






ಬೆಳ್ತಂಗಡಿ: ನಾವೂರು ಗ್ರಾಮದ ನಾವೂರು ಪೇಟೆಯ ಸ್ವಾತಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಪ್ರದೀಪ್ ಆಟಿಕುಕ್ಕೆ ಅವರ ಆರೋಗ್ಯ ಕ್ಲಿನಿಕ್ಗೆ ಅ.೬ರಂದು ತಡರಾತ್ರಿ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣಾ ಪೊಲೀಸರು ನಾವೂರು ನಿವಾಸಿಗಳಾದ ರವಿ ಪೂಜಾರಿ(೩೧), ಸುರೇಶ್ ಪಿ.ಎನ್. ಇಂಚರ(೪೪) ಮತ್ತು ದಿನೇಶ್ ಪ್ರಭು(೫೧) ಎಂಬವರನ್ನು ಅ.೧೪ರಂದು ಬಂಧಿಸಿದ್ದಾರೆ. ಸುರೇಶ್ ಪಿ.ಎನ್. ಇಂಚರ ಮತ್ತು ದಿನೇಶ್ ಪ್ರಭು ಅವರನ್ನು ಪುತ್ತೂರು ತಾಲೂಕಿನ ಕೌಡಿಚ್ಚಾರ್ನಲ್ಲಿ ಬಂಧಿಸಿದ ಬಳಿಕ ತೀವ್ರ ವಿಚಾರಣೆಗೊಳಪಡಿಸಿ ಅ.೧೫ರಂದು ಸಂಜೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೆಳ್ತಂಗಡಿಯಲ್ಲಿ ಬಂಧಿಸಲ್ಪಟ್ಟ ಪ್ರಮುಖ ಆರೋಪಿ ರವಿ ಪೂಜಾರಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಪೊಲೀಸ್ ಕಸ್ಟಡಿಯ ಅವಧಿ ಮುಕ್ತಾಯವಾದ ಬಳಿಕ ರವಿ ಪೂಜಾರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸವಾಲಾಗಿ ಸ್ವೀಕರಿಸಿದ್ದ ಪೊಲೀಸರು: ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳ ಪತ್ತೆ ಕಾರ್ಯಾಚರಣೆಯನ್ನು ಪೊಲೀಸರು ಸವಾಲಾಗಿ ಸ್ವೀಕರಿಸಿದ್ದರು. ನಡ ಗ್ರಾಮದ ಮಾನಸ ಮನೆಯ ಎ. ಮಾಧವ ಭಟ್ ಅವರ ಪುತ್ರ ಡಾ. ಪ್ರದೀಪ್ ಎ.(೫೧) ಅವರು ಸುಮಾರು ೨೭ ವರ್ಷಗಳಿಂದ ನಾವೂರಿನ ಶೇಖರ ಪೂಜಾರಿಯವರ ಮಾಲಕತ್ವದ ಸ್ವಾತಿ ಬಿಲ್ಡಿಂಗ್ನಲ್ಲಿ ನಡೆಸುತ್ತಿರುವ ಆರೋಗ್ಯ ಕ್ಲಿನಿಕ್ಗೆ ಅ.೬ರಂದು ರಾತ್ರಿ ಯಾರೋ ಕಿಡಿಗೇಡಿಗಳು ದುರುದ್ದೇಶದಿಂದ ಯಾವುದೋ ದಹನ ಶೀಲ ದ್ರವವನ್ನು ಉಪಯೋಗಿಸಿ ಕಿಟಕಿಯ ಮೂಲಕ ಒಳ ಸುರಿದು ಬೆಂಕಿ ಹಾಕಿ ಸುಟ್ಟಿದ್ದಾರೆ. ಸುಟ್ಟು ಹೋದ ಔಷಧಿ ಹಾಗೂ ವೈದ್ಯಕೀಯ ಸಲಕರಣೆಗಳ ಅಂದಾಜು ಮೌಲ್ಯ ೨ರಿಂದ ೩ ಲಕ್ಷ ರೂ ಆಗಬಹುದು ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.೭ರಂದು ಅಪರಾಧ ಕ್ರಮಾಂಕ ೧೧೨/೨೦೨೬ರಂತೆ ಬಿಎನ್ಎಸ್ ೩೨೬(ಎಫ್), ೩೨೬(ಜಿ) ಮತ್ತು ೩೨೪(೫)ರಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೃತ್ಯ ಎಸಗಿದ ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದರು. ಘಟನೆ ನಡೆದ ಬಳಿಕ ಹಲವು ಮಾಹಿತಿಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಹಲವು ಶಂಕಿತರಿಗೆ ಬಲೆ ಬೀಸಿದ್ದರು. ಸಂಶಯದ ಮೇರೆಗೆ ರವಿ ಪೂಜಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ.
