






ಬೆಳ್ತಂಗಡಿ: ಕೊಕ್ಕಡ ಗ್ರಾಮದ ಸೌತಡ್ಕ ಮಹಾಗಣಪತಿ ದೇವಸ್ಥಾನದ ಬಳಿ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧೀನದ ಕಟ್ಟಡದಲ್ಲಿರುವ ಅಂಗಡಿಯ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಪರಸ್ಪರ ಹಲ್ಲೆ ನಡೆದು ನಿಂದಿಸಿ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಕೇಸ್ನ ವಿವರ: ಕೊಕ್ಕಡ ಗ್ರಾಮದ ಹಿತ್ತಿಲು ನಿವಾಸಿ ಸುಬ್ಬಣ್ಣ ಭಟ್ ಎಂಬವರ ಪುತ್ರ ಕೃಷ್ಣ ಭಟ್(೭೭) ಎಂಬವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ೭೮/೨೦೨೬ರಂತೆ ಎಫ್ಐಆರ್ ದಾಖಲಾಗಿದೆ. ಅ.೧೮ರಂದು ರಾಘವ ಭಂಡಾರಿ ಮತ್ತು ಅವರ ಕೆಲಸದವರು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ನ ಕಟ್ಟಡದ ಅಂಗಡಿ ಕೋಣೆ ಸಂಖ್ಯೆ ೧ರಲ್ಲಿ ವ್ಯಾಪಾರ ಮಾಡುತ್ತಿರುವ ಸಮಯ ಬೆಳಗ್ಗೆ ೦೮-೧೫ ಗಂಟೆ ಹೊತ್ತಿಗೆ ಈ ಮೊದಲು ಸದರಿ ಅಂಗಡಿ ಕೋಣೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಹರೀಶ್ ಮತ್ತು ಅವರ ಹೆಂಡತಿ, ಮಕ್ಕಳು ಹಾಗೂ ಇತರರು ಏಕಾಎಕಿ ಅಂಗಡಿಯ ಒಳಗೆ ಬಂದು ಸುಮಾರು ೨೫ ಸಾವಿರ ರೂ ಅಂದಾಜಿನ ಕಟ್ಟಡ ಹಾಗೂ ಸ್ವತ್ತುಗಳನ್ನು ಹಾನಿ ಮಾಡಿ ರಾಘವ ಭಂಡಾರಿ ಮತ್ತು ಅವರ ಕೆಲಸದವರಿಗೆ ಕಲ್ಲು, ದೊಣ್ಣೆ ಹಿಡಿಸೂಡಿಗಳಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಈ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದ್ದು ಹರೀಶ್ ಮತ್ತು ಇತರರನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ. ರಾಘವ ಭಂಡಾರಿ(೪೦) ನೊಂದವರು ಎಂದು ಉಲ್ಲೇಖಿಸಲಾಗಿದ್ದು ಆರೋಪಿಗಳ ವಿರುದ್ಧ ಬಿಎನ್ಎಸ್ ೧೧೫(೨), ೧೧೮(೧), ೩೨೪(೪), ೩೨೯(೪), ೩೫೧(೨), ೩೫೨, ೧೯೦ರನ್ವಯ ಕೇಸು ದಾಖಲಿಸಲಾಗಿದೆ.
