ಕಡಿರುದ್ಯಾವರ ಬೊಳ್ಳೂರುಬೈಲ್‌ನಲ್ಲಿ ೭ ಮನೆಗಳಿಗೆ ತೆರವು ಮಾಡಲು ನೋಟಿಸ್ ಜಾರಿ-ವಿಚಾರಣೆಗೆ ಹೋದವರನ್ನು ವಾಪಸ್ ಕಳುಹಿಸಿದ ಅಧಿಕಾರಿಗಳು-ಕಾನೂನು ಹೋರಾಟಕ್ಕೆ ಸಜ್ಜು

0

ಬೆಳ್ತಂಗಡಿ,: ಇದು ಅರಣ್ಯವೋ, ನಾಡೋ ಎಂಬ ಗೊಂದಲದಲ್ಲೇ ಅರ್ಧ ಶತಮಾನ ಕಳೆದಿದೆ. ಹಿರಿಯರು ಕಾಡು ಕಡಿದು ಕಲ್ಲು ಹೆಕ್ಕಿ, ಮಣ್ಣನ್ನು ಹದ ಮಾಡಿ ಕೃಷಿ ಭೂಮಿಯಾಗಿ ಪರಿವರ್ತಿಸಿ ಮನೆ ಕಟ್ಟಿ ಮಕ್ಕಳಿಗೆ ಬದುಕು ಕಟ್ಟಿ ಕೊಟ್ಟಿದ್ದಾರೆ. ಈಗ ಆ ಮಕ್ಕಳು, ಮೊಮ್ಮಕ್ಕಳು ಅದೇ ಮಣ್ಣನ್ನು ನಂಬಿ ಬದುಕುತ್ತಿರುವಾಗಲೇ ನೀವು ಇರುವುದು ಅರಣ್ಯ ಭೂಮಿಯಲ್ಲಿ ಅದನ್ನು ತೆರವುಗೊಳಿಸಿ ಎಂದು ನೋಟಿಸ್ ಬಂದಿದೆ. ಇದು ಕಡಿರುದ್ಯಾವರ ಗ್ರಾಮದ ಬೊಳ್ಳೂರು ಬೈಲ್‌ನ ೩೫ಕ್ಕೂ ಹೆಚ್ಚು ಕುಟುಂಬಗಳ ಇಂದಿನ ದಾರುಣ ಕತೆ.
ಬೊಳ್ಳೂರು ಬೈಲ್ ಬೆಳ್ತಂಗಡಿ ತಾಲೂಕಿನ ಕುಗ್ರಾಮ. ಇಲ್ಲಿ ೩೫ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಎಲ್ಲರಿಗೂ ಕೃಷಿಯೇ ಜೀವನ. ಒಂದು ಕಾಲದಲ್ಲಿ ಭತ್ತ, ತರಕಾರಿ ಬೆಳೆಯುತ್ತಿದ್ದವರು. ಈಗ ಅಡಿಕೆ, ತೆಂಗು, ರಬ್ಬರ್ ಬೆಳೆದು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ಕೆಲವರಿಗೆ ಸರ್ಕಾರವೇ ೧೯೭೯ರಲ್ಲೇ ಹಕ್ಕುಪತ್ರ ನೀಡಿದೆ. ೧೯೮೯ರಲ್ಲಿ ಉಳಿದವರು ಹಕ್ಕು ಪತ್ರಕ್ಕೆ ಅರ್ಜಿ ಹಾಕಿದ್ದಾರೆ. ಆದರೆ ಅರಣ್ಯ ಇಲಾಖೆ ಆಕ್ಷೇಪದ ನೆಪದಲ್ಲಿ ಆ ಅರ್ಜಿಗಳು ಇಂದಿಗೂ ಕಡತದಲ್ಲೇ ಉಳಿದಿವೆ.
೭ ಮನೆಗಳಿಗೆ ಮೊದಲು ನೋಟಿಸ್: ಇಷ್ಟು ವರ್ಷ ಯಾವುದೇ ತೊಂದರೆ ಇರಲಿಲ್ಲ. ಆದರೆ ಕಳೆದ ತಿಂಗಳು ಏಕಾಏಕಿ ೭ ಮನೆಗಳಿಗೆ ಅರಣ್ಯ ಇಲಾಖೆಯಿಂದ ನೋಟಿಸ್ ಬಂದಿದೆ. `ಅರಣ್ಯ ಭೂಮಿಯನ್ನು ಅತಿಕ್ರಮಿಸಿದ್ದೀರಿ, ಏಕೆ ತೆರವುಗೊಳಿಸಬಾರದು ? ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ. ಆಗಸ್ಟ್‌ನಲ್ಲಿ ಎರಡನೇ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ನೋಟಿಸ್ ಕಂಡು ಬೆಚ್ಚಿದ ನಿವಾಸಿಗಳು ತಮ್ಮ ಪಹಣಿ, ಆಧಾರ್, ಹಕ್ಕುಪತ್ರದ ದಾಖಲೆ ಹಿಡಿದು ಮಂಗಳೂರು ಅರಣ್ಯ ಕಚೇರಿಗೆ ಹೋದರೆ ಅಲ್ಲಿ ಅಧಿಕಾರಿಗಳು ಇಂದು ಬೇರೆ ಕೆಲಸವಿದೆ’ ಎಂದು ವಾಪಸ್ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ೩೫ಕ್ಕೂ ಹೆಚ್ಚು ಮನೆಗಳನ್ನು ಗುರುತಿಸಿ ಇದೀಗ ಜನರು ದಂಗೆ ಏಳುವ ದೃಷ್ಟಿಯಿಂದ ತಿಂಗಳಿಗೆ ಒಂದೊಂದು ಮನೆಗೆ ನೋಟಿಸ್ ಕಳುಹಿಸಿ ಕೊಡುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.
ಮಣ್ಣೇ ಬದುಕು, ಮಣ್ಣೇ ದೇವರು: ಬೊಳ್ಳೂರುಬೈಲ್‌ನವರಿಗೆ ಈ ಭೂಮಿ ಕೇವಲ ಜಾಗವಲ್ಲ. ಅದೇ ಅವರ ಬದುಕು. ತಲೆತಲಾಂತರಗಳಿಂದ ಬೆವರು ಸುರಿಸಿ ಕಟ್ಟಿದ ಬದುಕು. ಒಂದು ಕಡೆ ಮಕ್ಕಳ ವಿದ್ಯಾಭ್ಯಾಸ, ಮದುವೆಗಾಗಿ ಮಾಡಿದ ಸಾಲ, ಇನ್ನೊಂದು ಕಡೆ ತೋಟದ ನಿರ್ವಹಣೆ. ಈಗ ಭೂಮಿ ಬಿಟ್ಟು ಕೊಡಿ ಎಂದರೆ ಎಲ್ಲಿಗೆ ಹೋಗಬೇಕು ಎಂಬುದು ಅವರ ಪ್ರಶ್ನೆ. ನಮ್ಮ ಹಿರಿಯರು ಕಾಡು ಪ್ರಾಣಿಗಳೊಂದಿಗೆ ಹೋರಾಡಿ ಈ ಭೂಮಿಯನ್ನು ಕೃಷಿ ಭೂಮಿ ಮಾಡಿದ್ದಾರೆ. ನಾವು ಹುಟ್ಟಿದ್ದು, ಬೆಳೆದಿದ್ದು ಇಲ್ಲೇ. ಈಗ ಅರಣ್ಯ ಎಂದರೆ ನಮ್ಮ ಗತಿ ಏನು ಎಂದು ಹಿರಿಯರೊಬ್ಬರು ಕಣ್ಣೀರಿಟ್ಟಿದ್ದಾರೆ.
ಹೋರಾಟಕ್ಕೆ ಸಿದ್ಧತೆ: ಸದ್ಯ ಇಲ್ಲಿನ ನಿವಾಸಿಗಳು ಎರಡು ಹಂತದ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಮೊದಲನೆಯದಾಗಿ ನೋಟಿಸ್‌ಗೆ ಕಾನೂನುಬದ್ಧ ಉತ್ತರ ನೀಡಿ ತಮ್ಮ ಬಳಿ ಇರುವ ಎಲ್ಲ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಿ ವಿಚಾರಣೆ ಎದುರಿಸುವುದು. ಒಂದು ವೇಳೆ ಇಲಾಖೆ ತೆರವಿಗೆ ಮುಂದಾದರೆ ನ್ಯಾಯಾಲಯದ ಮೊರೆ ಹೋಗುವುದು ಎಂದು ಇಲ್ಲಿನ ಜನರು ನಿರ್ಧರಿಸಿದ್ದಾರೆ. ಜತೆಗೆ ನಮಗೆ ದಯಾಮರಣ ನೀಡಿ ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಲೂ ನಿರ್ಧರಿಸಿದ್ದಾರೆ.