ಸಂಚಲನ ಸೃಷ್ಟಿಸಿತ್ತು: ಸಾಮಾಜಿಕವಾಗಿ ತೊಡಗಿಸಿಕೊಂಡಿರುವ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ್ದ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿತ್ತು. ಅ.೮ರಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ನಾವೂರು ಇದರ ವತಿಯಿಂದ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಿಸಿದ್ದ ಗ್ರಾಮಸ್ಥರು ಬಳಿಕ ಖಂಡನಾ ಸಭೆ ನಡೆಸಿ ಒಕ್ಕೊರಲಿನಿಂದ ಘಟನೆಯನ್ನು ಖಂಡಿಸಿದ್ದರು. ನಂತರ ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿದ್ದ ಗ್ರಾಮಸ್ಥರು ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದರು. ಶಾಸಕ ಹರೀಶ್ ಪೂಂಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಹಿತ ವಿವಿಧ ರಾಜಕೀಯ ಪಕ್ಷಗಳು ನಾಯಕರು, ಸಂಘ ಸಂಸ್ಥೆಗಳ ಪ್ರಮುಖರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರಲ್ಲದೆ ಕೃತ್ಯವನ್ನು ಖಂಡಿಸಿದ್ದರು. ಸರ್ವ ಸಮುದಾಯದವರೂ ಘಟನೆಯನ್ನು ಖಂಡಿಸಿದ್ದರಲ್ಲದೆ ತಪ್ಪಿತಸ್ಥರ ಬಂಧನಕ್ಕೆ ಬಲವಾಗಿ ಒತ್ತಾಯಿಸಿದ್ದರು. ದ.ಕ. ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಬೂಮರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದರು. ಡಿವೈಎಸ್ಪಿ ರೋಹಿಣಿ ಸಿ.ಕೆ. ಮತ್ತು ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನೇತೃತ್ವದಲ್ಲಿ ತನಿಖೆ ತೀವ್ರಗೊಳಿಸಿದ್ದ ಎಸ್ಐಗಳಾದ ಆನಂದ್ ಹಾಗೂ ಸಿಕಂದರ್ ಪಾಷಾ ಅವರ ತಂಡ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದೆ.
