ಬೆಂಗಳೂರಿನಲ್ಲಿ ಬೃಹತ್ ಒಳನಾಡು ಮೀನು ಉತ್ಪಾದಕರ ಸಮಾವೇಶ

0

ಸಿ.ಎಂ.ಬಸವರಾಜ ಬೊಮ್ಮಾಯಿಯವರಿಂದ ಉದ್ಘಾಟನೆ

ಮೀನು ಉತ್ಪಾದನೆಯಲ್ಲಿ ಕರ್ನಾಟಕವನ್ನು ಮೊದಲ ರಾಜ್ಯವನ್ನಾಗಿಸುವ ಗುರಿ – ಸಚಿವ ಎಸ್ .ಅಂಗಾರ

ಸುಳ್ಯದಿಂದ ನೂರಾರು ಜನರು ಸಮಾವೇಶದಲ್ಲಿ ಭಾಗಿ

ಕರ್ನಾಟಕ ಸರಕಾರದ ಮೀನುಗಾರಿಕಾ ಇಲಾಖೆಯ ನೇತೃತ್ವದಲ್ಲಿ ಫ್ರೀಡಂ ಆ್ಯಪ್ ಸಹಕಾರದಲ್ಲಿ ಬೃಹತ್ ಒಳನಾಡು ಮೀನು ಉತ್ಪಾದಕರ ಸಮಾವೇಶ ಮತ್ತು ಕಾರ್ಯಾಗಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅ.16 ರಂದು ನಡೆಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾವೇಶವನ್ನು ಉದ್ಘಾಟಿಸಿದರು. ಸಚಿವರಾದ
ಎಸ್.ಅಂಗಾರ, ಅಶ್ವಥ್ ನಾರಾಯಣ, ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ.,ನಾಗೇಶ್, ಭೈರತಿ ಬಸವರಾಜ್, ಶಾಸಕರಾದ ಸಂಜೀವ ಮಠಂದೂರು, ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ,ಯಾಸ್ಪಾಲ್ ಸುವರ್ಣ ಪ್ರಿಡಂ ಆಪ್ ಪ್ ಸಿ ಓ ಸುಧೀರ್ ಮತ್ತಿತರರು ಭಾಗವಹಿಸಿದ್ದರು.

ರೈತರು ಮೀನುಗಾರಿಕೆ ಕೃಷಿಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎನ್ನುವ ಉದ್ದೇಶದಿಂದ ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೀನುಗಾರಿಕೆ, ಬಂದರು, ಒಳನಾಡು, ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು. ಒಳನಾಡು ಮೀನು ಸಾಕಾಣಿಕೆ ಮತ್ತು ಅದರ ಸಂಬಂಧಿತ ಚಟುವಟಿಕಗಳ ಮೂಲಕ ತಮ್ಮ ಜೀವನೋಪಾಯವನ್ನು ನಿರ್ಮಿಸಿಕೊಳ್ಳುವ ಆಸಕ್ತಿ ಹೊಂದಿರುವ 10 ಸಾವಿರ ಜನರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಲಾಗಿದೆ ಎಂದರು. ಸುಮಾರು 234 ಕ್ಕೂ ಹೆಚ್ಚು ಮೀನು ತಳಿಗಳು ಇದ್ದು, ಇದರಲ್ಲಿ 34 ಬೇರೆ ಬೇರೆ ತಳಿಗಳ ಮೀನುಗಳನ್ನು ಹೆಚ್ಚು ಬಳಕೆ ಮಾಡುತ್ತೇವೆ. ಈ ಸಮಾವೇಶದಲ್ಲಿ ಕೃಷಿಗೆ ಸೂಕ್ತವಾದ ವಿವಿಧ ಮೀನು ತಳಿಗಳು, ಅವುಗಳಿಗೆ ನೀಡುವ ವಿವಿಧ ಆಹಾರ, ಮೀನು ಕೃಷಿಯಲ್ಲಿರೋ ಬಯೋಫ್ಲಾಕ್, ಮೀನಿನ ಮೌಲ್ಯ ವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ಸೇರಿದಂತೆ ಇತರೆ ಸಂಬಂಧಪಟ್ಟ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುವುದು ಎಂದರು.

ಭಾರತದ ಮೀನು ಉತ್ಪಾದನೆಯಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು 3ನೇ ಸ್ಥಾನದಲ್ಲಿದೆ. ವಿಶ್ವ ಆಹಾರ ದಿನದಂದು ಆಯೋಜಿಸಲಾಗಿರುವ ಒಳನಾಡು ಮೀನು ಉತ್ಪಾದಕರ ಸಮಾವೇಶವು ಒಳನಾಡು ಮೀನು ಕೃಷಿ ವಲಯದಲ್ಲಿ ರಾಷ್ಟ್ರದ ಭವಿಷ್ಯಕ್ಕಾಗಿ ಏರ್ಪಡಿಸಿದ ಒಂದು ಪ್ರಮುಖ ಕಾರ್ಯಕ್ರಮವಾಗಿದೆ. ಪ್ರಮುಖ ಮೀನು ಉತ್ಪಾದನೆಯಲ್ಲಿ ಕರ್ನಾಟಕವನ್ನು, ಭಾರತದ ಮೊದಲ ರಾಜ್ಯವನ್ನಾಗಿಸುವ ಗುರಿಯೊಂದಿಗೆ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕೇಂದ್ರ ಸರ್ಕಾರವು ಮೀನುಗಾರಿಕೆ ಉದ್ದೇಶಕ್ಕಾಗಿ 5 ವರ್ಷಗಳಿಗೆ 725 ಕೋಟಿ ರೂ.ಗಳ ಅನುದಾನ ನಿಗದಿಪಡಿಸಿದೆ. ಆದರೆ ನಮ್ಮ ಸರ್ಕಾರ 3 ವರ್ಷಗಳಲ್ಲಿ 760 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದರು.
ಸುಳ್ಯ ತಾಲೂಕಿನಿಂದ‌ಲೂ ಸಾವಿರಕ್ಕೂ ಹೆಚ್ಚು ಮಂದಿ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

 

 

LEAVE A REPLY

Please enter your comment!
Please enter your name here