ಪಟ್ರಮೆಯಲ್ಲಿ ಪ್ರಜಾಸೇವಾ ಆಂದೋಲನ ಸಭೆಜನರ ಸಮಸ್ಯೆಗಳ ಪರಿಹಾರಕ್ಕೆ ಸಭೆ ಆಶಾಕಿರಣವಾಗಲಿ: ಪದ್ಮನಾಭ ಸಾಲ್ಯಾನ್

0

ಬೆಳ್ತಂಗಡಿ: ರಾಜ್ಯ ಸರಕಾರದ ‘ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ’ ಘೋಷವಾಕ್ಯದಡಿ ಪಟ್ರಮೆ ಗ್ರಾಮ ಪಂಚಾಯಿತಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯು ಅ.3ರಂದು ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.

ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಮಾಲಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಮೂರು ಹೋಬಳಿ ಕೇಂದ್ರಗಳಲ್ಲಿ ಹಾಗೂ ಒಂದು ಗ್ರಾಮದಲ್ಲಿ ಈಗಾಗಲೇ ಸಭೆಗಳು ನಡೆದಿದ್ದು, ಎರಡನೇ ಗ್ರಾಮಮಟ್ಟದ ಸಭೆ ಪಟ್ರಮೆಯಲ್ಲಿ ನಡೆಯುತ್ತಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಜನರ ಬಳಿಗೆ ಬಂದು ಸಮಸ್ಯೆಗಳಿಗೆ ಕಿವಿಯಾಗುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಸಾರ್ವಜನಿಕರ ಅರ್ಜಿಗಳಿಗೆ 21 ದಿನಗಳೊಳಗೆ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಯನ್ನು ಸರಕಾರ ರೂಪಿಸಿದೆ. ಪಟ್ರಮೆ ಗ್ರಾಮದ ರಸ್ತೆಗಳ ದುರಸ್ತಿ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಈ ಸಭೆ ಆಶಾಕಿರಣವಾಗಲಿ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಜನರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ಪಟ್ರಮೆ ಗ್ರಾಮದಲ್ಲಿ 500ಕ್ಕೂ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದು, ಇದುವರೆಗೆ ಒಟ್ಟು ₹3 ಕೋಟಿ 32 ಲಕ್ಷ ನೆರವು ದೊರೆತಿದೆ ಎಂದು ತಿಳಿಸಿದರು. ಮುಂಬರುವ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ ನಡೆಯಲಿದ್ದು, ಗಣತಿಗೆ ಬರುವ ವೇಳೆ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಹಣ ಜಮೆಯಾಗದಿರುವವರ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದರು.ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸುವಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ. ಸಾರ್ವಜನಿಕರು ಅವರಿಗೆ ಸಹಕರಿಸಬೇಕು. ಇಂತಹ ಸಭೆಗಳ ಬಗ್ಗೆ ಸ್ಥಳೀಯ ಪತ್ರಿಕೆಗಳಲ್ಲಿ ಮುಂಚಿತವಾಗಿ ಮಾಹಿತಿ ಪ್ರಕಟಿಸಿ, ಹೆಚ್ಚಿನ ಜನರು ಭಾಗವಹಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ತಹಶೀಲ್ದಾರ್ ಎಸ್.ಎನ್. ನರಗುಂದ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ಎನ್., ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೊನ್ನಮ್ಮ ಸ್ವಾಗತಿಸಿದರು.

LEAVE A REPLY

Please enter your comment!
Please enter your name here