ಕಣಿಯೂರು ಗ್ರಾಮ ಪಂಚಾಯತ್ ಪ್ರಥಮ ಸುತ್ತಿನ ಗ್ರಾಮ ಸಭೆ ಸರ್ಕಾರ ನೀಡಿದ ಶಾಲಾ ಮಕ್ಕಳ ಚಪ್ಪಲಿ ಕಳಪೆ ಗುಣಮಟ್ಟ- ಗ್ರಾಮಸಭೆಯಲ್ಲಿ ಆಕ್ರೋಶ

0

ಕಣಿಯೂರು: ಸರ್ಕಾರಿ ಶಾಲೆಗೆ ಈ ಬಾರಿ ಸರಬರಾಜಾದ ಚಪ್ಪಲಿಯ ಗುಣಮಟ್ಟ ಸರಿಯಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಣಿಯೂರು ಗ್ರಾಮ ಸಭೆಯಲ್ಲಿ ನಡೆದಿದೆ.ಕಣಿಯೂರು ಗ್ರಾಮ  ಪಂಚಾಯತಿನ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ಸೆ.24 ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಆಡಳಿತಾಧಿಕಾರಿ ಡಾ.ಸಹನಾ ಕೆ.ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಎಇಇ ಜನಾರ್ಧನ್ ಗ್ರಾಮ ಸಭೆಯನ್ನು ಮುನ್ನಡೆಸಿದರು.ಈ ಬಾರಿ ಸರ್ಕಾರಿ ಶಾಲೆಗೆ ಬಂದಿರುವ ಚಪ್ಪಲಿಗಳ ಗುಣಮಟ್ಟ ಕಳಪೆಯಾಗಿದೆ. ಇದನ್ನು ನೋಡಿದರೆ ಎರಡು ಮೂರು ತಿಂಗಳಲ್ಲಿ ಹಾಳಾಗುವ ರೀತಿ ಇದೆ ಎಂದು ಗ್ರಾಮಸ್ಥರು ಶಿಕ್ಷಣ ಇಲಾಖೆ ಅಧಿಕಾರಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದರು.

ಕಳಪೆ ಚಪ್ಪಲಿ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಅಧಿಕಾರಿಗಳು, ಈ ಬಾರಿ ಸರ್ಕಾರವೇ ನೇರವಾಗಿ ಚಪ್ಪಲಿ ಸರಬರಾಜು ಮಾಡಿದೆ, ಈ ಬಗ್ಗೆ ದೂರು ಬಂದಿದೆ, ಪರಿಶೀಲಿಸುತ್ತೇವೆ ಎಂದರು.ಈ ಸಂದರ್ಭದಲ್ಲಿ ಗ್ರಾಮಸ್ಥರೊಬ್ಬರು, ಅಧಿಕಾರಿಗಳು “ಸರ್ಕಾರಿ ಶಾಲೆ ಉಳಿಸಿ, ಬೆಳೆಸಿ, ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ” ಎಂದು ಹೇಳುತ್ತೀರಿ, ಆದರೆ ಎಷ್ಟು ಸರ್ಕಾರಿ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗೆ ಹೋಗುತ್ತಾರೆ ಎಂದು ಪ್ರಶ್ನಿಸಿದರು.

ಕಣಿಯೂರು-ಉರುವಾಲು ಗ್ರಾಮ ಆಡಳಿತಾಧಿಕಾರಿ ಕಚೇರಿಯಲ್ಲಿ ಶೌಚಾಲಯ ಇಲ್ಲ-ಪಂಚಾಯತ್ ವ್ಯಾಪ್ತಿಯಲ್ಲಿ ಕಣಿಯೂರು ಹಾಗೂ ಉರುವಾಲು ಗ್ರಾಮ ಆಡಳಿತಾಧಿಕಾರಿ (VA) ಕಚೇರಿ ಇದ್ದು, ಅಲ್ಲಿ ಮೂಲಭೂತ ಶೌಚಾಲಯ ವ್ಯವಸ್ಥೆ ಇಲ್ಲದಿರುವ ಬಗ್ಗೆ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.ಪ್ರತಿ ಗ್ರಾಮಸಭೆಯಲ್ಲೂ ಈ ವಿಚಾರ ಪ್ರಸ್ತಾಪಿಸುತ್ತಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯತ್ ಪಿಡಿಒ, ಈ ಬಗ್ಗೆ ಜಿಲ್ಲಾ ಪಂಚಾಯತ್ ಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.ಕಣಿಯೂರು ಹೈಸ್ಕೂಲ್ ಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ -ಕಣಿಯೂರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಸೀತಾರಾಮ ಮಡಿವಾಳ ಮಾತನಾಡಿ, ಕಣಿಯೂರು ಹೈಸ್ಕೂಲ್ ಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಇದರ ಬಗ್ಗೆ ಹಲವು ಬಾರಿ ಗ್ರಾಮಸಭೆಯಲ್ಲಿ ಪ್ರಸ್ತಾಪಿಸಿದ್ದೇವೆ ಎಂದರು.

ಮೊದಲು ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಈ ಬಾರಿ ಸರಬರಾಜಾದ ಚಪ್ಪಲಿಯ ಗುಣಮಟ್ಟ ಕಳಪೆಯಾಗಿದ್ದು, ಇದರಲ್ಲಿ ಸರ್ಕಾರ ಕೋಟಿಗಟ್ಟಲೆ ಹಣ ನುಂಗಿದೆ ಎಂದು ಆರೋಪಿಸಿದರು.ಎಂಡೋಸಲ್ಪಾನ್ ಶಿಶು ಕೇಂದ್ರ ಆರಂಭದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಇಲ್ಲ – ಕಣಿಯೂರಿನಲ್ಲಿ ಎಂಡೋಸಲ್ಫಾನ್ ಶಿಶು ಕೇಂದ್ರ ಪ್ರಾರಂಭ ಮಾಡುವಾಗ ಗ್ರಾಮಸ್ಥರಿಗೆ ಯಾರಿಗೂ ತಿಳಿಸಿಲ್ಲ ಎಂದು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.ಮೊದಲೇ ಪ್ರಚಾರ ಮಾಡಿದ್ದರೆ ಒಳ್ಳೆಯದಿತ್ತು. ಪೇಪರ್ ನಲ್ಲಿ ಬಂದ ನಂತರವಷ್ಟೇ ಎಂಡೋಸಲ್ಫಾನ್ ಶಿಶು ಕೇಂದ್ರ ಪ್ರಾರಂಭವಾಗಿದೆ ಎಂದು ನಮಗೆ ಗೊತ್ತಾಯಿತು. ಮೊದಲೇ ತಿಳಿಸಿದ್ದರೆ ದೊಡ್ಡ ಮಟ್ಟದಲ್ಲಿ ಉದ್ಘಾಟನೆ ಮಾಡಿ ಕಾರ್ಯಕ್ರಮ ಮಾಡಬಹುದಿತ್ತು ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ಆರ್ ಸಾಲಿಯಾನ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ರಮೇಶ್ ಸ್ವಾಗತಿಸಿ, ಸಿಬ್ಬಂದಿ ಉಮೇಶ್ ವಾರ್ಡ್ ಸಭೆಯ ಬೇಡಿಕೆ ಹಾಗೂ ಜಮಾ ಖರ್ಚು ವಿವರ ಮಂಡಿಸಿ, ವಂದಿಸಿದರು.

LEAVE A REPLY

Please enter your comment!
Please enter your name here