ನೆರಿಯ ಗ್ರಾಮ ಪಂಚಾಯಿತಿ ಗ್ರಾಮ ಸಭೆ – ವಲಸೆ ಕಾರ್ಮಿಕರ ಬಗ್ಗೆ ನಿಗಾ ವಹಿಸಲು ಸೂಚನೆ, ಮೂಲ ಸೌಕರ್ಯಗಳ ಬಗ್ಗೆ ಗ್ರಾಮಸ್ಥರ ಆಗ್ರಹ

0

ನೆರಿಯ: ನೆರಿಯ ಗ್ರಾಮ ಪಂಚಾಯಿತಿಯ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಸೆ.23 ರಂದು ಪಂಚಾಯಿತಿ ಸಭಾಭವನದಲ್ಲಿ ಆಡಳಿತಾಧಿಕಾರಿ ಜೋಸೆಫ್ ಪಿ.ಎಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಚಂದ್ರಶೇಖರ ಅವರು ಸಭೆಯನ್ನು ಮುನ್ನಡೆಸಿದರು.ವಲಸೆ ಕಾರ್ಮಿಕರಿಂದ ಮಲೇರಿಯಾ ಆತಂಕ: ಗ್ರಾಮದಲ್ಲಿರುವ ಜಾರ್ಖಂಡ್ ಮತ್ತು ಬಿಹಾರ ರಾಜ್ಯದ ಕಾರ್ಮಿಕರ ಬಗ್ಗೆ ನಿಗಾ ವಹಿಸಬೇಕು. ಅವರಿಂದ ಮಲೇರಿಯಾ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿಂದೆ ಇಲ್ಲದಿದ್ದ ಮಲೇರಿಯಾ ಈಗ ತಾಲೂಕಿನಲ್ಲಿ 10 ಪ್ರಕರಣಗಳು ಪತ್ತೆಯಾಗಿವೆ.

ಎಸ್ಟೇಟ್ ಮಾಲೀಕರು ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದು ರಕ್ತ ಪರೀಕ್ಷೆ ಮಾಡಿಸಬೇಕು ಎಂದು ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತಿಳಿಸಿದರು.ಗ್ರಾಮಸ್ಥರು ಮಾತನಾಡಿ, ಅನೇಕ ಎಸ್ಟೇಟ್‌ಗಳಲ್ಲಿ ದಾಖಲೆಯಿಲ್ಲದ ಕಾರ್ಮಿಕರಿದ್ದು, ಪಂಚಾಯಿತಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಆಡಳಿತಾಧಿಕಾರಿ, ಪೊಲೀಸ್ ಇಲಾಖೆ ಗಮನ ಹರಿಸಬೇಕು, ಜೊತೆಗೆ ಎಸ್ಟೇಟ್ ಮತ್ತು ರೂಂ ಬಾಡಿಗೆ ನೀಡಿದ ಮಾಲೀಕರಿಗೆ ನೋಟಿಸ್ ನೀಡುವುದಾಗಿ ತಿಳಿಸಿದರು.

ಅಂಗನವಾಡಿ ದುರಸ್ತಿಗೆ ಆಗ್ರಹ: ಗ್ರಾಮಸ್ಥ ಕೇಶವ ಅವರು ಅಣಿಯೂರು ಅಂಗನವಾಡಿ ಕಟ್ಟಡ ಬೀಳುವ ಹಂತದಲ್ಲಿದೆ, ಪೌಷ್ಟಿಕ ಆಹಾರ ಸರಿಯಾಗಿ ಸಿಗುತ್ತಿಲ್ಲ, ಸ್ವಚ್ಛತೆ ಇಲ್ಲ, ಮಕ್ಕಳಿರುವಾಗ ಹಾವು ಬಂದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಇದಕ್ಕೆ ಅಂಗನವಾಡಿ ಮೇಲ್ವಿಚಾರಕಿ ಸ್ವಚ್ಛತೆಯ ಲೋಪ ಒಪ್ಪಿಕೊಂಡು, ಕಟ್ಟಡ ದುರಸ್ತಿ ಮಾಡುವುದಾಗಿ ಭರವಸೆ ನೀಡಿದರು.ಅಲಂಗಾಯಿ ಆಶ್ರಮ ಶಾಲೆ ಶಿಕ್ಷಕರು ಮಧ್ಯಾಹ್ನ 3 ಗಂಟೆಗೆ ಹೋಗುತ್ತಾರೆ, ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪವೂ ಸಭೆಯಲ್ಲಿ ಕೇಳಿಬಂತು.

ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಾತನಾಡಿ, ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 3 ಲಕ್ಷ, ಬಯಲು ಶಾಲೆಗೆ 3 ಲಕ್ಷ, ನೆರಿಯ ಅಂಗನವಾಡಿಗೆ 1.5 ಲಕ್ಷ, ಅಣಿಯೂರು ಅಂಗನವಾಡಿಗೆ 2.25 ಲಕ್ಷ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.

ಪ್ರಕಾಶ್ ಚಂದ್ರ ನೆಕ್ಕರೆ ಅವರು ನೆಕ್ಕರೆ ರಸ್ತೆ ಕಾಂಕ್ರಿಟೀಕರಣ, ದಾರಿದೀಪ, ಉಂಬಾಜೆ ಎಸಿ ಕಾಲೋನಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿದರು. ನೆರಿಯ ಮಸೀದಿ ಬಳಿ ವಿದ್ಯುತ್ ತಂತಿಗೆ ತಾಗಿರುವ ಮರಗಳನ್ನು ತೆರವುಗೊಳಿಸಲು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಸಭೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ವಸಂತಿ, ಮಾಜಿ ಬಾಬು ಗೌಡ, ರಮೇಶ್ ಕೆ.ಎಸ್, ಮಾಲತಿ ವಿವಿಧ ಇಲಾಖಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂಚಾಯಿತಿ ಸಿಬ್ಬಂದಿ ಮಧುಮಾಲ, ಮೀನಾಕ್ಷಿ ಅವರು ಸಹಕರಿಸಿದರು. ಅಭಿವೃದ್ಧಿ ಅಧಿಕಾರಿ ಅಜಿತ್ ಅವರು ವಾರ್ಡ್ ಸಭೆಯ ಬೇಡಿಕೆ ಮತ್ತು ಜಮಾ-ಖರ್ಚಿನ ವಿವರ ಮಂಡಿಸಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here