ದಾಖಲೆ ಸಲ್ಲಿಸಬೇಕು: ಅಗತ್ಯ ದಾಖಲೆ ಹೊಂದಿರುವವರಿಗೆ ಯಾವುದೇ ಸಮಸ್ಯೆ ಇಲ್ಲ ನೋಟಿಸ್ ಬಂದಿರುವವರು ತಮ್ಮಲ್ಲಿರುವ ದಾಖಲೆಗಳನ್ನು ಕೂಡಲೇ ಇಲಾಖೆಗೆ ಸಲ್ಲಿಸಬೇಕು. -ಮಹೇಶ್ ದೇವಾಡಿಗ,
ಆರ್ ಎಫ್ ಓ ಬೆಳ್ತಂಗಡಿ

   ಶಾಸಕರು ಕಾಳಜಿ ತೋರಬೇಕು

ಮನೆ ಕಟ್ಟಿಕೊಂಡವರ ಮನೆ ತೆರವು ಮಾಡಲು ಹೇಳಿದ್ದಾರೆ. ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳ ಪರಿಸ್ಥಿತಿ ಏನಾಗಬೇಕು. ನಮ್ಮ ಹಿರಿಯರು ಕಷ್ಟಪಟ್ಟು ಈ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸಿದ್ದಾರೆ. ರಬ್ಬರ್, ಅಡಿಕೆ, ಮತ್ತು ಇನ್ನಿತರ ಕೃಷಿಯನ್ನು ಮಾಡಿಕೊಂಡಿzವೆ. ನಮ್ಮ ಬದುಕಿಗೆ ಕೃಷಿಯೇ ಆಧಾರ. ಹೀಗಾಗಿ ನಮ್ಮ ಭೂಮಿಯನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಮುಂದಿನ ದಿನ ನಾವು ಎಲ್ಲರೂ ಸೇರಿ ತಾಲೂಕು ಕಚೇರಿ ಮುಂದೆ ಉಪವಾಸ ಸತ್ಯಗ್ರಾಹ ಮಾಡುತ್ತೇವೆ. ಶಾಸಕರು ನಮ್ಮ ಬಡ ಕುಟುಂಬದ ಬಗ್ಗೆ ಕಾಳಜಿ ತೋರಿಸಬೇಕು, ನಮ್ಮ ಭೂಮಿಗೆ ನ್ಯಾಯ ಒದಗಿಸಿಕೊಡಬೇಕು. ಸಂಬಂಧಪಟ್ಟ ಇಲಾಖೆ ನ್ಯಾಯ ಒದಗಿಸಬೇಕು.
-ಗೋಪಣ್ಣ ಪೂಜಾರಿ ಬೊಳ್ಳೂರು

LEAVE A REPLY

Please enter your comment!
Please enter your name here