ಮೈಸೂರು ದಸರಾ ವೀಕ್ಷಿಸಿ ವಾಪಸಾಗುತ್ತಿದ್ದಾಗ ಅಪಘಾತ: ಕಳೆಂಜದ ಯುವಕ ದುರ್ಮರಣ

0

ಬೆಳ್ತಂಗಡಿ: ಮೈಸೂರು ದಸರಾ ವೀಕ್ಷಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ಬೈಕ್ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕೊಳಂಬೆಯ ಯುವಕ ಮೃತಪಟ್ಟ ಘಟನೆ ಅ. 18ರಂದು ಮಧ್ಯರಾತ್ರಿ ನಡೆದಿದೆ.

ಕೊಳಂಬೆ ನಿವಾಸಿ ಶಾಂತಪ್ಪ ಗೌಡ ಮತ್ತು ಲೀಲಾ ದಂಪತಿಯ ಪುತ್ರ ಮನೋಹರ (23) ಮೃತ ಯುವಕ. ಸಹಸವಾರರಾಗಿದ್ದ ಕೊಯ್ಯೂರಿನ ಬಿರ್ಕೆ ನಿವಾಸಿ ದೀಕ್ಷಿತ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಮನೋಹರ ಹಾಗೂ ದೀಕ್ಷಿತ್ ಅ. 18ರಂದು ಮೈಸೂರು ದಸರಾ ವೀಕ್ಷಿಸಲು ಬೈಕ್‌ನಲ್ಲಿ ತೆರಳಿದ್ದರು. ರಾತ್ರಿ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಸಿದ್ಧಾರ್ಥನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಟ್ರಾಫಿಕ್ ಸಿಗ್ನಲ್ ನಲ್ಲಿ ಬೈಕ್’ಗೆ ಸ್ಕೂಟಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದಲ್ಲಿ ಮನೋಹರ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಮನೋಹರ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ದೀಕ್ಷಿತ್ ಗಾಯಗೊಂಡಿದ್ದಾರೆ.

ಮೃತದೇಹವನ್ನು ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಅಪಘಾತದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.ಮೃತರು ತಂದೆ ಶಾಂತಪ್ಪ ಗೌಡ, ತಾಯಿ ಲೀಲಾ ಹಾಗೂ ಸಹೋದರ ವಿಕ್ರಮ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here