ಪುಂಜಾಲಕಟ್ಟೆ ಕೆ.ಪಿ.ಎಸ್. ಪ್ರೌಢಶಾಲೆಯಲ್ಲಿ ಸ್ಕೌಟ್-ಗೈಡ್ಸ್ ವಾರ್ಷಿಕ ಮಹಾಸಭೆ: ಮಾಲಾಡಿಯಲ್ಲಿ ಮುಂಬರುವ ರ‍್ಯಾಲಿ ಕುರಿತು ಚರ್ಚೆ​

0

ಪುಂಜಾಲಕಟ್ಟೆ: ಕೆ.ಪಿ.ಎಸ್. ಪ್ರೌಢಶಾಲೆ ಪುಂಜಾಲಕಟ್ಟೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರ ಅಧ್ಯಕ್ಷತೆಯಲ್ಲಿ 2025-2026ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ. 9 ರಂದು ನಡೆಯಿತು.​

ಕಾರ್ಯದರ್ಶಿ ಎಂ. ಶಾಂತಾರಾಮ ಪ್ರಭು ಅವರು ವಾರ್ಷಿಕ ವರದಿ ವಾಚಿಸಿದರು. ಸಭೆಯಲ್ಲಿ 2025-26ನೇ ಸಾಲಿನ ಲೆಕ್ಕಪತ್ರಗಳು ಹಾಗೂ 2026-27ನೇ ಸಾಲಿನ ವಾರ್ಷಿಕ ಕಾರ್ಯಕ್ರಮಗಳ ಯೋಜನೆ ಮತ್ತು ಮುಂಗಡಪತ್ರಕ್ಕೆ ಸರ್ವಾನುಮತದ ಮಂಜೂರಾತಿ ದೊರೆಯಿತು.

ಸಮಾಜ ಸೇವಾ ಕಾರ್ಯಕ್ಕಾಗಿ ‘ಯುನೈಟೆಡ್ ಅಮೇರಿಕಾ ಯೂನಿವರ್ಸಿಟಿ’ಯಿಂದ ಗೌರವ ಡಾಕ್ಟರೇಟ್‌ ಪಡೆದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತೀಮ್ ಕುಮಾರ್ ಕೆ.ಎಸ್. ಹಾಗೂ ಬೆಳ್ತಂಗಡಿ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪೆರಿಂಜೆ ಶಾಲೆಯ ಸ್ಕೌಟ್ ಅಧ್ಯಾಪಕ ರಾಜೇಶ್ ಅವರನ್ನು ಸಭೆಯಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.​

ರ‍್ಯಾಲಿ ಹಾಗೂ ಮುಂದಿನ ಯೋಜನೆಗಳ ರೂಪುರೇಷೆ ​ವಿಟ್ಲದಲ್ಲಿ ನಡೆಯಲಿರುವ 2026-27ನೇ ಸಾಲಿನ ಜಿಲ್ಲಾ ರ‍್ಯಾಲಿ ಹಾಗೂ ಮಾಲಾಡಿಯಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಯ ರ‍್ಯಾಲಿ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು. ಸಂಸ್ಥೆಯ ಅಧ್ಯಕ್ಷರು ಮಾತನಾಡಿ, ವಾರದಲ್ಲಿ ಕನಿಷ್ಠ ಒಂದು ದಿನವಾದರೂ ಶಾಲೆಗಳಲ್ಲಿ ದಳಗಳನ್ನು ನಡೆಸುವಂತೆ ಮತ್ತು ಮಾಲಾಡಿ ಶಾಲೆಯಲ್ಲಿ ನಡೆಯಲಿರುವ ರ‍್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವಂತೆ ಪ್ರಯತ್ನಿಸಬೇಕಾಗಿ ವಿನಂತಿಸಿದರು.

​ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ರುಕ್ಮಿಣಿ ಹಾಗೂ ಶ್ರೀಧರ ರಾವ್ ಪೇಜಾವರ, ಪೋಷಕ ಸದಸ್ಯ ರಾಜಶೇಖರ ಶೆಟ್ಟಿ, ಜಿಲ್ಲಾ ಸಹಾಯಕ ಆಯುಕ್ತರಾದ ಜೆರಾಲ್ಡ್ ಫೆರ್ನಾಂಡಿಸ್ ಮತ್ತು ದತ್ತಾತ್ರೇಯ ಗೊಲ್ಲಾ ಮೊದಲಾದವರು ಉಪಸ್ಥಿತರಿದ್ದರು.

ಕೊಕ್ರಾಡಿ ಪ್ರೌಢಶಾಲೆಯ ಗೈಡ್ ಕ್ಯಾಪ್ಟನ್ ಅಕ್ಕಮ್ಮ ಸ್ವಾಗತಿಸಿ, ಚಿದಾನಂದ ಧನ್ಯವಾದ ಸಮರ್ಪಿಸಿದರು. ಧರಣೇಂದ್ರ ಕೆ. ಕಾರ್ಯಕ್ರಮ ಸಂಯೋಜಿಸಿದರು.

LEAVE A REPLY

Please enter your comment!
Please enter your name here