ಇನ್ನೊಂದು ಕೇಸ್: ಇದೇ ಪ್ರಕರಣಕ್ಕೆ ಸಂಬಂಧಿಸಿ ಕೊಕ್ಕಡ ಗ್ರಾಮದ ಹೂವಿನಕೊಪ್ಪಳ ಸುಮುಖ ನಿಲಯದ ಹರೀಶ್ಚಂದ್ರ ಎಂಬವರ ಪತ್ನಿ ಲೀಲಾವತಿ(೪೭) ಎಂಬವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ೭೯/೨೦೨೬ರಂತೆ ಎಫ್ಐಆರ್ ದಾಖಲಾಗಿದೆ. ದೂರುದಾರ ಲೀಲಾವತಿ ಅವರ ಗಂಡ ಸೌತಡ್ಕ ದೇವಸ್ಥಾನದ ಬಳಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದು ಸದ್ರಿ ಸ್ಟಾಲ್ನ ಲೈನ್ನಲ್ಲಿಯೇ ವ್ಯಾಪಾರ ಮಾಡಿಕೊಂಡಿರುವ ರಾಘವ ಭಂಡಾರಿ ಎಂಬವರು ಅ.೧೮ರಂದು ಬೆಳಿಗ್ಗೆ ೭ ಗಂಟೆಯಿಂದ ೦೭-೪೫ ಗಂಟೆಯ ಮಧ್ಯದ ಅವಧಿಯಲ್ಲಿ ಲೀಲಾವತಿಯವರ ಗಂಡ ವ್ಯಾಪಾರ ಮಾಡುತ್ತಿರುವ ಅಂಗಡಿಗೆ ಅಕ್ರಮವಾಗಿ ಪ್ರವೇಶಿಸಿ ಹೂ ಹಾಗೂ ಹಣ್ಣು ಕಾಯಿಗಳನ್ನು ಹೊರಗೆ ಬಿಸಾಡಿ ನಷ್ಟ ಉಂಟು ಮಾಡಿದ್ದಾರೆ. ಇದನ್ನು ಲೀಲಾವತಿ ಅವರು ಪ್ರಶ್ನಿಸಿದಾಗ ಆರೋಪಿ ರಾಘವ ಭಂಡಾರಿ ಅವರು ಲೀಲಾವತಿ ಅವರನ್ನುzಶಿಸಿ ಅವಾಚ್ಯ ಶಬ್ದಗಳಿಂದ ಬೈದು ಲೀಲಾವತಿ ಅವರ ತಲೆ ಕೂದಲಿಗೆ ಕೈ ಹಾಕಿ ಹಿಡಿದು ಎಳೆದು ಹೊರಗೆ ನೂಕಿದ್ದಾರೆ. ಈ ವೇಳೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತಿ ಹಾಗೂ ನಿಶ್ಮಿತಾ ಎಂಬವರು ತಡೆಯಲು ಬಂದಾಗ ಅವರಿಗೂ ರಾಘವ ಭಂಡಾರಿ ಅವಾಚ್ಯ ಶಬ್ದಗಳಿಂದ ಬೈದು ನಿಶ್ಮಿತಾ ಅವರ ಮೈಗೆ ಕೈ ಹಾಕಿ ಬಟ್ಟೆಯನ್ನು ಎಳೆದಾಡಿದಾಡಿದ್ದು ಆಕೆ ಪ್ರತಿರೋಧ ತೋರಿದಾಗ ರಾಡ್ನಿಂದ ಆಕೆಯ ಭುಜಕ್ಕೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಭಾರತಿ ಎಂಬಾಕೆಗೂ ಕೈಯಿಂದ ಹಲ್ಲೆ ಮಾಡಿ ಮಾನಕ್ಕೆ ಕುಂದುಂಟು ಮಾಡಲಾಗಿದೆ. ಅದೇ ಸಮಯ ಲಿಂಗಪ್ಪ, ಕಿಶೋರ್, ಚೇತನ್ ಎಂಬವರು ರಾಘವ ಭಂಡಾರಿಯವರ ಜೊತೆ ಸೇರಿಕೊಂಡು ಲೀಲಾವತಿ ಅವರನ್ನುzಶಿಸಿ ಅವಾಚ್ಯ ಶಬ್ದಗಳಿಂದ ಬೈದು ಮುಂದಕ್ಕೆ ಈ ಅಂಗಡಿಯಲ್ಲಿ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಈ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಕೊಕ್ಕಡದ ರಾಘವ ಭಂಡಾರಿ, ಲಿಂಗಪ್ಪ, ಕಿಶೋರ್ ಮತ್ತು ಚೇತನ್ ಅವರನ್ನು ಆರೋಪಿಗಳು ಎಂದು ಎಫ್ಆರ್ನಲ್ಲಿ ಹೆಸರಿಲಾಗಿದ್ದು ದೂರುದಾರೆ ಲೀಲಾವತಿ, ನಿಡ್ಲೆ ಗ್ರಾಮದ ನಿಶ್ಮಿತಾ ಮತ್ತು ಶಿಶಿಲ ಗ್ರಾಮದ ಭಾರತಿ ಅವರನ್ನು ನೊಂದವರು ಎಂದು ಹೆಸರಿಸಲಾಗಿದೆ. ಆರೋಪಿಗಳ ವಿರುದ್ಧ ಬಿಎನ್ಎಸ್ ೩೨೯(೪), ೩೨೪(೪), ೩೫೨,೭೪, ೧೧೮(೧), ೧೧೫(೨), ೩೫೧(೨)೩(೫)ರನ್ವಯ ಕೇಸು ದಾಖಲಿಸಲಾಗಿದೆ. ಠಾಣಾಧಿಕಾರಿ ಕರ್ತವ್ಯದಲ್ಲಿದ್ದ ಹೆಡ್ಕಾನ್ಸ್ಟೇಬಲ್ ದೇವರಾಜ್ ಅವರು ಎರಡೂ ಪ್ರಕರಣಗಳನ್ನು ದಾಖಲಿಸಿದ್ದು ಬೆಳ್ತಂಗಡಿ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದ್ದಾರೆ. ಈ ಘಟನೆ ನಡೆದ ವೇಳೆ ಚಿತ್ರೀಕರಿಸಲಾಗಿರುವ ವೀಡಿಯೋ ತುಣುಕುಗಳು ಭಾರೀ ವೈರಲ್ ಆಗಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.


