






ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಜನಪ್ರಿಯ ವೈದ್ಯ ಡಾ. ಪ್ರದೀಪ್ ನಾವೂರು ಇವರ ಆರೋಗ್ಯ ಕ್ಲಿನಿಕ್ ಗೆ ಅ.6 ರಂದು ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವೂರು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ತನಿಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅ.21 ರಂದು ಶ್ರೀ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾವೂರು ಗೋಪಾಲಕೃಷ್ಣ ದೇವಾಲಯದ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲ್ಯಾನ್, ನಾವೂರು ಗ್ರಾಮದ ಸಮಸ್ತ ಶಾಂತಿಪ್ರಿಯ ಜನರ ಪರವಾಗಿ ಈ ಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥರು, ನಾವೂರು ಗ್ರಾಮದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಯಾವುದೇ ಕಾರ್ಯಕ್ರಮಗಳು ನೆಮ್ಮದಿಯಿಂದ ನಡೆಯುತ್ತಿತ್ತು. ಆದರೆ ಒಂದು ವರ್ಷದಿಂದ ಅಹಿತಕರ ಘಟನೆಗಳು ನಡೆದುಕೊಂಡು ಬರುತ್ತಿವೆ. ದೇವಸ್ಥಾನದಲ್ಲಿ ವರಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ನಡೆದ ಘಟನೆಗೆ ಪೂರಕವಾಗಿ ಈ ಘಟನೆ ನಡೆದಿದೆ. ಮುಂದೆ ಇಂತಹ ಕೃತ್ಯ ನಡೆಯಬಾರದು, ನಾವೂರು ಜನರು ನೆಮ್ಮದಿಯಿಂದ ಬದುಕುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಪೊಲೀಸ್ ಕಾರ್ಯಕ್ಕೆ ಶ್ಲಾಘನೆ, ಪ್ರಕರಣ ನಡೆದ ತಕ್ಷಣ ಸ್ಪಂದಿಸಿದ ಬೆಳ್ತಂಗಡಿ ಪೊಲೀಸ್ ಇಲಾಖೆ ಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಶ್ಲಾಘನೀಯ ಕಾರ್ಯ. ಇದಕ್ಕಾಗಿ ನಾವು ಗ್ರಾಮಸ್ಥರ ಪರವಾಗಿ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.ಆದರೆ ಯಾವ ಉದ್ದೇಶಕ್ಕೆ ಈ ಕೃತ್ಯ ನಡೆಯಿತು ಎಂಬ ಸತ್ಯಾಸತ್ಯತೆಯನ್ನು ಸಮಾಜದ ಮುಂದೆ ತರಬೇಕು. ಯಾರದೇ ಒತ್ತಡಕ್ಕೆ ಮಣಿಯದೆ ನೈಜ ಆರೋಪಿಯನ್ನು ಬಂಧಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತನಿಖಾ ತಂಡದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ತಿಳಿಸಿದರು.


ಈ ಪ್ರಕರಣದ ಹಿಂದೆ ಕೇವಲ ಬೆಂಕಿ ಹಚ್ಚಿದ ಮೂವರು ಮಾತ್ರವಲ್ಲ, ಅವರಿಗೆ ಪೂರಕವಾಗಿ ಪ್ರೇರಣೆ ನೀಡಿದ ಇನ್ನಷ್ಟು ಪ್ರಭಾವಿ ವ್ಯಕ್ತಿಗಳು ಇರಬಹುದು ಎಂಬ ಬಲವಾದ ಶಂಕೆ ಗ್ರಾಮಸ್ಥರಲ್ಲಿ ವ್ಯಕ್ತವಾಗಿದೆ.ಬೆಂಕಿ ಕೊಟ್ಟವರನ್ನು ಹಿಡಿದು, ಹಿಂದಿರುವ ಸೂತ್ರಧಾರನನ್ನು ಪೊಲೀಸ್ ಇಲಾಖೆಯೇ ರಕ್ಷಣೆ ಮಾಡುತ್ತಿದೆಯೇ ಎಂಬ ಅನುಮಾನ ನಮ್ಮಲ್ಲಿ ಮೂಡಿದೆ. ಪ್ರಾಥಮಿಕ ಹಂತದಲ್ಲೇ ಈ ಪ್ರಕರಣವನ್ನು ಹಳ್ಳಕ್ಕೆ ತಳ್ಳುವ ಹುನ್ನಾರ ನಡೆಯುತ್ತಿದೆ ಎಂಬ ಆಕ್ರೋಶ ಗ್ರಾಮಸ್ಥರಲ್ಲಿದೆ.
ಆಧುನಿಕ ತಂತ್ರಜ್ಞಾನದ ಮೂಲಕ ಇನ್ನಷ್ಟು ಕೂಲಂಕಷವಾಗಿ ತನಿಖೆ ನಡೆಸಬೇಕು. ಬಂಧಿತರ ಮೊಬೈಲ್ ಕರೆಗಳ ಮಾಹಿತಿ, ಟವರ್ ಲೊಕೇಶನ್ ಪರಿಶೀಲಿಸಿದರೆ ಪ್ರಮುಖ ಸೂತ್ರಧಾರನ ಪತ್ತೆ ಸುಲಭವಾಗಲಿದೆ. ಕೂಡಲೇ ಬಂಧಿತರ ಮೊಬೈಲ್ ಕರೆಗಳ ವಿವರ ಪಡೆದು ತನಿಖೆಗೆ ಒಳಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹಲವಾರು ವರ್ಷಗಳಿಂದ ಜಾತಿ, ಧರ್ಮ, ಭೇದ ಮರೆತು ಎಲ್ಲರೂ ಶಾಂತಿ, ಸಾಮರಸ್ಯದಿಂದ ನೆಮ್ಮದಿಯಾಗಿ ಬದುಕುತ್ತಿದ್ದ ನಾವೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಹಲವಾರು ಬೆಳವಣಿಗೆಗಳು ಗ್ರಾಮದ ಜನರ ನೆಮ್ಮದಿಯನ್ನು ಕೆಡಿಸಿವೆ. ಮುಂದಿನ ದಿನಗಳಲ್ಲಿ ಶಾಂತಿ ಕದಡದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು.ನಮ್ಮ ಆಗ್ರಹ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವೂರು ಗ್ರಾಮಸ್ಥರು ಒಟ್ಟಾಗಿ ಬೃಹತ್ ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಾವೂರು ಗೋಪಾಲಕೃಷ್ಣ ದೇವಾಲಯದ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲ್ಯಾನ್, ಟ್ರಸ್ಟಿ ತನುಜ್ ಶೇಖರ್, ನಡ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರವೀಣ್ ವಿ.ಜಿ, ನಾವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ಗೌಡ ನಾವೂರು, ಕೊಡಮಣಿತ್ತಾಯ ದೈವಸ್ಥಾನದ ಅಧ್ಯಕ್ಷ ಗಣೇಶ್ ಕಾಣಲು, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ದರ್ಣಪ್ಪ ಮೂಲ್ಯ ಉಪಸ್ಥಿತರಿದ್ದರು.