ಡಾ. ಪ್ರದೀಪ್ ಅವರನ್ನು ನಾವೂರಿನಿಂದ ಓಡಿಸುವ ಉದ್ದೇಶ ಹೊಂದಿದ್ದ ಆರೋಪಿಗಳು: ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚುವ ಮೂಲಕ ಡಾ. ಪ್ರದೀಪ್ ಅವರನ್ನು ನಾವೂರಿನಿಂದ ಓಡಿಸುವ ಉzಶ ಹೊಂದಲಾಗಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ನಡ ಗ್ರಾಮದ ಮಂಜೊಟ್ಟಿಯಲ್ಲಿರುವ ಅಂಗಡಿಯೊಂದರಿಂದ ರವಿ ಪೂಜಾರಿ ಸಿಗರೇಟ್ ಲೈಟರ್ ಖರೀದಿಸಿದ್ದ. ಬಳಿಕ ಸುರೇಶ್ ಇಂಚರನ ಮಾಲಕತ್ವದ ಕಟ್ಟಡಕ್ಕೆ ತೆರಳಿ ಅಲ್ಲಿ ನಿಲ್ಲಿಸಲಾಗಿದ್ದ ಸುರೇಶ್ನ ಟಾಟಾ ಏಸ್ ವಾಹನದಿಂದ ಡೀಸೆಲ್ ತೆಗೆದು ಪ್ಲಾಸ್ಟಿಕ್ನಲ್ಲಿ ತುಂಬಿಸಿಕೊಂಡಿದ್ದ. ನಂತರ ನಡೆದುಕೊಂಡೇ ಕ್ಲಿನಿಕ್ಗೆ ತೆರಳಿ ಡೀಸೆಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದ. ಕೃತ್ಯ ಎಸಗಿದ ಬಳಿಕ ಸಮೀಪದ ಭಜನಾ ಮಂದಿರದ ಬಳಿ ಹಾದು ಹೋಗುವ ಕಾಲುವೆಯ ಬಳಿಗೆ ತೆರಳಿ ಅಲ್ಲಿಂದ ರವಿ ಪೂಜಾರಿ ತನ್ನ ಮನೆಗೆ ಹೋಗಿದ್ದ. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳದಲ್ಲಿ ಮಹಜರು ನಡೆಸುವುದರ ಜತೆಗೆ ಪೊಲೀಸರು ರವಿ ಕುಮಾರ್ನ ಮನೆಗೂ ತೆರಳಿ ಸ್ಥಳ ಮಹಜರು ನಡೆಸಿದ್ದಾರೆ.
ನಾಲ್ಕು ದಿನಗಳ ಹಿಂದೆಯೇ ಸಂಚು ರೂಪಿಸಿದ್ದರು: ವೈದ್ಯ ಡಾ. ಪ್ರದೀಪ್ ಅವರು ಸಮಾಜವನ್ನು ವಿಭಜಿಸುತ್ತಿದ್ದಾರೆ. ಹಾಗಾಗಿ ಅವರನ್ನು ನಾವೂರಿನಿಂದ ಓಡಿಸಬೇಕು ಎಂದು ದಿನೇಶ್ ಪ್ರಭು ಸಂಚು ರೂಪಿಸಿದ್ದ. ಕೃತ್ಯ ನಡೆಯುವ ನಾಲ್ಕು ದಿನಗಳ ಮುಂಚೆ ಸುರೇಶ್ ಇಂಚರನ ಕಟ್ಟಡದಲ್ಲಿ ರವಿ ಪೂಜಾರಿ, ಸುರೇಶ್ ಇಂಚರ ಮತ್ತು ದಿನೇಶ್ ಪ್ರಭು ಒಟ್ಟು ಸೇರಿ ಸಂಚು ರೂಪಿಸಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ಕೃತ್ಯದ ವೇಳೆ ರವಿ ಪೂಜಾರಿಗೆ ನೆನಪಾದ ಹಿಂದಿನ ಚಿಕಿತ್ಸೆ: ಡಾ. ಪ್ರದೀಪ್ ಅವರ ಮೇಲೆ ದ್ವೇಷ ಹೊಂದಿದ್ದ ಸುರೇಶ್ ಇಂಚರ ಮತ್ತು ದಿನೇಶ್ ಪ್ರಭು ಅವರು ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಂಚಲು ಸಂಚು ರೂಪಿಸಿದ್ದರು. ಇದಕ್ಕೆ ರವಿ ಪೂಜಾರಿಯನ್ನು ಬಳಕೆ ಮಾಡಿಕೊಳ್ಳಲು ಅವರು ನಿರ್ಧರಿಸಿದ್ದರು. ರವಿ ಪೂಜಾರಿ ಮದ್ಯ ಸೇವಿಸುವಂತೆ ಮಾಡಿ ಆತ ಡಾ. ಪ್ರದೀಪ್ರ ಕ್ಲಿನಿಕ್ಗೆ ಡೀಸೆಲ್ ಸುರಿಯುವಂತೆ ಸುರೇಶ್ ಇಂಚರ ಮತ್ತು ದಿನೇಶ್ ಪ್ರಭು ಪ್ರೇರೇಪಿಸಿದ್ದರು. ಸುರೇಶ್ ಮತ್ತು ದಿನೇಶ್ರ ಮಾತು ಕೇಳಿದ ರವಿ ಪೂಜಾರಿ ಡೀಸೆಲ್ ಹಿಡಿದುಕೊಂಡು ಆರೋಗ್ಯ ಕ್ಲಿನಿಕ್ಗೆ ತೆರಳಿದ್ದ. ಈ ವೇಳೆ ಆತನಿಗೆ ತನಗೆ ಡಾ. ಪ್ರದೀಪ್ ಅವರು ಈ ಹಿಂದೆ ಚಿಕಿತ್ಸೆ ನೀಡಿರುವುದು ನೆನಪಾಗಿದೆ. ತನಗೆ ಕಾಲುನೋವು ಕಾಣಿಸಿಕೊಂಡಿದ್ದಾಗ ಡಾ. ಪ್ರದೀಪ್ ಅವರ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದಿದ್ದೆ. ಅಂತಹ ವೈದ್ಯರ ಕ್ಲಿನಿಕ್ಗೆ ಹೇಗೆ ಬೆಂಕಿ ಹಚ್ಚಲಿ ಎಂದು ಆತ ಮನಸ್ಸಿನಲ್ಲಿಯೇ ಚಡಪಡಿಸಿದ್ದ. ಅಲ್ಲದೆ ಹೇಗೂ ತಾನು ಒಪ್ಪಿಕೊಂಡಂತೆ ಕ್ಲಿನಿಕ್ಗೆ ಬೆಂಕಿ ಹಚ್ಚುತ್ತೇನೆ. ಆದರ ಪಾಪ ಪ್ರದೀಪ್ ಡಾಕ್ಟರ್ಗೆ ಜಾಸ್ತಿ ನಷ್ಟ ಆಗಬಾರದು ಎಂದು ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕಿದ ರವಿ ಪೂಜಾರಿ ಕ್ಲಿನಿಕ್ಗೆ ಹೆಚ್ಚಿನ ಹಾನಿಯಾಗದಂತೆ ನೋಡಿಕೊಳ್ಳಲು ನಿರ್ಧರಿಸಿದ್ದ.
ಅದರಂತೆ ಯಂತ್ರಗಳಿಗೆ ಹಾನಿಯಾಗದ ರೀತಿಯಲ್ಲಿ ಡೀಸೆಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ತೆರಳಿದ್ದ ಎಂಬುದು ತನಿಖೆಯ ವೇಳೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಬಂಧಿತರ ಪೈಕಿ ರವಿ ಪೂಜಾರಿ ಕೂಲಿ ಕಾರ್ಮಿಕನಾಗಿದ್ದು ಸುರೇಶ್ ಇಂಚರ ಕೃಷಿಕರಾಗಿದ್ದಾರೆ.ಜತೆಗೆ ವೆಲ್ಡಿಂಗ್ ಅಂಗಡಿ ಹೊಂದಿದ್ದಾರೆ. ದಿನೇಶ್ ಪ್ರಭು ವಿದ್ಯುತ್ ಕಂಬ ಅಳವಡಿಸುವ ವೃತ್ತಿಯವರಾಗಿದ್ದಾರೆ.
