ಸೌಜನ್ಯಾ ಪ್ರಕರಣ: ಎಸ್‌ಐಟಿ ಕಚೇರಿಯಲ್ಲಿ ಅಧಿಕಾರಿಗಳ ಸಭೆಎಸಿಪಿ ಮನೋಜ್ ಸಹಾಯಕ ತನಿಖಾಧಿಕಾರಿಯಾಗಿ ನೇಮಕ- ಮಣ್ಣಸಂಕಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಲು ನಿರ್ಧಾರ?

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿಯಾಗಿದ್ದು ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಕು. ಸೌಜನ್ಯಾ(೧೭) ಅವರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರು ತನಿಖೆಗಾಗಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಾಜ್ಯ ಸರಕಾರ ರಚನೆ ಮಾಡಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಮಂಗಳೂರಿನಲ್ಲಿರುವ ದ.ಕ. ಜಿಲ್ಲಾಧಿಕಾರಿಯವರ ಹಳೆ ಕಚೇರಿಯಲ್ಲಿ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ತನಿಖೆಯ ಮುಂದಿನ ಪ್ರಕ್ರಿಯೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಪೊಲೀಸ್ ಇಲಾಖೆ, ಸಿಐಡಿ ಮತ್ತು ಸಿಬಿಐಯಿಂದ ನಡೆದಿರುವ ತನಿಖೆ, ನ್ಯಾಯಾಲಯದ ತೀರ್ಮಾನ, ಎಸ್‌ಐಟಿ ರಚನೆಗೆ ಆದೇಶ ನೀಡುವ ವೇಳೆ ಸುಪ್ರೀಂಕೋರ್ಟ್ ಹೊರಡಿಸಿರುವ ಮಾರ್ಗಸೂಚಿ ಇತ್ಯಾದಿ ವಿಚಾರಗಳ ಕುರಿತು ಅಧಿಕಾರಿಗಳು ಸುಧೀರ್ಘ ಚರ್ಚೆ ಮಾಡಿದ್ದಾರೆ. ಮುಂದೆ ರೂಪಿಸಬೇಕಾದ ಕಾರ್ಯತಂತ್ರಗಳ ಕುರಿತು ರೂಪುರೇಷೆ ಸಿದ್ಧಪಡಿಸಲಾಗಿದ್ದು ಈಗಾಗಲೇ ತನಿಖೆಯ ಸಂಪೂರ್ಣ ವಿವರ ನೀಡಲು ಸಿಐಡಿ ಮತ್ತು ಸಿಬಿಐಗೆ ಪತ್ರ ಬರೆದಿರುವ ಎಸ್‌ಐಟಿಯವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ೨೦೧೨ರ ಅಕ್ಟೋಬರ್ ೧೦ರಂದು ಸೌಜನ್ಯ ಅವರ ಮೃತದೇಹ ಪತ್ತೆಯಾದ ಧರ್ಮಸ್ಥಳ ಗ್ರಾಮದ ಮಣ್ಣಸಂಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಎಸ್‌ಐಟಿ ಸಭೆಯಲ್ಲಿ ನಿರ್ಧರಿಸಲಾಗಿದ್ದು ಅಧಿಕಾರಿಗಳ ತಂಡ ಶೀಘ್ರದಲ್ಲಿ ಆಗಮಿಸಲಿದೆ.
ಜತೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಬಳಿ ಈ ಹಿಂದೆ ಬುರುಡೆ ಪ್ರಕರಣದ ತನಿಖೆಗಾಗಿ ತೆರೆಯಲಾಗಿದ್ದ ಎಸ್‌ಐಟಿ ಠಾಣೆಯಲ್ಲಿ ತಮ್ಮ ಕಚೇರಿ ಆರಂಭಿಸುವ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ ಮತ್ತು ಮರುತನಿಖೆ ನಡೆಸುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಅವರಿಂದಲೂ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಎಸ್‌ಐಟಿ ಮುಖ್ಯಸ್ಥರಾಗಿರುವ ಐಜಿಪಿ ಶಶಿಕುಮಾರ್ ಎನ್, ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ರಾಜ್ಯ ಗುಪ್ತಚರ ವಿಭಾಗದ ಎಸ್ಪಿ ನಿಶಾ ಜೇಮ್ಸ್ ಮತ್ತು ತನಿಖಾಧಿಕಾರಿಯಾಗಿ ನೇಮಕಗೊಂಡಿರುವ ಸಿಐಡಿಯ ಎಸ್ಪಿ ಲೋಕೇಶ್ ಜಗಲಸಾರ್ ಅವರು ಹಲವು ಸುತ್ತಿನ ಮಾತುಕತೆ ನಡೆಸಿದ್ದು ಸಹಾಯಕ ಅಧಿಕಾರಿಗಳಿಗೆ ವಿವಿಧ ಜವಾಬ್ದಾರಿ ಹಂಚಿದ್ದಾರೆ. ಜತೆಗೆ ಮಂಗಳೂರು ಸಿಸಿಬಿಯ ಎಸಿಪಿ ಮನೋಜ್ ಕುಮಾರ್ ಅವರನ್ನು ಸಹಾಯಕ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ವಿವಿಧ ಕೋನಗಳಲ್ಲಿ ಈಗಾಗಲೇ ತನಿಖೆ ಕೇಂದ್ರೀಕೃತವಾಗಿದ್ದು ಬೆಳ್ತಂಗಡಿಗೆ ಅಧಿಕೃತವಾಗಿ ಇನ್ನಷ್ಟೇ ಎಸ್‌ಐಟಿ ಪ್ರವೇಶವಾಗಬೇಕಿದೆ. ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಕರೆಸಿಕೊಳ್ಳುತ್ತಿರುವ ಬೆಂಗಳೂರು ಗ್ರಾಮಾಂತರದ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಅವರು ವಿಶೇಷ ತನಿಖಾ ತಂಡದಿಂದ ಈಗಾಗಲೇ ದೂರ ಸರಿದಿದ್ದಾರೆ.

LEAVE A REPLY

Please enter your comment!
Please enter your name here