ ಜರುಗಿತು.
ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ|ಬೇಸಿಲ್ ವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ವೃತ್ತಿ ಪವಿತ್ರವಾದದ್ದು.ಕಾಲಕಾಲಕ್ಕೆ ತನ್ನ ಜ್ಞಾನಶಕ್ತಿಯನ್ನು ಪುನಶ್ಚೇತನ ಗೊಳಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತರುವವರೇ ನಿಜವಾದ ಶಿಕ್ಷಕರು. ಸಮರ್ಪಣಾ ಸೇವಾ ಮನೋಭಾವವನ್ನು ರೂಢಿಸಿಕೊಂಡವರು ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಲು ಸಾಧ್ಯ.ಇದನ್ನು ಲಿಯೋ ನೊರೋನ್ಹಾ ಸಾಧಿಸಿ ತೋರಿಸಿದ್ದಾರೆ.ಅವರ ಮುಂದಿನ ನಿವೃತ್ತ ಜೀವನವು ಸುಖ, ಸಂತೋಷ ,ಆರೋಗ್ಯದಿಂದ ಕೂಡಿರಲೆಂದು ಅವರು ಶುಭ ಹಾರೈಸಿದರು.
ಲಿಯೋ ನೊರೋನ್ಹಾರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿ ಅವರು ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜು ನನಗೆ ಸರ್ವವನ್ನು ನೀಡಿದೆ. ಮುತ್ತು ರತ್ನದಂಥ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ನನಗೆ ಸಿಕ್ಕಿದ್ದಾರೆ. ಕಠಿಣ ಸಂದರ್ಭದಲ್ಲಿ ದುಡಿಯುವ ಧೀ ಶಕ್ತಿಯನ್ನು ಭಗವಂತನು ನೀಡಿದ್ದಾನೆ. ಆಡಳಿತ ಮಂಡಳಿ, ಸಹೋದ್ಯೋಗಿ ಮಿತ್ರರ ಸಹಕಾರವನ್ನು ಎಂದು ಮರೆಯಲು ಸಾಧ್ಯವಿಲ್ಲ ಎಂದು ಅವರು ತಮ್ಮ 37 ವರ್ಷಗಳ ಸುದೀರ್ಘ ಸೇವಾ ಅನುಭವದ ಸವಿ ನೆನಪುಗಳನ್ನು ಹಂಚಿಕೊಂಡರು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನ ಸಹಾಯಕ ಧರ್ಮಗುರುಗಳಾದ ರೆ|ಫಾ|ವಿಲಿಯಂ ಡಿಸೋಜ, ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನ ಪ್ರಾಂಶುಪಾಲ ಜೋಸೆಫ್ ಎನ್.ಎಮ್ ,ಸೇಕ್ರೆಡ್ ಹಾರ್ಟ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮ್ಯಾಕ್ಸಿಂ ಆಲ್ಬುಕರ್ಕ್, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಕುಮಾರ ನಾಯ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.
ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ವಂ|ದೀಪಕ್ ಡೇಸಾ, ಸೇಕ್ರೆಡ್ ಹಾರ್ಟ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಮೋಹನ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ವಂ| ಜೆರೊಮ್ ಡಿಸೋಜ ಸ್ವಾಗತಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ಸೂರಜ್ ಚಾರ್ಲ್ಸ್ ನ್ಯೂನೆಸ್ ನಿವೃತ್ತರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಾದ ಮೆಲ್ರಾಯಿ ಕ್ರಾಸ್ತಾ, ಕವನ ಗುರು ವಂದನೆ ಸಲ್ಲಿಸಿದರು.ಉಪನ್ಯಾಸಕರಾದ ರೆನಿಶಾ ವೇಗಸ್ ವಂದಿಸಿ,ಪ್ರಿಯಾ ಜ್ಯೋತಿ ಕುಟಿನ್ಹಾ ಹಾಗೂ ಲಾವಣ್ಯ ಆಳ್ವಾ.ಕೆ ಕಾರ್ಯಕ್ರಮ ನಿರೂಪಿಸಿದರು.