ಸಂಚಿನ ಹಿಂದೆ ರಕ್ಷಿತ್ ಜೈನ್ ಪಾತ್ರದ ಸಂಶಯ-ದೂರು: ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣದ ಸಂಚಿನ ಹಿಂದೆ ರಕ್ಷಿತ್ ಜೈನ್ ಎಂಬವರ ಪಾತ್ರವೂ ಇದೆ ಎಂದು ಆರೋಪಿಸಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಪ್ರಕರಣ ಸಂಬಂಧ ಈಗಾಗಲೇ ರವಿ ಪೂಜಾರಿ, ಸುರೇಶ್ ಇಂಚರ ಮತ್ತು ದಿನೇಶ್ ಪ್ರಭು ಎಂಬವರನ್ನು ಬಂಧಿಸಲಾಗಿದೆ. ಆಗಸ್ಟ್ ೨೮ರಂದು ನಾವೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಘಟನೆಯ ಮುಂದುವರಿದ ಭಾಗವಾಗಿ ಈ ಕೃತ್ಯ ಎಸಗಲಾಗಿದೆ. ಆಗಸ್ಟ್ ೨೮ರಂದು ರಕ್ಷಿತ್ ಜೈನ್ ಸೂಚನೆಯಂತೆ ಬೆಂಕಿ ಹಚ್ಚಿರುವ ಪ್ರಕರಣದ ಆರೋಪಿಗಳು ದೇವಸ್ಥಾನದೊಳಗೆ ಬಂದು ಮಹಿಳೆಯರನ್ನು ಮತ್ತು ಸಾರ್ವಜನಿಕರನ್ನು ನಿಂದಿಸಿದ್ದರು. ಈ ಬಗ್ಗೆ ಈಗಾಗಲೇ ದೂರು ದಾಖಲಾಗಿದೆ. ಕ್ಲಿನಿಕ್ಗೆ ಬೆಂಕಿ ಹಾಕಿದ ಪ್ರಕರಣದ ಸಂಚಿನ ಹಿಂದೆಯೂ ರಕ್ಷಿತ್ ಜೈನ್ ಇದ್ದು ಇವರನ್ನು ತನಿಖೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾವೂರು ಗ್ರಾಮದ ಪಲ್ಕೆ ರಸ್ತೆಯ ವಿಶ್ವಕೃಪಾ ಮನೆಯ ಬಾಲಕೃಷ್ಣ ಬಿ., ಕಣಾಲು ಮನೆಯ ಕೇಶವ, ಸ್ವಾತಿ ನಿಲಯದ ಸ್ವರೂಪ್, ನಾಗಾಜೆ ಮನೆಯ ಪ್ರದೀಪ್ ಮತ್ತು ಒಡಿಕ್ಕಾರು ದರ್ಖಾಸು ಮನೆಯ ಮಹೇಶ್ ಎಂಬವರು ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಆನಂದ ಅವರಿಗೆ ದೂರು ನೀಡಿದ್ದಾರೆ


ಕಾಂಗ್ರೆಸ್ ನಾಯಕರ ವಿರುದ್ಧ ಅಪಪ್ರಚಾರ-ಯುವ ಕಾಂಗ್ರೆಸ್ನಿಂದ ದೂರು: ನಾವೂರಿನಲ್ಲಿ ನಡೆದ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಅಪಪ್ರಚಾರ ನಡೆಸುತ್ತಿರುವವ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಯುವ ಕಾಂಗ್ರೆಸ್ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ನಾವೂರಿನಲ್ಲಿ ನಡೆದ ಅಹಿತಕರ ಘಟನೆಯನ್ನು ಬಂಡವಾಳ ಮಾಡಿಕೊಂಡು ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ವರ್ಚಸ್ಸಿಗೆ ಮಸಿ ಬಳಿಯಲು ವ್ಯವಸ್ಥಿತ ಸಂಚು ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಮತ್ತು ರಕ್ಷಿತ್ ಶಿವರಾಂ ಅವರಿಗೆ ಸಂಬಂಧ ಕಲ್ಪಿಸಿ ಸಾಮಾಜಿಕ ಜಾಲತಾಣವಾದ ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ಗಳಲ್ಲಿ ನಿರಂತರವಾಗಿ ಸುಳ್ಳು ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹರಡಲಾಗುತ್ತಿದೆ. ಶ್ರೀ ಹರೀಶ್ ಪೂಂಜಾ ಅಭಿಮಾನಿ ಬಳಗ ಕರ್ನಾಟಕ ಎಂಬ ಹೆಸರಿನ ಫೇಸ್ಬುಕ್ ಪೇಜ್ ಹಾಗೂ ಇದೇ ಬಳಗದ ಹೆಸರಿನಲ್ಲಿರುವ ವಿವಿಧ ವಾಟ್ಸಾಪ್ ಗ್ರೂಪ್ಗಳು ಮತ್ತು ಇನ್ಸ್ಟಾಗ್ರಾಮ್ ಹ್ಯಾಂಡಲ್ಗಳ ಮೂಲಕ ಹಾಗೂ ಬ್ರೇಕಿಂಗ್ ನ್ಯೂಸ್ ವಾಟ್ಸಪ್ ಗ್ರೂಪ್ಗಳಲ್ಲಿ ನಾವೂರು ಪ್ರಕರಣಕ್ಕೂ ಕಾಂಗ್ರೆಸ್ ನಾಯಕರಿಗೂ ಇಲ್ಲಸಲ್ಲದ ಲಿಂಕ್ ಕಲ್ಪಿಸಿ ಉzಶಪೂರ್ವಕ ಅಪಪ್ರಚಾರ ನಡೆಸಲಾಗುತ್ತಿದೆ. ಯಾವುದೇ ಸಾಕ್ಷಿ, ಆಧಾರಗಳಿಲ್ಲದೆ ಫೇಸ್ಬುಕ್, ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಮ್ನಂತಹ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ವಿರುದ್ಧ ನಿರಂತರವಾಗಿ ಸುಳ್ಳು ಪೋಸ್ಟ್ ಹರಡಲಾಗುತ್ತಿದೆ. ಇದು ಶಾಸಕ ಹರೀಶ್ ಪೂಂಜ ಅವರ ಅಭಿಮಾನಿ ಬಳಗದ ಹೆಸರಿನಲ್ಲಿ ನಡೆಯುತ್ತಿರುವ ಅಗ್ಗದ ಹಾಗೂ ಕೀಳು ಮಟ್ಟದ ರಾಜಕೀಯವಾಗಿದೆ ಎಂದು ತಿಳಿಸಿರುವ ಯುವ ಕಾಂಗ್ರೆಸ್ ಮುಖಂಡರು ಉzಶಪೂರ್ವಕವಾಗಿ ಕಾಂಗ್ರೆಸ್ ಪಕ್ಷದ ತೇಜೋವಧೆಗೆ ಯತ್ನಿಸುತ್ತಿರುವ ಹಾಗೂ ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಮೂಲಕ ಸುಳ್ಳು ಸುದ್ದಿ ಹರಡುತ್ತಿರುವ ಶ್ರೀ ಹರೀಶ್ ಪೂಂಜಾ ಅಭಿಮಾನಿ ಬಳಗ ಕರ್ನಾಟಕ ಎಂಬ ಹೆಸರಿನ ಎಲ್ಲ ಸೋಶಿಯಲ್ ಮೀಡಿಯಾ ಅಕೌಂಟ್ಗಳನ್ನು ತಕ್ಷಣವೇ ನಿಬಂಧಿಸಬೇಕು. ಜತೆಗೆ ಇವುಗಳನ್ನು ನಿರ್ವಹಿಸುತ್ತಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೈಬರ್ಕ್ರೈಮ್ ಕಾಯ್ದೆಯಡಿ ಸೂಕ್ತ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಪೊಲೀಸ್ ಠಾಣೆಗೆ ಮನವಿ ಸಲ್ಲಿಸುವ ವೇಳೆ ಬ್ಲಾಕ್ ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ನವೀನ್ ಕುಮಾರ್ ಗೌಡ, ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ ಲೋಬೋ, ಯುವ ಕಾಂಗ್ರೆಸ್ ಮುಖಂಡರಾದ ಗಣೇಶ್ ಕಣಿಯೂರು ಮತ್ತು ಅರುಣ್ ಪಿಂಟೊ ಉಪಸ್ಥಿತರಿದ್ದರು.
