






ಉಜಿರೆ: ಸ್ನೇಹಿತರೊಂದಿಗೆ ಸಮುದ್ರದಲ್ಲಿ ನೀರಾಟವಾಡಲು ತೆರಳಿ ಸಮುದ್ರಪಾಲಾಗಿದ್ದ ಉಜಿರೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿಯ ಶವ ಅ. 12ರಂದು ಶವ ಪತ್ತೆಯಾಗಿದೆ.
ಮೃತ ವಿದ್ಯಾರ್ಥಿಯನ್ನು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕಮ್ಮರಡಿ ನಿವಾಸಿ, ಉಜಿರೆ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿ ಶೋಭಿತ್ ಎಂ. ಗೌಡ (18) ಎಂದು ಗುರುತಿಸಲಾಗಿದೆ.


ಉಜಿರೆ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳು ಶನಿವಾರ ಕುತ್ತಾರಿನ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ, ಸಂಜೆ ಸೋಮೇಶ್ವರದ ಪೆರಿಬೈಲ್ ಬೀಚ್ ಗೆ ತೆರಳಿದ್ದರು. ಈ ವೇಳೆ ಶೋಭಿತ್ ಮತ್ತು ಆಕಾಶ್ ಎಂಬ ವಿದ್ಯಾರ್ಥಿಗಳು ಸಮುದ್ರದಲ್ಲಿ ನೀರಾಟಕ್ಕಿಳಿದಿದ್ದರು. ಅಲೆಗಳ ರಭಸಕ್ಕೆ ಇಬ್ಬರೂ ಸಮುದ್ರಪಾಲಾಗಿದ್ದು, ಈಜು ತಿಳಿದಿದ್ದ ಆಕಾಶ್ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸಮುದ್ರಪಾಲಾಗಿದ್ದ ಶೋಭಿತ್ ಗಾಗಿ ನಿನ್ನೆ ತಡರಾತ್ರಿವರೆಗೂ ಎಸ್.ಡಿ.ಆರ್.ಎಫ್, ಕರಾವಳಿ ಕಾವಲು ಪಡೆ, ಗೃಹರಕ್ಷಕ ದಳ ಮತ್ತು ಉಳ್ಳಾಲ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಬೆಳಿಗ್ಗೆ ಪೆರಿಬೈಲ್ ಸಮುದ್ರ ತೀರದಲ್ಲೇ ಶೋಭಿತ್ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









