ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯದ ಸಂಯುಕ್ತ ಆಶ್ರಯದಲ್ಲಿ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ

0

ಮಡಂತ್ಯಾರ್: ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರ್ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಸಂಯುಕ್ತ ಆಶ್ರಯದಲ್ಲಿ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಡಿ.14ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರು ರೆ.ಫಾ.ಬೇಸಿಲ್ ವಾಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸೇಕ್ರೆಡ್ ಹಾರ್ಟ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಹರೀಶ್ ಪೂಂಜಾ ದೀಪವನ್ನು ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಬೆಳ್ತಂಗಡಿಯಲ್ಲಿ ಸುಮಾರು ಐದು ಎಕರೆ ಜಾಗದಲ್ಲಿ 400 ಮೀಟರ್ ಟ್ರ್ಯಾಕ್ ಮತ್ತು ಕಬಡ್ಡಿ, ವಾಲಿಬಾಲ್ ಹಾಗೂ ಈಜುಕೊಳ ವ್ಯವಸ್ಥೆಯನ್ನು ಹೊಂದಿರುವ ಸುಸಜ್ಜಿತ ಒಳಾಂಗಣ ಕ್ರೀಡಾಂಗಣದ ವ್ಯವಸ್ಥೆಯನ್ನು ಹೊಂದಿರುವ ಒಂದು ಬೃಹತ್ ಬೆಳ್ತಂಗಡಿ ತಾಲೂಕು ಕ್ರೀಡಾಂಗಣವನ್ನು ಸ್ಥಾಪಿಸಲಾಗುವುದು. ಈ ಮೂಲಕ ತಾಲೂಕಿನ ಪ್ರತಿಭೆಗಳಿಗೆ ಸೌಲಭ್ಯಗಳನ್ನು ಒದಗಿಸಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಲು ಅನುಕೂಲಕರ ವಾತಾವರಣವನ್ನು ನಿರ್ಮಿಸಲಾಗುವುದು ಎಂದು ಹೇಳಿ ಕಾಲೇಜು ದಿನಗಳಲ್ಲಿ ತಾನು ವಿಶ್ವವಿದ್ಯಾಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸೇಕ್ರೆಡ್ ಸಂಸ್ಥೆಯನ್ನು ಪ್ರತಿನಿಧಿಸಿದ್ದನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ.ಜೋಸೆಫ್ ಎನ್.ಎಂ ಮಾತನಾಡಿ ಶಾಸಕರು ತಾಲೂಕಿಗೆ ನೀಡಿದ ಮಹತ್ತರ ಸೇವೆಯನ್ನು ಶ್ಲಾಘಿಸಿದರು. ಇದೇ ಸಂಧರ್ಭದಲ್ಲಿ ಇಡೀ ತಾಲೂಕಿಗೆ ಸಾಕಾಗುವಷ್ಟು ನೀರಾವರಿ ಯೋಜನೆಯನ್ನು ಕೈಗೊಂಡು ಮಾಡಿದ ಕೆಲಸಕ್ಕಾಗಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ಸರ್ಕಾರದ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ ಇಂದಿನ ಆಧುನಿಕ ಕ್ರೀಡೆಗಳ ವೈಭವದ ನಡುವೆ ಬಾಲ್ ಬ್ಯಾಡ್ಮಿಂಟನ್ ಅಳಿಯದೆ ಉಳಿದು ಬಂದಿರುವುದು ಸಂತೋಷದ ವಿಚಾರವಾಗಿದೆ. ಕ್ರೀಡಾ ಸಚಿವನಾಗಿದ್ದಾಗ ತಾನು ನಮ್ಮ ಜಿಲ್ಲೆಗೆ ಹಲವು ಸೌಲಭ್ಯಗಳನ್ನು ಒದಗಿಸಿ ಕೊಡಲು ಪ್ರಯತ್ನಿಸಿದ್ದೇನೆ ಮತ್ತು ಅದರಲ್ಲಿ ಯಶಸ್ಸು ಕಂಡಿದ್ದೇನೆ. ಅದು ನನ್ನ ಭಾಗ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಕಿಶೋರ್ ಕುಮಾರ್ ಮಾತನಾಡಿ ಕ್ರೀಡಾಪಟುಗಳಿಗೆ ಅವಕಾಶಗಳು ಲಭಿಸಿದಾಗ ಎಲ್ಲರ ಸಹಕಾರದೊಂದಿಗೆ ಇನ್ನಷ್ಟು ಸಾಧನೆಯನ್ನು ಮಾಡಲು ಸಾಧ್ಯ ಎಂದು ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿ’ಸೋಜಾ ಮಾತನಾಡಿ ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧಿಸುವುದು ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಫಾ.ಬೇಸಿಲ್ ವಾಸ್ ಸೋತರೆ ಕುಗ್ಗಬೇಡಿ, ಗೆದ್ದರೆ ಹಿಗ್ಗಬೇಡಿ. ಸೋಲು ಗೆಲುವು ಜೀವನದ ಒಂದು ಭಾಗವಾಗಿದೆ ಎಂದು ಹೇಳಿ ಸ್ಪರ್ಧಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ.ಜೋಸೆಫ್ ಎನ್.ಎಂ ಸ್ವಾಗತಿಸಿದರು, ಕಾರ್ಯಕ್ರಮದ ವ್ಯವಸ್ಥಾಪಕ ಕಾರ್ಯದರ್ಶಿ ಪ್ರೊ.ಅಲೆಕ್ಸ್ ಐವನ್ ಸೀಕ್ವೆರಾ ಧನ್ಯವಾದ ಸಮರ್ಪಿಸಿದರು.
ವೇದಿಕೆಯಲ್ಲಿ ಮಡಂತ್ಯಾರಿನ ಬಿಗ್ ಬ್ರದರ್ ಲ್ಯಾನ್ಸಿ ಪಿಂಟೋ, ಸಂಸ್ಥೆಯ ಹಳೆ ವಿದ್ಯಾರ್ಥಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಬಿ.ರಾಜಶೇಖರ ಶೆಟ್ಟಿ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಲಿಯೋ ರೊಡ್ರಿಗಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಫ್ರಾನ್ಸಿಸ್ ವಿ.ವಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶ್ರೀ.ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.

ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ನೆಲ್ಸನ್ ಮೋನಿಸ್ ನಿರೂಪಿಸಿದರು. ವಿಶ್ವವಿದ್ಯಾಲಯ ಮಟ್ಟದಲ್ಲಿ ಅನಂತರಾಜು ಸ್ಮಾರಕ ಫಲಕಕ್ಕಾಗಿ ನಡೆಯುವ ಪುರುಷರ ಹಾಗೂ ಫೆಬಿಯನ್ ಪಿ.ಎನ್ ಕುಲಾಸೋ ಸ್ಮಾರಕ ಫಲಕಕ್ಕಾಗಿ ಮಹಿಳಾ ಬಾಲ್ ಬ್ಯಾಡ್ಮಿಂಟನ್ ತಂಡಗಳು ಪೈಪೋಟಿ ನಡೆಸಲಿದೆ. ಸುಮಾರು 17 ಮಹಿಳಾ ತಂಡಗಳು ಹಾಗೂ 17 ಪುರುಷರ ತಂಡಗಳು ಭಾಗವಹಿಸುತ್ತಿರುವ ಈ ಕ್ರೀಡೆಯಲ್ಲಿ ಸುಮಾರು 380 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here