ತನಿಖೆಯಲ್ಲಿ ಗ್ರಾಮಸ್ಥರಿಗೆ ಅನುಮಾನ-ನೈಜ ಆರೋಪಿಗಳ ಬಂಧನಕ್ಕೆ ಆಗ್ರಹ, ಬೇಡಿಕೆ ಈಡೇರದಿದ್ದಲ್ಲಿ ನಾವೂರು ಗ್ರಾಮಸ್ಥರು ಒಟ್ಟಾಗಿ ಬೃಹತ್ ಪ್ರತಿಭಟನೆ-ಎಚ್ಚರಿಕೆ: ನಾವೂರು ಗ್ರಾಮದ ಜನಪ್ರಿಯ ವೈದ್ಯ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ಗೆ ಅ.೬ರಂದು ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ಕುರಿತು ಅನುಮಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ನೈಜ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
ಅ.೨೧ರಂದು ಶ್ರೀ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾವೂರು ಗೋಪಾಲಕೃಷ್ಣ ದೇವಾಲಯದ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲ್ಯಾನ್ ಅವರು ನಾವೂರು ಗ್ರಾಮದ ಸಮಸ್ತ ಶಾಂತಿಪ್ರಿಯ ಜನರ ಪರವಾಗಿ ಈ ಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸುತ್ತೇವೆ ಎಂದು ಹೇಳಿದರು.
ನಾವೂರು ಗ್ರಾಮದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಯಾವುದೇ ಕಾರ್ಯಕ್ರಮಗಳು ನೆಮ್ಮದಿಯಿಂದ ನಡೆಯುತ್ತಿತ್ತು. ಆದರೆ ಒಂದು ವರ್ಷದಿಂದ ಅಹಿತಕರ ಘಟನೆಗಳು ನಡೆದುಕೊಂಡು ಬರುತ್ತಿವೆ. ದೇವಸ್ಥಾನದಲ್ಲಿ ವರಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ನಡೆದ ಘಟನೆಗೆ ಪೂರಕವಾಗಿ ಈ ಘಟನೆ ನಡೆದಿದೆ. ಮುಂದೆ ಇಂತಹ ಕೃತ್ಯ ನಡೆಯಬಾರದು. ನಾವೂರು ಜನರು ನೆಮ್ಮದಿಯಿಂದ ಬದುಕುವಂತೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಪೊಲೀಸ್ ಕಾರ್ಯಕ್ಕೆ ಶ್ಲಾಘನೆ: ಪ್ರಕರಣ ನಡೆದ ತಕ್ಷಣ ಸ್ಪಂದಿಸಿದ ಬೆಳ್ತಂಗಡಿ ಪೊಲೀಸ್ ಇಲಾಖೆ ಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಶ್ಲಾಘನೀಯ ಕಾರ್ಯ. ಇದಕ್ಕಾಗಿ ನಾವು ಗ್ರಾಮಸ್ಥರ ಪರವಾಗಿ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ಯಾವ ಉದ್ದೇಶಕ್ಕೆ ಈ ಕೃತ್ಯ ನಡೆಯಿತು ಎಂಬ ಸತ್ಯಾಸತ್ಯತೆಯನ್ನು ಸಮಾಜದ ಮುಂದೆ ತರಬೇಕು. ಯಾರದೇ ಒತ್ತಡಕ್ಕೆ ಮಣಿಯದೆ ನೈಜ ಆರೋಪಿಯನ್ನು ಬಂಧಿಸಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತನಿಖಾ ತಂಡದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದ ಅವರು ಈ ಪ್ರಕರಣದ ಹಿಂದೆ ಕೇವಲ ಬೆಂಕಿ ಹಚ್ಚಿದ ಮೂವರು ಮಾತ್ರವಲ್ಲ. ಅವರಿಗೆ ಪೂರಕವಾಗಿ ಪ್ರೇರಣೆ ನೀಡಿದ ಇನ್ನಷ್ಟು ಪ್ರಭಾವಿ ವ್ಯಕ್ತಿಗಳು ಇರಬಹುದು ಎಂಬ ಬಲವಾದ ಶಂಕೆ ಗ್ರಾಮಸ್ಥರಲ್ಲಿ ವ್ಯಕ್ತವಾಗಿದೆ. ಬೆಂಕಿ ಕೊಟ್ಟವರ ಹಿಂದಿರುವ ಸೂತ್ರಧಾರನನ್ನು ಪೊಲೀಸ್ ಇಲಾಖೆಯೇ ರಕ್ಷಣೆ ಮಾಡುತ್ತಿದೆಯೇ ಎಂಬ ಅನುಮಾನ ನಮ್ಮಲ್ಲಿ ಮೂಡಿದೆ. ಪ್ರಾಥಮಿಕ ಹಂತದಲ್ಲೇ ಈ ಪ್ರಕರಣವನ್ನು ಹಳ್ಳಕ್ಕೆ ತಳ್ಳುವ ಹುನ್ನಾರ ನಡೆಯುತ್ತಿದೆ ಎಂಬ ಆಕ್ರೋಶ ಗ್ರಾಮಸ್ಥರಲ್ಲಿದೆ ಎಂದು ಹೇಳಿದರು.
ಕೂಲಂಕುಶ ತನಿಖೆ ನಡೆಸಬೇಕು: ಆಧುನಿಕ ತಂತ್ರಜ್ಞಾನದ ಮೂಲಕ ಇನ್ನಷ್ಟು ಕೂಲಂಕಷವಾಗಿ ತನಿಖೆ ನಡೆಸಬೇಕು. ಬಂಧಿತರ ಮೊಬೈಲ್ ಕರೆಗಳ ಮಾಹಿತಿ, ಟವರ್ ಲೊಕೇಶನ್ ಪರಿಶೀಲಿಸಿದರೆ ಪ್ರಮುಖ ಸೂತ್ರಧಾರನ ಪತ್ತೆ ಸುಲಭವಾಗಲಿದೆ. ಕೂಡಲೇ ಬಂಧಿತರ ಮೊಬೈಲ್ ಕರೆಗಳ ವಿವರ ಪಡೆದು ತನಿಖೆಗೆ ಒಳಪಡಿಸಬೇಕು. ಹಲವಾರು ವರ್ಷಗಳಿಂದ ಜಾತಿ, ಧರ್ಮ, ಭೇದ ಮರೆತು ಎಲ್ಲರೂ ಶಾಂತಿ, ಸಾಮರಸ್ಯದಿಂದ ನೆಮ್ಮದಿಯಾಗಿ ಬದುಕುತ್ತಿದ್ದ ನಾವೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಹಲವಾರು ಬೆಳವಣಿಗೆಗಳು ಗ್ರಾಮದ ಜನರ ನೆಮ್ಮದಿಯನ್ನು ಕೆಡಿಸಿವೆ. ಮುಂದಿನ ದಿನಗಳಲ್ಲಿ ಶಾಂತಿ ಕದಡದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಮ್ಮ ಆಗ್ರಹ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವೂರು ಗ್ರಾಮಸ್ಥರು ಒಟ್ಟಾಗಿ ಬೃಹತ್ ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನಾವೂರು ಗೋಪಾಲಕೃಷ್ಣ ದೇವಾಲಯದ ಟ್ರಸ್ಟಿ ತನುಜಾ ಶೇಖರ್, ನಡ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರವೀಣ್ ವಿ.ಜಿ, ನಾವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ಗೌಡ ನಾವೂರು, ಕೊಡಮಣಿತ್ತಾಯ ದೈವಸ್ಥಾನದ ಅಧ್ಯಕ್ಷ ಗಣೇಶ್ ಕಾಣಲು ಮತ್ತು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ ಉಪಸ್ಥಿತರಿದ್ದರು.









