







ಬೆಳ್ತಂಗಡಿ: ನಾನು ಅರೆಸ್ಟ್ ಆಗುವುದಕ್ಕಿಂತ ಮುಂಚೆ ನಿನ್ನ ತಲೆ ತೆಗಿತೀನಿ, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಯುವತಿಯೋರ್ವರಿಗೆ ಬೆದರಿಕೆ ಒಡ್ಡಿದ ಆರೋಪದಡಿ
ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗಾಂಧಿನಗರದ ಮೊಹಮ್ಮದ್ ನೌಷಾದ್ ಎಂಬಾತನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ೭೯/೨೦೨೬ರಂತೆ ಬಿಎನ್‌ಎಸ್ ೧೨೬,(೨), ೭೯, ೩೫,೨, ೩೫೧(೩)ರಡಿ ಪ್ರಕರಣ ದಾಖಲಾಗಿದೆ.


ಕೇಸು ದಾಖಲು: ಮಂಗಳೂರು ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ನಂದಿನಿ(೨೫) ಅವರು ಮೆಡಿಕಲ್ ಕಾಲೇಜಿನಲ್ಲಿ ಸ್ವಾಫ್ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಅವರ ಜೊತೆಗೆ ಚಂದನಾ ಮತ್ತು ಅದಿತ್ಯ ಎಂಬವರು ಕೂಡಾ ಕೆಲಸ ಮಾಡುತ್ತಿದ್ದಾರೆ. ನಂದಿನಿ ಅವರು ೨೦೨೬ರ ಆ.೧೬ರಂದು ಮೈಸೂರಿಗೆ ಹೋಗುವಾಗ ತನ್ನ ಬಾಡಿಗೆ ಮನೆಯಲ್ಲಿರುವ ನಾಯಿಗೆ ಆಹಾರ ನೀಡಲು ತಿಳಿಸಿ ಮನೆಯ ಬೀಗದ ಕೀಯನ್ನು ಚಂದನಾ ಅವರಿಗೆ ಕೊಟ್ಟು ಹೋಗಿದ್ದಾರೆ. ಆ.೧೮ರಂದು ಮೈಸೂರಿನಿಂದ ವಾಪಸ್ ತನ್ನ ಬಾಡಿಗೆ ಮನೆಗೆ ಬಂದ ನಂದಿನಿ ಅವರು ಮೆಡಿಕಲ್ ಕಾಲೇಜಿಗೆ ಬೆಳಿಗ್ಗೆ ೯ ಗಂಟೆಗೆ ಕೆಲಸಕ್ಕೆ ಹೋಗುವಾಗ ಚಂದನಾ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಆದಿತ್ಯ ಅವರು ತಾನು ಚಂದನಾ ಅವರೊಂದಿಗೆ ನಾಯಿಗೆ ಆಹಾರ ಹಾಕಲು ಹೋದಾಗ ತನ್ನ ಬಾಯ್‌ಫ್ರೆಂಡ್ ಮೊಹಮ್ಮದ್ ನೌಶಾದ್ ಮನೆಗೆ ಬಂದಿರುವುದಾಗಿ ತಿಳಿಸಿದ್ದಾರೆ. ನಂತರ ನಂದಿನಿ ಅವರನ್ನು ಚಂದನಾ ಅವರು ಭೇಟಿಯಾಗಿ ತಾನು ಆ.೧೭ರಂದು ನಾಯಿಗೆ ಆಹಾರ ನೀಡಲು ಹೋಗುವಾಗ ತನ್ನೊಂದಿಗೆ ಆದಿತ್ಯ ಅವರು ಸಹ ಬಂದಿದ್ದಳು. ತಾವು ಬೆಳಿಗ್ಗೆ ೧೦ ಗಂಟೆಗೆ ಮನೆಗೆ ಹೋಗಿ ನಾಯಿಗೆ ಆಹಾರ ನೀಡಿ ಅಲ್ಲಿಯೇ ವಿಶ್ರಾಂತಿ ಮಾಡುತ್ತಿರುವಾಗ ಸಂಜೆ ೪-೩೦ಕ್ಕೆ ಆದಿತ್ಯಳ ಬಾಯ್‌ಫ್ರೆಂಡ್ ಮೊಹಮ್ಮದ್ ನೌಶಾದ್ ಎಂಬಾತ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ನನ್ನೊಂದಿಗೆ ಮತ್ತು ಆದಿತ್ಯಳೊಂದಿಗೆ ಗಲಾಟೆ ಮಾಡಿ ನಿಮ್ಮದು ಇದೇನಾ ಬೆಡ್‌ರೂಮ್' ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಅಲ್ಲದೆ ಅವನು ಆದಿತ್ಯಾಳನ್ನು ಹೊರಗಡೆ ಕರೆದುಕೊಂಡು