






ಬೆಳ್ತಂಗಡಿ: ಜಮ್ ಇಯ್ಯತುಲ್ ಫಲಾಹ್ ಬೆಳ್ತಂಗಡಿ ಇದರ ವತಿಯಿಂದ ಅ. 24 ರಂದು ಫಲಾಹ್ ಸಭಾಂಗಣದಲ್ಲಿ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ *ಖಾಲಿದ್ ಪುಲಾಬೆ* ವಹಿಸಿಕೊಂಡಿದ್ದರು. ಗೌರವಾಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಇವರ ಕಿರಾಅತ್ ನೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಜೊತೆ ಕಾರ್ಯದರ್ಶಿ ಆಲಿಯಬ್ಬ ಪುಲಾಬೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಭಾಗವಹಿಸಿ ಮಾತನಾಡಿ, ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳು ಪ್ರಶಂಸನೀಯ. 40 ವರ್ಷಗಳ ಹಿಂದೆ ಬಿತ್ತಿದ ಬೀಜ ಇಂದು ಹೆಮ್ಮರವಾಗಿ ಶೈಕ್ಷಣಿಕ ರಂಗಕ್ಕೆ ಉತ್ತಮ ಕೊಡುಗೆ ನೀಡಿ, ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.


ಇನ್ನೋರ್ವ ಮುಖ್ಯ ಅತಿಥಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ *ಡಾ. ರಾಜಶ್ರೀ. ಬಿ. ಮಾತನಾಡಿ, “ಇಂದಿನ ದಿನಗಳಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸುತ್ತಿರುವುದು ಪ್ರಶಂಸನೀಯ. ಹುಡುಗರು ಕೂಡ ಉತ್ತಮ ಅಂಕಗಳನ್ನು ಪಡೆದು ಮುಂದೆ ಬರಬೇಕು. ಜಮ್ ಇಯ್ಯತುಲ್ ಫಲಾಹ್ ನೀಡುವ ವಿದ್ಯಾರ್ಥಿ ವೇತನವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸೇವೆ ಸಲ್ಲಿಸಬೇಕು” ಎಂದು ಕರೆ ನೀಡಿದರು.
ಮಾಜಿ ಜಿಲ್ಲಾಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬರು ಸಂಸ್ಥೆಯು ನಡೆದು ಬಂದ ಹಾದಿಯನ್ನು ವಿವರಿಸಿದರು.ಅಧ್ಯಕ್ಷ ಖಾಲಿದ್ ಪುಲಾಬೆ ಮಾತನಾಡಿ, “ಸಂಸ್ಥೆಯು ಪ್ರತಿ ವರ್ಷ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಇಂದು ಸುಮಾರು 120 ಬಡ ವಿದ್ಯಾರ್ಥಿಗಳಿಗೆ ತಲಾ ರೂ. 2500 ರಂತೆ ವಿದ್ಯಾರ್ಥಿವೇತನ ವಿತರಿಸಲಾಗಿದೆ. 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ ಮತ್ತು ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದಡಿ ಶಾಲು ಹೊದಿಸಿ ಸನ್ಮಾನಿಸಿ ವಿದ್ಯಾರ್ಥಿವೇತನ ನೀಡಲಾಯಿತು.
ಈ ಹಣವನ್ನು ದುರುಪಯೋಗಪಡಿಸದೆ ವಿದ್ಯಾಭ್ಯಾಸದ ಖರ್ಚಿಗೆ ಬಳಸಬೇಕು. ನಮ್ಮ ಸಂಸ್ಥೆಯಿಂದ ವೇತನ ಪಡೆದ ಹಲವರು ಇಂದು ಉನ್ನತ ಹುದ್ದೆಯಲ್ಲಿದ್ದು ಸಹಕಾರ ನೀಡುತ್ತಿದ್ದಾರೆ. ನೀವೂ ಕೂಡ ಕಷ್ಟಪಟ್ಟು ಓದಿ ಉನ್ನತ ಹುದ್ದೆ ಅಲಂಕರಿಸಿ ಸಂಸ್ಥೆಯನ್ನು ಸ್ಮರಿಸಬೇಕು. ಇಂದು ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಿಗಳಾಗುತ್ತಿರುವುದು ಸಮಾಜಕ್ಕೆ ಕಂಟಕವಾಗಿದೆ, ಪೋಷಕರು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು” ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಕಾಸಿಂ ಪದ್ಮುಂಜ, ಸಂಘಟನಾ ಕಾರ್ಯದರ್ಶಿ ಉಮರ್ ಕುಂಜಿ ನಾಡ್ಜೆ, ನಿಕಟಪೂರ್ವ ಅಧ್ಯಕ್ಷ ಶೈಕುಂಞಿ ಬೆಳ್ತಂಗಡಿ, ಅಬ್ಬೊನು ಮದ್ದಡ್ಕ, ಹಕೀಮ್ ಸುನ್ನತ್ ಕೆರೆ, ಕೆ.ಎಸ್. ಅಬೂಬಕರ್, ಅಬ್ದುಲ್ಲ ಕರಾಯ, ಅಬ್ಬಾಸ್ ಮದ್ದಡ್ಕ, ಕಾಸಿಂ ಮಲ್ಲಿಗೆ ಮನೆ, ಎಸ್.ಎಂ. ಕೋಯಾ ತಂಙಳ್, ಹಬೀಬ್ ಸಾಹೇಬ್, ನಿವೃತ್ತ ಡಿಎಫ್ಓ ಅಹಮದ್ ಹಾಗೂ ಆಜೀವ ಸದಸ್ಯರು ಉಪಸ್ಥಿತರಿದ್ದರು.ಕೋಶಾಧಿಕಾರಿ ಎಸ್.ಎಂ.ಎಸ್. ಇಬ್ರಾಹಿಂ ಧನ್ಯವಾದ ಅರ್ಪಿಸಿದರು. ಪತ್ರಕರ್ತ *ಅಶ್ರಫ್ ಅಲಿ ಕುಂಜಿ* ಕಾರ್ಯಕ್ರಮ ನಿರೂಪಿಸಿದರು.








