






ಧರ್ಮಸ್ಥಳ,:ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವದ ಸಭಾ ಕಾರ್ಯಕ್ರಮವು ಶ್ರೀ ಕ್ಷೇತ್ರದ ಮಹೋತ್ಸವ ಸಭಾಭವನದಲ್ಲಿ ಅತ್ಯಂತ ಭಕ್ತಿ, ಗೌರವ ಮತ್ತು ಸಂಭ್ರಮದಿಂದ ಜರುಗಿತು.
ವೇದಘೋಷದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ನೂರಾರು ಭಕ್ತರು, ಗಣ್ಯರು ಹಾಗೂ ಕ್ಷೇತ್ರದ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ವಸಂತ ಮಂಜಿತ್ತಾಯ, ಮಣೇಗಾರರು ಮತ್ತು ಬಳಗದವರು ವೇದಘೋಷ ನೆರವೇರಿಸಿದರು.
ಹಲವು ಹೊಸ ಯೋಜನೆಗಳ ಘೋಷಣೆ:ಪಟ್ಟಾಭಿಷೇಕ ವರ್ಧಂತ್ಯುತ್ಸವದ ಅಂಗವಾಗಿ ಭಕ್ತರಿಂದ ಗೌರವ ಸ್ವೀಕರಿಸಿ ಮಾತನಾಡಿದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದ ವತಿಯಿಂದ ಮುಂದಿನ ದಿನಗಳಲ್ಲಿ ಅನುಷ್ಠಾನಗೊಳ್ಳಲಿರುವ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ದಾನ ಪರಂಪರೆ ಮುಂದುವರೆಯಲಿದ್ದು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಸರ್ಕಾರದ ಅನುಮತಿಯೊಂದಿಗೆ ಉಜಿರೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬಿಪಿಟಿ (ಬ್ಯಾಚುಲರ್ ಆಫ್ ಫಿಸಿಯೋಥೆರಪಿ) ಮತ್ತು ನರ್ಸಿಂಗ್ ಕಾಲೇಜು 2027-28ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು.
ಇದಲ್ಲದೆ, ಎಸ್.ಕೆ.ಡಿ.ಆರ್.ಡಿ.ಪಿ. ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೂಲಕ ಗ್ರಾಮೀಣ ಭಾಗದ ಜನರಿಗೆ ಹಣಕಾಸಿನ ವ್ಯವಹಾರ ಸುಲಭವಾಗಲು ಎಟಿಎಂ ವ್ಯವಸ್ಥೆ, ಬಡವರಿಗಾಗಿ ಅಭಯದಾನ ಮತ್ತು ವಾಸ್ತವ್ಯದ ಮನೆಗಳ ನಿರ್ಮಾಣ, ಹಾಗೂ ಉಜಿರೆಯಲ್ಲಿ 300 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಎಸ್.ಡಿ.ಎಂ. ಕ್ರೀಡಾ ವಸತಿ ನಿಲಯ ನಿರ್ಮಾಣ, ಮತ್ತು ಕ್ಷೇತ್ರದ ವ್ಯಾಪ್ತಿಯ ಆಸ್ಪತ್ರೆಗಳ ಹಳೇ ಕಟ್ಟಡಗಳ ನವೀಕರಣ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಪ್ರಕಟಿಸಿ ಭಕ್ತರಲ್ಲಿ ಹರ್ಷ ಮೂಡಿಸಿದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಶ್ರೀನಿವಾಸ್ ಭಟ್ ಅವರು ಮಾತನಾಡಿ, “ಧರ್ಮಸ್ಥಳವು ಸಮಾಜಕ್ಕೆ ನಿರಂತರವಾಗಿ ದಾನ, ಧರ್ಮ ಮತ್ತು ಸೇವೆಯನ್ನು ನೀಡುತ್ತಾ ಬಂದಿದೆ. ಸಮಾಜಕ್ಕೆ ಪ್ರೇರಣೆಯಾಗಿದೆ. ಭಾರತಾದ್ಯಂತ ಕ್ಷೇತ್ರದ ಸೇವಾ ಕಾರ್ಯ ಪಸರಿಸಿದೆ. ಇದರ ಸಂಪೂರ್ಣ ಕೀರ್ತಿ ಪೂಜ್ಯ ಹೆಗ್ಗಡೆಯವರಿಗೆ ಸಲ್ಲುತ್ತದೆ. ಕ್ಷೇತ್ರದ ಜನಕಲ್ಯಾಣ ಕಾರ್ಯ ಇನ್ನಷ್ಟು ವಿಸ್ತಾರವಾಗಲಿ” ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, “ಕೃತಜ್ಞತೆ ಎಂಬುದು ಒಂದು ಶ್ರದ್ಧೆ. ಸಮಾಜದ ಒಳಿತಿಗಾಗಿ ಮತ್ತು ಉಳಿವಿಗಾಗಿ, ಕ್ಷೇತ್ರಕ್ಕೆ ಯಾವುದೇ ತೊಂದರೆ ಬಾರದ ರೀತಿಯಲ್ಲಿ ಹೊಸ ಹೊಸ ಯೋಜನೆಗಳನ್ನು ನೀಡುತ್ತಿರುವ ಪೂಜ್ಯ ಖಾವಂದರ ಜನಸೇವೆ ಮತ್ತು ಧಾರ್ಮಿಕ ಚಿಂತನೆಗಳು ಇಡೀ ಜಗತ್ತಿಗೆ ಮಾದರಿಯಾಗಿದೆ. ಅವರ ಮಾರ್ಗದರ್ಶನ ಸಮಾಜಕ್ಕೆ ನಿರಂತರವಾಗಿ ದೊರೆಯಲಿ” ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸಂಸೆ ಹೊಸನೆಲೆ ಎಸ್ಟೇಟ್ನ ಪ್ರಬಂಧಕ ಶ್ರೀವರ್ಮ ಅವರನ್ನು ಕ್ಷೇತ್ರದ ವತಿಯಿಂದ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.ಹಾಗೆಯೇ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ವತಿಯಿಂದ ಸಿದ್ಧಪಡಿಸಲಾದ ಮಹತ್ವದ ಕೃತಿ “ಮುಹೂರ್ತಪದವೀ (ಸಟೀಕಾ)” ಕೃತಿಯನ್ನು ಇದೇ ವೇದಿಕೆಯಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಹೇಮಾವತಿ ವಿ. ಹೆಗ್ಗಡೆ, ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಿತಿ ಅಧ್ಯಕ್ಷ ಡಿ. ಹರ್ಷೇಂದ್ರಕುಮಾರ್, ಶ್ರದ್ಧಾ ಅಮಿತ್, ಸುಪ್ರಿಯಾ ಹರ್ಷೇಂದ್ರಕುಮಾರ್, ಅಮಿತ್ ಕುಮಾರ್ ಹಾಗೂ ಕುಟುಂಬಸ್ಥರು, ಕ್ಷೇತ್ರದ ಸಿಬ್ಬಂದಿಗಳು ಮತ್ತು ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.
ಉಜಿರೆಯ ಎಸ್.ಡಿ.ಎಂ. ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ, ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ರಾವ್ ಅವರು ವಂದಿಸಿ, ಪದ್ಮಶ್ರೀ ಆರ್. ಜೈನ್ ಮತ್ತು ದಿವ್ಯ ನಿರೂಪಿಸಿದರು.