ಹೋಗಿದ್ದಾನೆ ಎಂದು ತಿಳಿಸಿದ್ದಾರೆ. ನಂದಿನಿ ಅವರು ಈ ಬಗ್ಗೆ ಆದಿತ್ಯಾಳನ್ನು ವಿಚಾರಿಸಲು ಅವರ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆ ವೇಳೆ ಓರ್ವ ಗಂಡಸು ಕಾಲ್‌ಪಿಕ್ ಮಾಡಿ ಮಾತನಾಡಿದ್ದಾರೆ. ನಂದಿನಿ ಅವರು ಮಾತನಾಡಿ ಆದಿತ್ಯ ಇಲ್ಲವಾ’ ಎಂದು ಕೇಳಿದಾಗ ಆತ ಆದಿತ್ಯನ ಬಾಯ್‌ಫ್ರೆಂಡ್ ಎಂದು ಹೇಳಿದ್ದಾನೆ. ಆಗ ನಂದಿನಿ ಅವರು ಆತನಲ್ಲಿ `ನೀವು ಯಾಕೆ ನನ್ನ ಮನೆಗೆ ಬಂದಿದ್ದು ಚಂದನಾಳಿಗೆ ಯಾಕೆ ಬೈದಿದ್ದು’ ಎಂದು ಕೇಳಿದ್ದಾರೆ. ಆ ಬಳಿಕ ಆತ ಆದಿತ್ಯಳ ಮೊಬೈಲ್ ಮತ್ತು ಆತನ ಮೊಬೈಲ್‌ನಿಂದ ನಂದಿನಿ ಹಾಗೂ ಚಂದನಾ ಅವರಿಗೆ ಪದೇ ಪದೇ ಫೋನ್ ಕರೆಗಳನ್ನು ಮಾಡಿ ತೊಂದರೆ ನೀಡಲು ಪ್ರಾರಂಭ ಮಾಡಿದ್ದಾನೆ. ಮತ್ತು ನಂದಿನಿ ಅವರಿಗೆ ಅದೇ ದಿನ ಸಂಜೆ ಫೋನ್ ಕರೆ ಮಾಡಿ ಮಾತನಾಡಿ ಅಸಹ್ಯವಾಗಿ ಬೈದಿದ್ದಾನೆ. ಆ.೧೯ರಂದು ನಂದಿನಿ ಅವರು ತನ್ನ ಸ್ನೇಹಿತೆಯರೊಂದಿಗೆ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ಮೊಹಮ್ಮದ್ ನೌಶಾದ್ ವಿರುದ್ಧ ದೂರು ನೀಡಿದಾಗ ಆತ ನಂದಿನಿ ಅವರ ವಾಟ್ಸಾಪ್‌ಗೆ ವಾಯ್ಸ್ ರೆಕಾರ್ಡ್ ಮೆಸೇಜ್ ಕಳುಹಿಸಿ ಕೆಟ್ಟ ಕೆಟ್ಟದಾಗಿ ಬೈದಿದ್ದಾನೆ. ನನಗೆ ಹೆದರಿಕೆ ಇಲ್ಲ. ನಾನು ಅರೆಸ್ಟ್ ಆಗುವುದಕ್ಕಿಂತ ಮುಂಚೆ ನಿನ್ನ ತಲೆ ತಗಿತೀನಿ. ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆ.೨೦ರಂದು ಬಿಎನ್‌ಎಸ್ ೧೨೬(೨), ೭೯, ೩೫,೨, ೩೫೧(೩)ರಂತೆ ಮೊಹಮ್ಮದ್ ನೌಷಾದ್ ವಿರುದ್ಧ ಪ್ರಕರಣ ದಾಖಲಾಗಿದೆ.
ಜಾಮೀನು ಮಂಜೂರು: ಪ್ರಕರಣ ದಾಖಲಾದರೂ ನೌಷಾದ್ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿಲ್ಲ ಎಂದು ನಂದಿನಿ ಅವರು ಹಿಂದೂ ಸಂಘಟನೆಗಳ ಪ್ರಮುಖರಿಗೆ ಮಾಹಿತಿ ನೀಡಿದ್ದರು. ನಂತರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತನಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿದ್ದರು. ಈ ವಿಚಾರ ರಾಜ್ಯಮಟ್ಟದ ದೃಶ್ಯ ಮಾಧ್ಯಮಗಳಲ್ಲಿ ಮತ್ತು ಮುದ್ರಣ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದ್ದು ಭಾರೀ ಚರ್ಚೆಗೆ ಗ್ರಾಸ ಒದಗಿಸಿತ್ತು. ಈ ಮಧ್ಯೆ ಮೊಹಮ್ಮದ್ ನೌಷಾದ್ ಅವರು ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.








