






ಅರಸಿನಮಕ್ಕಿ: ಅರಸಿನಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 12 ವರ್ಷಗಳಿಂದ ಹಿರಿಯ ಶುಶ್ರೂಷಕಿಯಾಗಿ ರೋಗಿಗಳಿಗೆ ಪ್ರೀತಿ, ಕಾಳಜಿ ಹಾಗೂ ಮಮತೆಯಿಂದ ಸೇವೆ ಸಲ್ಲಿಸಿ, ಸೆ.30ರಂದು ನಿವೃತ್ತಿ ಹೊಂದಲಿರುವ ಲಿಸ್ಸಿ ಪಿ.ಕೆ. ಅವರನ್ನು ನವಶಕ್ತಿ ಆಟೋ ಚಾಲಕರ ಮತ್ತು ಮಾಲಕರ ಸಂಘ, ಅರಸಿನಮಕ್ಕಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸೆ.26ರಂದು ಅರಸಿನಮಕ್ಕಿ ಸರಕಾರಿ ಆಸ್ಪತ್ರೆ ಆವರಣದಲ್ಲಿ ಲಿಸ್ಸಿ ಪಿ.ಕೆ. ಅವರ ವತಿಯಿಂದ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ ಸಂಘದ ವತಿಯಿಂದ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಅರಸಿನಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 12 ವರ್ಷಗಳ ಕಾಲ ಹಿರಿಯ ಶುಶ್ರೂಷಕಿಯಾಗಿ ಸೇವೆ ಸಲ್ಲಿಸಿರುವ ಲಿಸ್ಸಿ ಅವರು ಅರಸಿನಮಕ್ಕಿ, ಹತ್ಯಡ್ಕ, ರೆಖ್ಯ, ಶಿಬಾಜೆ ಹಾಗೂ ಶಿಶಿಲ ಗ್ರಾಮಗಳ ಹಲವಾರು ಜನರಿಗೆ ಆರೋಗ್ಯ ಸೇವೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರೋಗಿಗಳೊಂದಿಗೆ ಆತ್ಮೀಯವಾಗಿ ನಡೆದುಕೊಂಡು, ಅವರ ನೋವು-ನಲಿವುಗಳಿಗೆ ಸ್ಪಂದಿಸುತ್ತಾ ಧೈರ್ಯ ಮತ್ತು ಸಾಂತ್ವನ ನೀಡುತ್ತಿದ್ದ ಅವರ ಸೇವೆಯನ್ನು ಗ್ರಾಮಸ್ಥರು ಸ್ಮರಿಸಿದರು.ಆರೋಗ್ಯ ಕೇಂದ್ರಕ್ಕೆ ಆಗಮಿಸುತ್ತಿದ್ದ ಪ್ರತಿಯೊಬ್ಬ ರೋಗಿಯನ್ನೂ ಪ್ರೀತಿ ಹಾಗೂ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ ಲಿಸ್ಸಿ ಅವರ ನಗುಮುಖದ ಸೇವೆ, ಸರಳತೆ ಹಾಗೂ ಮಾನವೀಯ ಗುಣಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದವು. ಅವರ ಸುದೀರ್ಘ ಹಾಗೂ ನಿಸ್ವಾರ್ಥ ಸೇವೆಯನ್ನು ಈ ಭಾಗದ ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸಂಘದ ಸದಸ್ಯರು ಹೇಳಿದರು.
ಈ ಸಂದರ್ಭದಲ್ಲಿ ನವಶಕ್ತಿ ಆಟೋ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್, ಕಾರ್ಯದರ್ಶಿ ರವಿ ಐಂಗುಡ, ವಿಶ್ವನಾಥ ಪೂಜಾರಿ, ಕೆ.ಕೆ. ರಾಜ, ರವಿ ಪಡ್ಡಾಯಿಬೆಟ್ಟು, ನವೀನ್ ರೈ, ಗುರು ಬಡೆಕ್ಕಲ, ಸುರೇಶ್ ಶೆಟ್ಟಿಗಾರ್, ಪರಮೇಶ್ವರ್ ಪೂಜಾರಿ, ರಾಕೇಶ್ ಶೆಟ್ಟಿ, ಉಪೇಂದ್ರ ಮುಂಡ್ರೆಲು, ರೋಷನ್ ಬಡೆಕ್ಕಲ, ಯು.ಸಿ. ಕುಲಾಲ್, ಅಶೋಕ್ ಕುಲಾಲ್, ವಿಠಲ ಗೌಡ ಉಡ್ಯೆರೆ, ದಯಾನಂದ ಉಡ್ಯೆರೆ, ಮೋಹನ್ ನಾಯ್ಕ, ಅಶೋಕ ಕೆ. ಗೌಡ ಹಾಗೂ ಶೀನ ಬೂಡುದಮಕ್ಕಿ ಉಪಸ್ಥಿತರಿದ್ದರು.ಲಿಸ್ಸಿ ಪಿ.ಕೆ. ಅವರ ನಿವೃತ್ತಿ ಜೀವನ ಸುಖ, ಶಾಂತಿ, ನೆಮ್ಮದಿ ಹಾಗೂ ಉತ್ತಮ ಆರೋಗ್ಯದಿಂದ ಕೂಡಿರಲಿ ಎಂದು ಸಂಘದ ಸದಸ್ಯರು ಶುಭ ಹಾರೈಸಿದರು.









