






ಬೆಳ್ತಂಗಡಿ: ಸೌಜನ್ಯ ಪ್ರಕರಣದ ಮರು ತನಿಖೆಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಹೇಳಿಕೆ ನೀಡಿ ತನಿಖೆಯ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದು ಆರೋಪಿಸಿ ವಕೀಲ ಎನ್.ಪಿ. ಅಮೃತೇಶ್ ಅವರ ವಿರುದ್ಧ ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ಅ.೧೭ರಂದು ದೂರು ನೀಡಿದ್ದಾರೆ.


ದೂರಿನ ವಿವರ: ಅ.೧೩ರಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಕೀಲ ಅಮೃತೇಶ್ ಅವರು ಸೌಜನ್ಯ ಅವರ ಪೋಷಕರು ಪ್ರಕರಣದಿಂದ ಹಣ ಸಂಪಾದಿಸಿದ್ದಾರೆ ಎಂದು ಹೇಳಿದ್ದಾರೆ. ಎಸ್ಐಟಿ ತನಿಖೆ ಯಶಸ್ವಿಯಾಗುವ ಸಾಧ್ಯತೆ ಕಡಿಮೆ ಎಂಬರ್ಥದ ಹೇಳಿಕೆಗಳನ್ನು ನೀಡಿದ್ದಾರೆ. ಇಂತಹ ಹೇಳಿಕೆಗಳು ನಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ತರುವುದರ ಜತೆಗೆ ತನಿಖೆಗೆ ಸಹಕರಿಸಬಹುದಾದ ಸಂಭಾವ್ಯ ಸಾಕ್ಷಿಗಳ ಮೇಲೆ ಒತ್ತಡ ಉಂಟು ಮಾಡುವ ಸಾಧ್ಯತೆಯಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ಸೆ.೨೪ರಂದು ಮರು ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿದ್ದು ಅವರಿಂದ ತನಿಖೆ ಆರಂಭವಾಗಿದೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಇಂತಹ ಹೇಳಿಕೆಗಳು ತನಿಖೆಯ ನಿಷ್ಪಕ್ಷಪಾತತೆ ಮತ್ತು ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರಬಹುದು ಎಂದು ದೂರಿನಲ್ಲಿ ಒತ್ತಾಯಿಸಿರುವ ಕುಸುಮಾವತಿ ಅವರು ಸುಪ್ರೀಂಕೋರ್ಟ್ಗೆ ಸಲ್ಲಿಸಲಾದ ಹೆಚ್ಚುವರಿ ಅಫಿಡವಿಟ್ನಲ್ಲಿ ಹೆಸರಿಸಲಾದ ಎಂಟು ಸಂಭಾವ್ಯ ಸಾಕ್ಷಿಗಳು ಸೇರಿದಂತೆ ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು. ಸಾಕ್ಷಿದಾರರ ರಕ್ಷಣಾ ಯೋಜನೆಯಡಿ ಅಪಾಯದ ಮೌಲ್ಯಮಾಪನ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಧರ್ಮಸ್ಥಳ ಠಾಣೆಯಲ್ಲಿ ದೂರು ಸ್ವೀಕಾರ: ಅ.೧೭ರಂದು ರಾತ್ರಿ ೯ ಗಂಟೆಗೆ ಕುಸುಮಾವತಿ ಎಂಬವರು ಠಾಣೆಗೆ ಬಂದು ವಿಜಯ್ ವಾಸು ಪೂಜಾರಿ ಬಿ.ಎ. ಎಲ್ಎಲ್ಬಿ ವಕೀಲರು ಐಜಿಪಿ ಮತ್ತು ಅಧ್ಯಕ್ಷರು ವಿಶೇಷ ತನಿಖಾ ತಂಡರವರ ವಿಳಾಸಕ್ಕೆ ಬರೆದಿರುವ ದೂರನ್ನು ನೀಡಿದ್ದಾರೆ. ಈ ದೂರನ್ನು ಠಾಣಾ ಫಿಟಿಷನ್ ನಂಬರ್ ೩೫೧/೨೦೨೬ರಂತೆ ಸ್ವೀಕರಿಸಿಕೊಂಡು ಸದ್ರಿ ದೂರನ್ನು ಅವರು ಮಾನ್ಯ ಐಜಿಪಿ ಅಧ್ಯಕ್ಷರು ವಿಶೇಷ ತನಿಖಾ ತಂಡರವರ ವಿಳಾಸಕ್ಕೆ ಬರೆದಿರುವುದರಿಂದ ಅದನ್ನು ಠಾಣೆಯ ವಿಳಾಸಕ್ಕೆ ಬರೆದು ನೀಡಿ ಎಂದು ಕುಸುಮಾವತಿಯವರಲ್ಲಿ ತಿಳಿಸಿದಾಗ ಅವರು ಅದೇ ದೂರಿನ ಮೇಲೆ ಧರ್ಮಸ್ಥಳ ಸೇಷನ್ ಹೆಡ್ ಆಫೀಸರ್ ಎಂದು ಬರೆದು ಅದಕ್ಕೆ ದಿನಾಂಕವನ್ನು ನಮೂದಿಸಿದ ಕಡೆ ಮತ್ತು ಅಲ್ಲಲ್ಲಿ ಪೆನ್ನಿಂದ ತಿದ್ದುಪಡಿ ಮಾಡಿ ಕೊನೆಯಲ್ಲಿ ವಿಜಯ್ ವಾಸು ಪೂಜಾರಿ ಅವರು ಸಹಿ ಮಾಡಿದ ಪಕ್ಕದಲ್ಲೇ ಕುಸುಮಾವತಿ ಅವರು ಸಹಿ ಮಾಡಿ ನೀಡಿರುತ್ತಾರೆ. ಈ ದೂರಿನ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಠಾಣಾಧಿಕಾರಿ ಹಿಂಬರಹ ನೀಡಿದ್ದಾರೆ.








