






ಬೆಳ್ತಂಗಡಿ: ಶ್ರೀ ದೇವಿ ಮರಾಟಿ ಸಮಾಜಸೇವಾ ಸಂಘ (ರಿ.) ತಣ್ಣೀರುಪಂತ, ಶ್ರೀ ಮಹಮ್ಮಾಯಿ ಕಾಲಭೈರವ ದೇವಸ್ಥಾನ ಶ್ರೀ ದೇವಿನಗರ ತಣ್ಣೀರುಪಂತ ಇದರ ಆಡಳಿತ ಮಂಡಳಿ, ಭಜನಾ ಮಂಡಳಿ, ಮಹಿಳಾ ಮಂಡಳಿ, ಯುವಕ ಮಂಡಲ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಗುರುವಾಯನಕೆರೆ ಇವುಗಳ ಜಂಟಿ ಸಹಯೋಗದೊಂದಿಗೆ, ಭಜನಾ ಗುರುಗಳಾದ ನಾಗೇಶ್ ಬಿ. ನೆರಿಯ ಅವರ ಸಾರಥ್ಯದಲ್ಲಿ ವಲಯ ಮಟ್ಟದ ಭಜನಾ ಮಂಡಳಿಗಳ ಸದಸ್ಯರು ಮತ್ತು ಪೋಷಕರ 2 ದಿನಗಳ ವ್ಯಕ್ತಿತ್ವ ವಿಕಸನ ಶಿಬಿರ ಹಾಗೂ ಕ್ರೀಡಾಕೂಟವು ಅಕ್ಟೋಬರ್ 10 ಮತ್ತು 11ರಂದು ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಅಕ್ಟೋಬರ್ 10ರ ಶನಿವಾರದಂದು ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ 3 ವರ್ಷದ ಮಕ್ಕಳಿಂದ ಹಿಡಿದು 68 ವರ್ಷದ ಹಿರಿಯರವರೆಗಿನ ಭಜನಾ ಮಂಡಳಿಯ ಸದಸ್ಯರು ಹಾಗೂ ಪೋಷಕರಿಗಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಪ್ರತಿಯೊಬ್ಬರೂ ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದರು.
ಅಕ್ಟೋಬರ್ 11ರ ಭಾನುವಾರ ಬೆಳಿಗ್ಗೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಹಿರಿಯ ಸಂಪನ್ಮೂಲ ವ್ಯಕ್ತಿ, ಭಜನಾ ವಿದುಷಿ ಡಾ. ಉಷಾ ಹೆಬ್ಬಾರ್ ಅವರು ಭಜನಾ ತರಬೇತಿ ನಡೆಸಿಕೊಟ್ಟರು. ತದನಂತರ ಧಾರ್ಮಿಕ ವಾಗ್ಮಿ ದಾಮೋದರ್ ಶರ್ಮ ಅವರು ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಿ, ಹೆತ್ತವರ ಪಾದಪೂಜೆಯ ‘ಮಾತೃವಂದನೆ’ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನೆರವೇರಿಸಿದರು.


ಈ ಸಂದರ್ಭದಲ್ಲಿ ಡಾ. ಉಷಾ ಹೆಬ್ಬಾರ್ ಹಾಗೂ ದಾಮೋದರ್ ಶರ್ಮಾ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.ಹೆತ್ತವರು ಹಾಗೂ ಮಕ್ಕಳ ಒಗ್ಗೂಡುವಿಕೆಯ ‘ಮಾತೃಭೋಜನ’ ವ್ಯವಸ್ಥೆ ಮಾಡಲಾಗಿತ್ತು.ಸಮಾರೋಪ ಸಮಾರಂಭ ಮತ್ತು ಸನ್ಮಾನಮಧ್ಯಾಹ್ನ 2 ಗಂಟೆಗೆ ಜರುಗಿದ ಸಮಾರೋಪ ಸಮಾರಂಭದಲ್ಲಿ ಕ್ಷೇತ್ರದ ನಾಲ್ಕು ತಲೆಮಾರಿನ ಅಪರೂಪದ ಕುಟುಂಬವನ್ನು ಕ್ಷೇತ್ರದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಜೊತೆಗೆ ಭಜನಾ ಗುರುಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಮಹಾ ಪೋಷಕರನ್ನು ಗೌರವಿಸಲಾಯಿತು.ಪ್ರಮುಖರ ಉಪಸ್ಥಿತಿಕಾರ್ಯಕ್ರಮದಲ್ಲಿ ಶ್ರೀ ಮಹಮ್ಮಾಯಿ ಕ್ಷೇತ್ರದ ಆಡಳಿತ ಮುಕ್ತೇಸರರಾದ ಲಿಂಗಪ್ಪ ನಾಯ್ಕ್ ಕಿನ್ನಿಕೊಡಂಗೆ, ಆಡಳಿತ ಸಮಿತಿ ಅಧ್ಯಕ್ಷರಾದ ಗಂಗಯ್ಯ ನಾಯ್ಕ್ ಮಕರಜ್ಯೋತಿ ಕರ್ಪಾಡಿ, ಆಡಳಿತ ಸಮಿತಿಯ ಸರ್ವ ಸದಸ್ಯರು, ಕ್ಷೇತ್ರದ ಅರ್ಚಕರು ಹಾಗೂ ದರ್ಶನ ಪಾತ್ರಿಗಳಾದ ರೋಹಿತಾಕ್ಷ ನಾರ್ಯ ಮುರ, ಕ್ಷೇತ್ರದ ಹಿರಿಯರಾದ ಬಾಲಕೃಷ್ಣ ನಾಯ್ಕ್ ಕಲ್ಲಕಟ್ಟಣಿ, ಭಜನಾ ಮಂಡಳಿ, ಮಹಿಳಾ ಮಂಡಳಿ ಹಾಗೂ ಯುವಕ ಮಂಡಲದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಗುರುವಾಯನಕೆರೆ ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಜಗದೀಶ್ ಮೈರ, ಕಾರ್ಯದರ್ಶಿ ಸಂದೇಶ್ ಮದಡ್ಕ, ಮಹಾ ಪೋಷಕರಾದ ಸೌಮ್ಯ ಬೇಕಲ್ ಧರ್ಮಸ್ಥಳ ಹಾಗೂ ವಲಯದ 9 ಭಜನಾ ಮಂಡಳಿಗಳ ಸದಸ್ಯರು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಸಮನ್ವಯಾಧಿಕಾರಿ ಸಂತೋಷ್ ಅಲಿಯೂರು ಅವರು ಕಾರ್ಯಕ್ರಮವನ್ನು ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.









