ಮಹಿಳೆ ಮೇಲಿನ ದೌರ್ಜನ್ಯ ಖಂಡನೀಯ : ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಬಿಜೆಪಿ ಒತ್ತಾಯ

0

ಸತ್ಯಾಸತ್ಯತೆ ಅರಿತು ಹೇಳಿಕೆ ನೀಡಲು ತಾಕೀತು

ಬಟ್ಟೆ ವ್ಯಾಪಾರಿಗಳ ಸೋಗಿನಲ್ಲಿ ಬಂದು ಮಹಿಳೆಯೊಬ್ಬರ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯನ್ನು ಸುಳ್ಯ ಬಿಜೆಪಿ ಮಂಡಲ ಸಮಿತಿಸಿ ಖಂಡಿಸುವುದಲ್ಲದೆ, ಆರೋಪಿಗಳಿಗೆ ಕಠಿಣ ಶಿಕ್ಷೆಗೆ ನಾವು ಆಗ್ರಹಿಸುತ್ತೇವೆ. ಆರೋಪಿಗಳ ಪರ ಹೇಳಿಕೆ ನೀಡುವ ಕೆಲ ಮುಖಂಡರು ಸತ್ಯಾಸತ್ಯತೆಯನ್ನು ಅರಿತು ಹೇಳಿಕೆ ನೀಡಬೇಕು ಎಂದು ಬಿಜೆಪಿ ತಾಕೀತು ಮಾಡಿದೆ.

ಅ.೨೭ ರಂದು ಸುಳ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿಯವರು, “ಬಟ್ಟೆ ವ್ಯಾಪಾರಿಗಳ ಸೋಗಿನಲ್ಲಿ ಅ.೨೦ರಂದು ಬಂದ ಇಬ್ಬರು ವ್ಯಕ್ತಿಗಳು ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ಕಟ್ಟ ಎಂಬಲ್ಲಿ ಕಾಡಿನ ಬದಿ ಇರುವ ದೈವನರ್ತಕ ಸಮುದಾಯದ ಒಂಟಿ ಮನೆಗೆ ಬಂದು ಮಹೊಳೆಯೊಬ್ಬರೆ ಇರುವುದನ್ನು ಗಮನಿಸಿ ಹಣ ಇಲ್ಲದಿದ್ದರೂ ಪರವಾಗಿಲ್ಲ. ಬಟ್ಟೆ ಕೊಡುತ್ತೇವೆ. ನಮ್ಮೊಂದಿಗೆ ಸಹಕರಿಸಿದರೆ ಸಾಕು ಎಂದು ವ್ಯಾಪಾರಿಗಳು ಹೇಳಿದ್ದಲ್ಲದೆ, ಮಹಿಳೆ ಒಪ್ಪದಿದ್ದಾಗ ದುಡ್ಡಿನ ಆಮಿಷವೊಡ್ಡಿದ್ದಲ್ಲದೆ, ಆಕೆಯ ಮೈಮೇಲೆ ಕೈ ಹಾಕಿ ಲೈಂಗಿಕ ದೌರ್ಜನ್ಯ ನಡೆಸಿದಾಗ ಆ ಮಹಿಳೆ ಬೊಬ್ಬಿಟ್ಟರು. ಈ ವೇಳೆ ದುಷ್ಕರ್ಮಿಗಳು ತಾವು ಬಂದ ಕಾರಿನಲ್ಲಿ ಪರಾರಿಯಾಗಿದ್ದು, ವಿಷಯ ತಿಳಿದ ಊರವರು ಆ ಕಾರನ್ನು ಬೆನ್ನಟ್ಟಿದ್ದರು. ಈ ವೇಳೆ ಆ ಕಾರು ೨ ಬೈಕ್ ಮತ್ತು ಜೀಪಿಗೆ ಢಿಕ್ಕಿ ಹೊಡೆದು ಪಲ್ಟಿಯಾಯಿತು. ವ್ಯಾಪಾರದ ಸೋಗಿನಲ್ಲಿ ಬಂದು ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯನ್ನು ಸುಳ್ಯ ಬಿಜೆಪಿ ಮಂಡಲ ಖಂಡಿಸಿದ್ದು, ಆರೋಪಿಗಳನ್ನು ಜೈಲಿಗಟ್ಟಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ನಾವು ಆಗ್ರಹಿಸುವುದಾಗಿ ಹೇಳಿದರು.

ಆದರೆ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಸೇರಿದಂತೆ ಕೆಲವು ಸಂಘಟನೆಗಳು ಸತ್ಯಾಸತ್ಯತೆ ತಿಳಿದುಕೊಳ್ಳದೆ ರಾಜಕೀಯಗೊಳಿಸಿ ದಲಿತ ಮಹಿಳೆಯ ಅತ್ಯಾಚಾರ ಯತ್ನವನ್ನು ತಿರುಚಿ ದುಷ್ಕರ್ಮಿಗಳನ್ನು ಬೆಂಬಲಿಸಿ ಸುಳ್ಳು ಆರೋಪ ಮಾಡುವುದನ್ನು ನಾವು ಖಂಡಿಸುತ್ತೇವೆ” ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮಾತನಾಡಿ “ಆರೋಪಿಗಳನ್ನು ಬೆನ್ನಟ್ಟಿದ್ದು ಕಾರು ಪಲ್ಟಿಯಾದ ಮೇಲೆ ಊರವರು ಹಲ್ಲೆ ನಡೆಸಿದ್ದು ಅವರು ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳೆಂದು ಹೊರತು ಅವರು ಮುಸ್ಲಿಮರೆಂದು ಅಲ್ಲ. ಅವರು ಮುಸ್ಲಿಮರೆಂದು ಗೊತ್ತಾದುದುದೇ ಹಲ್ಲೆ ನಡೆಸಿದ ಬಳಿಕ. ಇಲ್ಲಿ ಜಾತಿ ಧರ್ಮವನ್ನು ಎಳೆದು ತಂದಿರುವುದು ಅತ್ಯಾಚಾರ ಪ್ರಕರಣ ಗಂಭೀರತೆಯನ್ನು ಕುಗ್ಗಿಸಲು” ಎಂದು ಹೇಳಿದರು.
ರಾಜ್ಯ ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ. ತೀರ್ಥರಾಮರು ಹಾಗೂ ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿಯವರು ಮಾತನಾಡಿ, ಇಕ್ಬಾಲ್ ಎಲಿಮಲೆಯವರು ಹಾಗೂ ಟಿ.ಎಂ. ಶಹೀದ್‌ರವರು ಸತ್ಯಾಸತ್ಯತೆ ಅರಿಯದೆ ಹೇಳಿಕೆಯನ್ನು ನೀಡುತ್ತಿದ್ದಾರೆ. ಅವರು ನೊಂದ ಮಹಿಳೆಯ ಮನೆಗೆ ಹೋಗಿ ಸತ್ಯವನ್ನು ಅರಿಯಬೇಕು. ರಾಜಕೀಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ” ಎಂದು ಹೇಳಿದರು.

ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಗುತ್ತಿಗಾರು ಶಕ್ತಿ ಕೇಂದ್ರದ ಅಧ್ಯಕ್ಷ ವಿನಯ ಮುಳುಗಾಡು ಇದ್ದರು.

 

LEAVE A REPLY

Please enter your comment!
Please enter your name here