ನಿಶ್ಮಿತಾರಿಗೆ ಯುವವಾಹಿನಿ ಘಟಕ ಬೆಂಬಲ: ಸೌತಡ್ಕದಲ್ಲಿ ಅಂಗಡಿ ಕೋಣೆಗಳ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಸಂಘರ್ಷದಲ್ಲಿ ಗಾಯಗೊಂಡಿರುವ ನಿಡ್ಲೆ ಗ್ರಾಮದ ಬೂಡುಜಾಲು ಸೂರ್ಲ ಮನೆಯ ನಿಶ್ಮಿತಾ ಅವರಿಗೆ ಯುವವಾಹಿನಿ ಬೆಳ್ತಂಗಡಿ ಘಟಕ ಬೆಂಬಲ ಸೂಚಿಸಿದೆ. ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಿಶ್ಮಿತಾ ಅವರನ್ನು ಭೇಟಿಯಾದ ಯುವವಾಹಿನಿ ಘಟಕದ ಪದಾಧಿಕಾರಿಗಳು ಆರೋಗ್ಯ ವಿಚಾರಿಸಿದರಲ್ಲದೆ ಅವರ ನ್ಯಾಯಪರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಯುವವಾಹಿನಿ ಬೆಳ್ತಂಗಡಿ ಘಟಕದ ಗೌರವ ಸಲಹೆಗಾರ ರಮಾನಂದ ಸಾಲಿಯಾನ್ ಮುಂಡೂರು, ಯುವವಾಹಿನಿ ಕೇಂದ್ರ ಸಮಿತಿಯ ಆರೋಗ್ಯ ಘಟಕದ ನಿರ್ದೇಶಕ ಹಾಗೂ ಘಟಕದ ಸ್ಥಾಪಕ ಅಧ್ಯಕ್ಷ ರಾಕೇಶ್ ಮುಡುಕೋಡಿ, ಬೆಳ್ತಂಗಡಿ ಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘದ ನಿರ್ದೇಶಕ ಗುರುರಾಜ್ ಗುರಿಪಳ್ಳ ಹಾಗೂ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವಿನ್ ಬಳಂಜ ಉಪಸ್ಥಿತರಿದ್ದರು.
ಅಕ್ರಮ ಕಟ್ಟಡ ನಿರ್ಮಾಣ ಆರೋಪ: ಕಾನೂನು ಕ್ರಮಕ್ಕೆ ಆಗ್ರಹ-ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯರಿಂದ ದೂರು: ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿ ಬಾಡಿಗೆ ನೀಡುತ್ತಿರುವ ಹಾಗೂ ಸಾರ್ವಜನಿಕ ಶಾಂತಿಭಂಗ ಉಂಟು ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರು ಅ.೧೯ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕರ್ನಾಟಕ ಸರಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸೌತಡ್ಕ ಕ್ಷೇತ್ರದ ಎದುರು ೧೯೯೩ರಲ್ಲಿ ದೇವಸ್ಥಾನಕ್ಕಾಗಿ ಕಾಯ್ದಿರಿಸಲಾಗಿದ್ದ ಸರ್ವೇ ನಂಬರ್ ೨೧೫/೧ರ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ೨೦೧೨ರಿಂದ ೨೦೧೫ರವರೆಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದ ಕೃಷ್ಣ ಭಟ್ ಅವರು ತಮ್ಮ ಅಧಿಕಾರಾವಧಿಯಲ್ಲಿ ದೇವಸ್ಥಾನದ ಜಾಗವನ್ನು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ನ ಜಾಗದೊಂದಿಗೆ ಸೇರಿಸಿಕೊಂಡು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಪೂರ್ವಾನುಮತಿ ಅಥವಾ ಅಧಿಕೃತ ದಾಖಲೆಗಳಿಲ್ಲದೆ ಈ ಜಾಗದಲ್ಲಿ ಐದು ಅಂಗಡಿ ಕೋಣೆಗಳನ್ನು ನಿರ್ಮಿಸಿದ್ದಾರೆ. ಈ ಅಂಗಡಿ ಕೋಣೆಗಳನ್ನು ಇತರರಿಗೆ ಬಾಡಿಗೆ ನೀಡಿ ಅಕ್ರಮವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಅಂಗಡಿಗಳನ್ನು ಬಾಡಿಗೆಗೆ ಪಡೆದವರಲ್ಲಿ ಕೆಲವರು ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದು ದೇವಸ್ಥಾನದ ಆವರಣದಲ್ಲಿ ಪ್ರತಿನಿತ್ಯ ಜಗಳವಾಡುವ ಮೂಲಕ ಸಾರ್ವಜನಿಕ ಶಾಂತಿಭಂಗಕ್ಕೆ ಕಾರಣರಾಗುತ್ತಿದ್ದಾರೆ. ಇಂತಹ ಘಟನೆಗಳು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುವುದರಿಂದ ಕ್ಷೇತ್ರ ಹಾಗೂ ಆಡಳಿತ ಸಮಿತಿಯ ಗೌರವಕ್ಕೆ ಧಕ್ಕೆಯಾಗುತ್ತಿದೆ. ಆದ್ದರಿಂದ ದೇವಸ್ಥಾನದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಿಸಿ ವ್ಯವಹಾರ ನಡೆಸುತ್ತಿರುವವರ ಹಾಗೂ ಶಾಂತಿಭಂಗ ಉಂಟು ಮಾಡುತ್ತಿರುವವರ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುಬ್ರಹ್ಮಣ್ಯ ಶಬರಾಯ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಕಾನೂನು ಕ್ರಮ ಕೈಗೊಳ್ಳಲಾಗುವುದು-ಪೊಲೀಸ್ ಪ್ರಕಟಣೆ: ಸುಬ್ರಹ್ಮಣ್ಯ ಶಬರಾಯ ಎಂಬವರು ಕೊಕ್ಕಡ ಗ್ರಾಮದ ಸೌತಡ್ಕ ಎಂಬಲ್ಲಿರುವ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿದ್ದು ಸೌತಡ್ಕ ದೇವಸ್ಥಾನದ ಸಮೀಪದಲ್ಲಿ ದೇವಸ್ಥಾನಕ್ಕಾಗಿ ಕಾಯ್ದಿರಿಸಲಾಗಿರುವ ಜಮೀನಿನಲ್ಲಿ ಈ ಹಿಂದೆ ಸದ್ರಿ ದೇವಸ್ಥಾನದ ಪದಾಧಿಕಾರಿಯಾಗಿದ್ದ ಕೊಕ್ಕಡ ನಿವಾಸಿ ಕೃಷ್ಣ ಭಟ್ ಎಂಬವರು ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯದೇ ಅಧಿಕೃತ ದಾಖಲೆಗಳಿಲ್ಲದೇ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿ ಬಾಡಿಗೆಗೆ ನೀಡಿದ್ದು ಸದ್ರಿ ಕಟ್ಟಡದಲ್ಲಿ ಅಂಗಡಿಯನ್ನು ಬಾಡಿಗೆಗೆ ಪಡೆದುಕೊಂಡವರಿಂದಾಗಿ ಸಾರ್ವಜನಿಕ ಶಾಂತಿ ಭಂಗವುಂಟಾಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಿನಾಂಕ: ೧೯.೧೦.೨೦೨೬ರಂದು ೩೫೪/೨೦೨೬ರಂತೆ ದೂರರ್ಜಿ ದಾಖಲಾಗಿದ್ದು ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.








