







ಮತದಾರರ ಹೆಸರು ಡಿಲೀಟ್ ಮಾಡಲು ಸಲ್ಲಿಸಲಾದ ಅರ್ಜಿಗಳ ಸಮೇತ ದಾಖಲೆ ಮುಂದಿಟ್ಟ ರಕ್ಷಿತ್- ಪ್ರತಿ ಬೂತ್ ನಲ್ಲಿ ತಲಾ 45 ಮತ ಅಳಿಸಲು ಬಿಜೆಪಿಯಿಂದ ಬಿ.ಎಲ್.ಎ.ಗಳಿಗೆ ಗುರಿ ನಿಗದಿ- ಆರೋಪ
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತ ಸಮುದಾಯಗಳ ಮತಗಳನ್ನು ಅಕ್ರಮವಾಗಿ ತೆಗೆದು ಹಾಕಲು ಬಿಜೆಪಿ ವ್ಯವಸ್ಥಿತ ಟೂಲ್‌ಕಿಟ್ ಸಿದ್ಧಪಡಿಸಿ ಕಾರ್ಯರೂಪಕ್ಕೆ ಇಳಿದಿದೆ ಎಂದು ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಬಳಸುವ ಫಾರಂ-7 ಮುದ್ರಿತ ಅರ್ಜಿಗಳ ಸಮೇತ ದಾಖಲೆಗಳನ್ನು ಪ್ರದರ್ಶಿಸಿದರು.


ಅಲ್ಪಸಂಖ್ಯಾತರೇ ಟಾರ್ಗೆಟ್:ಬಹುತೇಕವಾಗಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡುವುದೇ ಬಿಜೆಪಿಯ ಷಡ್ಯಂತ್ರದ ಮುಖ್ಯ ಗುರಿ. ಇಶಾಕ್, ಇಮ್ತಿಯಾಜ್, ಜುಲೇಕಾ, ಫರ್ಜಾನಾ, ಲತೀಫ್, ಮಹಮ್ಮದ್, ಸಕೀನಾ, ನೂರ್‌ಜಹಾನ್, ಅಮೀನಾ, ಲೀನಾ ಆನ್, ಕರ್ನಲ್ ಜಾರ್ಜ್ ಮುಂತಾದ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ನೂರಾರು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಅರ್ಜಿ (ಫಾರಂ-7) ಸಲ್ಲಿಸಲಾಗಿದೆ ಎಂದು ಅದರ ಪಟ್ಟಿಯನ್ನೇ ರಕ್ಷಿತ್ ಶಿವರಾಂ ಮುಂದಿರಿಸಿದರು.ಪ್ರತಿ ಬೂತ್‌ಗೆ 45 ಮತಗಳ ಅಳಿಸುವ ಗುರಿ:ಉಜಿರೆಯ ನಾಲ್ಕೈದು ಬೂತ್‌ಗಳಲ್ಲಿ ಪ್ರತಿಯೊಂದು ಬೂತ್‌ನಲ್ಲೂ ತಲಾ 45 ಮತದಾರರ ಹೆಸರು ಅಳಿಸಲು ಅರ್ಜಿಗಳನ್ನು ತಂದುಕೊಡಲಾಗಿದೆ.
ಉಜಿರೆಯಲ್ಲಿ ಗೀತಾ ಮತ್ತು ಬಾಲಕೃಷ್ಣ ಶೆಟ್ಟಿ ಎಂಬ ಬಿಎಲ್‌ಎಗಳು ಈ ರೀತಿ ತಲಾ 45 ಮತದಾರರ ಹೆಸರುಗಳನ್ನು ತೆಗೆದುಹಾಕಲು ಸುಳ್ಳು ಡಿಕ್ಲರೇಷನ್ ನೀಡಿ ಅರ್ಜಿ ಸಲ್ಲಿಸಿದ್ದಾರೆ. ಒಟ್ಟು 9 ಬೂತ್‌ಗಳಲ್ಲಿ ಈ ರೀತಿಯ ಟೂಲ್‌ಕಿಟ್ ಬಳಸಲಾಗಿದೆ. ಈಗಾಗಲೇ ಈ ಮಾದರಿಯ ಸುಮಾರು 299 ಅರ್ಜಿಗಳು ಸಲ್ಲಿಕೆಯಾಗಿದ್ದು, ಅಧಿಕಾರಿಗಳು ಈ ಅರ್ಜಿಗಳನ್ನು ನೀಡಲು ಹಿಂಜರಿಯುತ್ತಿದ್ದಾರೆ. ಅಕ್ರಮ ನಡೆದಿರುವುದು ಸ್ಪಷ್ಟವಾಗಿದೆ ಎಂದರು.
ಕ್ರಿಮಿನಲ್ ದೂರು ದಾಖಲು:ಈ ಅಕ್ರಮದಲ್ಲಿ ಭಾಗಿಯಾಗಿರುವ ಬಿಎಲ್‌ಎಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಧಿಕೃತ ಕ್ರಿಮಿನಲ್ ದೂರು ದಾಖಲಿಸಲಾಗುವುದು. ಜತೆಗೆ ಈ ಕುರಿತು ಚುನಾವಣಾ ಆಯೋಗಕ್ಕೂ ಸಮಗ್ರ ದಾಖಲೆಗಳೊಂದಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ರಕ್ಷಿತ್ ಶಿವರಾಂ ಎಚ್ಚರಿಸಿದರು.









